News Karnataka Kannada
Monday, April 29 2024
ಮೈಸೂರು

ಎಚ್.ಡಿ.ಕೋಟೆ ವ್ಯಾಪ್ತಿಯಲ್ಲಿ ನಿಲ್ಲದ ಕಾಡಾನೆ ಹಾವಳಿ

ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಅರಣ್ಯದಲ್ಲಿರುವ ವನ್ಯ ಪ್ರಾಣಿಗಳು ಅದರಲ್ಲೂ ಕಾಡಾನೆಗಳು ನೀರು ಮೇವು ಅರಸಿಕೊಂಡು ನೇರವಾಗಿ ರೈತರ ಜಮೀನಿಗೆ ನುಗ್ಗಲು ಆರಂಭಿಸಿದ್ದು, ರೈತರು ಆತಂಕದಲ್ಲಿ ದಿನ ಕಳೆಯುವಂತಾಗಿದೆ.
Photo Credit : By Author

ಎಚ್.ಡಿ.ಕೋಟೆ: ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಅರಣ್ಯದಲ್ಲಿರುವ ವನ್ಯ ಪ್ರಾಣಿಗಳು ಅದರಲ್ಲೂ ಕಾಡಾನೆಗಳು ನೀರು ಮೇವು ಅರಸಿಕೊಂಡು ನೇರವಾಗಿ ರೈತರ ಜಮೀನಿಗೆ ನುಗ್ಗಲು ಆರಂಭಿಸಿದ್ದು, ರೈತರು ಆತಂಕದಲ್ಲಿ ದಿನ ಕಳೆಯುವಂತಾಗಿದೆ.

ಈಗಾಗಲೇ ಕಾಡಂಚಿನ ಗ್ರಾಮಗಳಲ್ಲಿ ಮಾನವ ಹಾಗೂ ವನ್ಯಜೀವಿಗಳ ಸಂಘರ್ಷ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಕಾಡಾನೆ, ಹುಲಿ, ಚಿರತೆಗಳ ದಾಳಿಗೆ ರೈತರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅರಣ್ಯ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡರೂ ಅರಣ್ಯದಿಂದ ನಾಡಿಗೆ ಬರುವ ವನ್ಯಪ್ರಾಣಿಗಳನ್ನು ನಿಯಂತ್ರಿಸುವುದು ಕಷ್ಟವಾಗಿದೆ.

ಎಚ್.ಡಿ.ಕೋಟೆ ಮತ್ತು ಸರಗೂರು ಅವಳಿ ತಾಲೂಕಿನ ಹಲವು ಗ್ರಾಮಗಳು ಅರಣ್ಯಕ್ಕೆ ಹೊಂದಿಕೊಂಡಂತ ಇರುವುದರಿಂದ ಕಾಡುಪ್ರಾಣಿಗಳ ದಾಳಿಗೆ ಆಗಾಗ್ಗೆ ಜನ ಬಲಿಯಾಗುತ್ತಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಕಬ್ಬೇಪುರ ಹಾಡಿಯ ಅರಣ್ಯ ಇಲಾಖೆ ಗಾರ್ಡ್ ರಾಜು ಎಂಬುವರನ್ನು ಬೆಳ್ಳಂ ಬೆಳಿಗ್ಗೆ ಕರ್ತವ್ಯ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ ಮಾಡಿ ದಾಳಿ ತುಳಿದು ಹತ್ಯೆಗೈದಿತ್ತು.

ಇಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿದ್ದರೂ ಅದನ್ನು ತಡೆಯಲು ಅರಣ್ಯ ಇಲಾಖೆ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳದೇ ಓಬಿರಾಯನ ಕಾಲದ ತಂತ್ರಗಳನ್ನು ಅಳವಡಿಸಿಕೊಂಡು ಅದರಲ್ಲೂ ಆಯ್ದ ಸ್ಥಳಗಳಲ್ಲಿ ಬೆಂಕಿ ಹಾಕಿ ಆನೆ ಕಾವಲು ಕಾಯುವುದು ಮುಂದುವರೆಯುತ್ತಿದೆ.

