ನಂಜನಗೂಡು: ಸರ್ಕಾರಿ ಶಾಲಾ ಮಕ್ಕಳಿಗೆ ಪ್ರತಿನಿತ್ಯ ಪೌಷ್ಟಿಕ ಆಹಾರ ತಯಾರಿಸಿ ಬಿಸಿಯೂಟ ನೀಡುವ ಅಕ್ಷರ ದಾಸೋಹ ಕಾರ್ಯಕ್ರಮ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಾರ್ಥಕ ಕಾರ್ಯಕ್ರಮವಾಗಿದೆ ಎಂದು ಅಕ್ಷರದಾಸೋಹ ಸಹಾಯಕ ನಿರ್ದೇಶಕ ಬಿ.ಸೋಮಶೇಖರ್ ಹೇಳಿದರು.

ನಂಜನಗೂಡು ತಾಲ್ಲೂಕಿನ ದೊಡ್ಡಕವಲಂದೆ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಜಿಲ್ಲಾ ಪಂಚಾಯತ್ ಮೈಸೂರು, ಪ್ರಧಾನ ಮಂತ್ರಿ ಪೋಷಣ್ ನಿರ್ಮಾಣ ಯೋಜನೆ, ಮೈಸೂರು ಜಿಲ್ಲೆ, ತಾಲ್ಲೂಕು ಪಂಚಾಯಿತಿ ನಂಜನಗೂಡು ಇವರ ವತಿಯಿಂದ ಅಡುಗೆ ಸಿಬ್ಬಂದಿಗಳ ಪುನಶ್ಚೇತನ ತಾಲ್ಲೂಕು ಮಟ್ಟದ ತರಬೇತಿ ಕಾರ್ಯಾಗಾರವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಅಡುಗೆ ಸಿಬ್ಬಂದಿಗಳ ಪುನಶ್ಚೇತನ ತರಬೇತಿ ಕಾರ್ಯಾಗಾರವು ಬಿಸಿಯೂಟ ತಯಾರಿಸುವ ಸಿಬ್ಬಂದಿಗಳಿಗೆ ನೈರ್ಮಲ್ಯ, ಪೌಷ್ಟಿಕಾಂಶ, ಸುರಕ್ಷತೆ ಮತ್ತು ಅಡುಗೆಯ ಗುಣಮಟ್ಟವನ್ನು ಸುಧಾರಿಸಲು ಅಡುಗೆ ಸಿಬ್ಬಂದಿಗಳಿಗೆ ಆಯೋಜಿಸಲಾಗಿದೆ. ಅಡುಗೆ ಸಿಬ್ಬಂದಿಯ ಜವಾಬ್ದಾರಿಗಳು, ಅಡುಗೆ ಮನೆಯ ಸ್ವಚ್ಛತೆ, ಮತ್ತು ಅಕ್ಷರ ದಾಸೋಹದ ಮಾರ್ಗಸೂಚಿಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.

ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಿಸಲು ಬಿಸಿಯೂಟ ಕಾರ್ಯಕ್ರಮ ಸಹಕಾರಿಯಾಗಿದೆ. ಶಾಲೆಗಳಲ್ಲಿ ಪಾಠದ ಜತೆಗೆ ಮಧ್ಯಾಹ್ನದ ಬಿಸಿ ಊಟ ನೀಡುತ್ತಿರುವುದು ಮಕ್ಕಳಿಗೆ ತಾಯಂದಿರ ರೀತಿಯಲ್ಲಿ ಅಡುಗೆಮಾಡಿ ಬಡಿಸುತ್ತಿರುವ ಅಕ್ಷರ ದಾಸೋಹ ಅಡುಗೆ ಸಿಬ್ಬಂದಿಯ ಕಾರ್ಯ ಪ್ರಶಸಂನೀಯವಾಗಿದೆ ಎಂದರು.

