News Karnataka Kannada
Wednesday, May 08 2024
ಮೈಸೂರು

ಮೈಸೂರಿನಲ್ಲಿ ಮಾ.26ರಂದು ಪಂಚರತ್ನ ಯಾತ್ರೆ ಸಮಾರೋಪ

Pancharatna Yatra to conclude in Mysuru on Mar. 26
Photo Credit : By Author

ಮೈಸೂರು: ಐತಿಹಾಸಿಕ ಪಂಚರತ್ನ ಯಾತ್ರೆಗೆ ಅಪಾರ ಜನ ಬೆಂಬಲ ವ್ಯಕ್ತವಾಗಿದ್ದು, ಮಾ.26ರಂದು ಭಾನುವಾರ ಚಾಮುಂಡಿ ಬೆಟ್ಟದ ತಪ್ಪಲಿನ ಉತ್ತನಹಳ್ಳಿ ರಿಂಗ್ ರಸ್ತೆ ಬಳಿಯ ಮೈದಾನದಲ್ಲಿ ಯಾತ್ರೆಯ ಸಮಾರೋಪ ಸಮಾರಂಭ ಆಯೋಜಿಸಲಾಗಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ರಿಂಗ್ ರಸ್ತೆ ಬಳಿಯ ಉತ್ತನಹಳ್ಳಿ ಮೈದಾನದಲ್ಲಿ ಸಮಾರೋಪ ಸಮಾರಂಭದ ಸಿದ್ಧತಾ ಕಾರ್ಯ ಪರಿಶೀಲಿಸಿ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ತಿಂಗಳ ಹಿಂದೆ ಆರಂಭವಾದ ಪಂಚರತ್ನ ರಥಯಾತ್ರೆಯ ಸಮಾರೋಪ ಸಮಾರಂಭವನ್ನು ಚಾಮುಂಡೇಶ್ವರಿ ಸನ್ನಿಧಿಯಲ್ಲಿಯೇ ಮಾಡಬೇಕೆಂದು ನಿರ್ಧರಿಸಲಾಗಿತ್ತು. ಅದರಂತೆ ಸಿದ್ಧತಾ ಕಾರ್ಯಗಳು ನಡೆಯುತ್ತಿವೆ. 26ರಂದು ನಡೆಯುವ ಕಾರ್ಯಕ್ರಮದಲ್ಲಿ 10 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು, ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ದೇವೇಗೌಡರು ರಾಮನಗರದಿಂದ ರೋಡ್ ಶೋ ನಡೆಸುತ್ತಿಲ್ಲ. ಬದಲಿಗೆ ಶ್ರೀರಾಂಪುರದಿಂದ ಕಾರ್ಯಕ್ರಮದ ಸ್ಥಳದವರೆಗೆ ಮಿನಿ ರೋಡ್ ಶೋ ನಡೆಸಲಿದ್ದಾರೆ ಎಂದರು.

ಏಪ್ರಿಲ್ ಮೊದಲ ವಾರದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಲಿದೆ. ಸಮಾರೋಪದ ಮೂಲಕವೇ ಜೆಡಿಎಸ್ ಚುನಾವಣಾ ಪ್ರಚಾರವನ್ನೂ ಆರಂಭಿಸುತ್ತಿದ್ದೇವೆ. ಯಾತ್ರೆಯ ವೇಳೆ ಜನ ನಮ್ಮ ಕಾರ್ಯಕ್ರಮಗಳನ್ನು ಸ್ವೀಕರಿಸಿದ್ದಾರೆ. ