ನಂಜನಗೂಡು: ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿಗೆ ಶೇ.93.96 ರಂದು ಫಲಿತಾಂಶ ಬಂದಿದ್ದು, ಆದರ್ಶ ವಿದ್ಯಾಲಯದ ಡಿ.ಎಂ ಚೈತ್ರ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ನಂಜನಗೂಡು ತಾಲ್ಲೂಕಿನ 19 ಪರೀಕ್ಷಾ ಕೇಂದ್ರಗಳಲ್ಲಿ ಸುಮಾರು 4339 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 4077 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 262 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.

ನಂಜನಗೂಡು ತಾಲ್ಲೂಕಿನ ದೇಬೂರು ಗ್ರಾಮದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ದೇವನೂರು ಗ್ರಾಮದ ಮಹೇಶ್ ನಾಯಕ ಮತ್ತು ಲಕ್ಷ್ಮೀ ದಂಪತಿಗಳ ಪುತ್ರಿ ಡಿ.ಎಂ ಚೈತ್ರ 625ಕ್ಕೆ 620 ಅಂಕಗಳನ್ನು ಗಳಿಸುವ ಮೂಲಕ ತಾಲ್ಲೂಕಿಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಕಳೆದ ಬಾರಿ ಮೂರನೇ ಸ್ಥಾನದಲ್ಲಿದ್ದ ನಂಜನಗೂಡು, ಈ ಬಾರಿ ಆರನೇ ಸ್ಥಾನಕ್ಕೆ ಕುಸಿತ ಕಂಡಿದೆ.