ನಂತರ ಪತ್ರಕರ್ತ ಸಿ.ಎಂ ಸುಗಂಧರಾಜು ಮಾತನಾಡಿ, ಅಡುಗೆ ಸಿಬ್ಬಂದಿಗಳು ತಮ್ಮ ಕುಟುಂಬದ ಒತ್ತಡದ ಬದುಕಿನ ನಡುವೆಯೂ ಶಾಲಾ ಮಕ್ಕಳಿಗೆ ರುಚಿಕರವಾಗಿ ಅಡುಗೆ ಮಾಡುತ್ತಾರೆ. ಆದರೆ, ಅವರಿಗೆ ವೇತನ ಕಡಿಮೆ ಇರುವುದರಿಂದ ಜೀವನ ಸಾಗಿಸಲು ತುಂಬಾ ಕಷ್ಟಕರವಾಗಿದೆ. ರಾಜ್ಯ ಸರ್ಕಾರ ಕೂಡಲೇ ಅಡುಗೆ ಸಿಬ್ಬಂದಿಗಳಿಗೆ ವೇತನವನ್ನು ಹೆಚ್ಚಳ ಮಾಡಬೇಕಾಗಿದೆ. ಗ್ರಾಮೀಣ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕಡಿಮೆಯಾಗುತ್ತಿರುವುದರಿಂದ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪುತ್ತಿವೆ.

ಬಣ್ಣ ಬಣ್ಣದ ಖಾಸಗಿ ಶಾಲೆಗಳಿಗೆ ಜನರು ಮನಸೋತಿದ್ದಾರೆ. ಕಷ್ಟಪಟ್ಟು ದುಡಿದು ಪ್ರತಿಷ್ಠೆಗಾಗಿ ಖಾಸಗಿ ಶಾಲೆಗಳಿಗೆ ಪೋಷಕರು ಸೇರಿಸುತ್ತಿರುವುದು ದುರಂತ. ಸರ್ಕಾರಿ ಶಾಲೆಗಳಲ್ಲಿ ಅತಿ ಹೆಚ್ಚು ನುರಿತ ಶಿಕ್ಷಕರಿದ್ದಾರೆ. ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದಾರೆ. ಅಲ್ಲದೆ ಸರ್ಕಾರದಿಂದ ಶಾಲಾ ಮಕ್ಕಳಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದ್ದು, ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲು ಮಾಡುವ ಮೂಲಕ ನಿಮ್ಮೂರಿನ ಇತಿಹಾಸವಿರುವ ಸರ್ಕಾರಿ ಶಾಲೆಗಳನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ದಾಗಿದೆ ಎಂದರು.

ಇನ್ನೂ ದೇವನೂರು, ಹೆಮ್ಮರಗಾಲ, ದೊಡ್ಡಕವಲಂದೆ, ಬದನವಾಳು ಕ್ಲಸ್ಟರ್ ಮಟ್ಟದ ಅಡುಗೆ ಸಿಬ್ಬಂದಿಗಳಿಗೆ ಪುನಶ್ಚೇತನ ತರಬೇತಿ ಕಾರ್ಯಾಗಾರವನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲರಾದ ಹಸೀನಾ ತಾಜ್, ಆರೋಗ್ಯ ಶಿಕ್ಷಣ ಅಧಿಕಾರಿ ಸಜ್ಜನ್ ರಾವ್, ಪತ್ರಕರ್ತ ಸಿ.ಎಂ ಸುಗಂಧರಾಜು, ಶಿಕ್ಷಣ ಇಲಾಖೆಯ ಸಿಆರ್ ಪಿ ಗಳಾದ ಚಂದ್ರಶೇಖರ್, ನಾರಾಯಣಸ್ವಾಮಿ, ಗಂಗಾಧರ್, ಅಕ್ಷರ ದಾಸೋಹದ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಮಂಜುಳಾ, ಸಿಬ್ಬಂದಿಗಳಾದ ನೀಲಮ್ಮ, ಸೌಭಾಗ್ಯ ಸೇರಿದಂತೆ ಅಡುಗೆ ಸಿಬ್ಬಂದಿಗಳು ಹಾಜರಿದ್ದರು.