ಈ ನಡುವೆ ತಾಲೂಕಿನ ಕೆ.ಎಡತೊರೆ ಗ್ರಾಮದ ರೈತ ಗಣೇಶ್ ಮತ್ತು ಇನ್ನಿತರ ರೈತರ ಜಮೀನುಗಳಲ್ಲಿ ಒಂಟಿ ಸಲಗ ಕಳೆದ ಆರೇಳು ದಿನದಿಂದ ಪದೇ ಪದೇ ಕಾಣಿಸಿಕೊಂಡು ರೈತರಲ್ಲಿ ಭಯವನ್ನುಂಟು ಮಾಡಿದೆ. ಈಗಂತೂ ರಾತ್ರಿಯಾಗುತ್ತಿದ್ದಂತೆಯೇ ಜಮೀನುಗಳಿಗೆ ಲಗ್ಗೆ ಇಡುವ ಒಂಟಿ ಆನೆ ಮುಂಜಾನೆ 7 ಗಂಟೆಯಾದರೂ ಜಮೀನು ಬಿಟ್ಟು ಕದಲದ ಪರಿಣಾಮ ಇಲ್ಲಿನ ರೈತರು ತಮ್ಮ ಹೊಲದಲ್ಲಿ ಈಗಷ್ಟೇ ನಾಟಿ ಮಾಡಿರುವ ಶುಂಠಿ, ಬಾಳೆ ಸೇರಿದಂತೆ ರಾಗಿ ಜೋಳದ ಬೆಳೆಗಳಿಗೆ ನೀರು ಕಟ್ಟಲು ತೆರಳಲು ಹೆದರುತ್ತಿದ್ದಾರೆ.

ಎಚ್.ಡಿ.ಕೋಟೆ ತಾಲೂಕಿನ ವೀರನಹೊಸಳ್ಳಿ, ಮೇಟಿಕುಪ್ಪೆ ವನ್ಯಜೀವಿ ವಲಯದ ವ್ಯಾಪ್ತಿಯಲ್ಲಿ ಅಣ್ಣೂರು, ಭೀಮನಹಳ್ಳಿ, ಚೊಕ್ಕೋಡನಹಳ್ಳಿ, ಮೇಟಿಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಅನೇಕ ಗ್ರಾಮಗಳು ಕಾಡಂಚಿನ ಗ್ರಾಮಗಳಾಗಿದ್ದು, ಇಲ್ಲಿನ ರೈತರು ಕಷ್ಟಪಟ್ಟು ವ್ಯವಸಾಯ ಮಾಡಿದರೂ, ಬೆಳೆಗಳ ರಕ್ಷಣೆಗೆ ದೊಡ್ಡ ಸವಾಲು ಎನಿಸಿದೆ, ಆನೆ ಹಾವಳಿ ತಡೆಗೆ ವೈಜ್ಞಾನಿಕ ಟ್ರಂಚ್ ನಿರ್ಮಾಣದ ಜತೆಗೆ ವನ್ಯಜೀವಿ ವಲಯದಿಂದ ಕಾಡಾನೆಗಳು ಹೊರಗಡೆ ಬಾರದಂತೆ ರೈಲು ಕಂಬಿ ತಡೆಗೋಡೆ ನಿರ್ಮಾಣ ಮಾಡಬೇಕು ಎಂದು ತಾಲೂಕಿನ ಕಾಡಂಚಿನ ಗ್ರಾಮದ ರೈತರು ಅರಣ್ಯ ಇಲಾಖೆ ಮತ್ತು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.

ಇನ್ನಾದರೂ ರೈತರು ಕೂಗಿಗೆ ಮನ್ನಣೆ ನೀಡಿ, ಕಾಡಾನೆ ಹಾವಳಿ ತಡೆಗೆ ಶ್ರಮಿಸದ ಅಧಿಕಾರಿಗಳ ಮೇಲೆ ಕ್ಷೇತ್ರದ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅರಣ್ಯ ಇಲಾಖೆ ಮೇಲಾಧಿಕಾರಿಗಳು ಕಠಿಣ ಕ್ರಮಕೈಗೊಂಡು, ವೈಜ್ಞಾನಿಕ ರೀತಿಯಲ್ಲಿ ಆನೆ ಕಾವಲು ಗಸ್ತು ಹೆಚ್ಚಿಸಿ ನಿರಂತರವಾಗಿ ರೈತರ ಜಮೀನುಗಳಿಗೆ ಲಗ್ಗೆ ಇಟ್ಟು ಬೆಳೆ ನಾಶದ ಜತೆಗೆ ಮಾನವನ ಜೀವಕ್ಕೆ ಎರವಾಗುತ್ತಿರುವ ಕಾಡಾನೆ ಹಾವಳಿಯನ್ನು ನಿಯಂತ್ರಿಸಿ ತಾಲೂಕಿನ ರೈತರು ತಮ್ಮ ಹೊಲ, ಗದ್ದೆಗಳಲ್ಲಿ ನಿರ್ಭೀತಿಯಿಂದ ಕೆಲಸ ಕಾರ್ಯದಲ್ಲಿ ತೊಡಗಲು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಶ್ರಮಿಸಬೇಕಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು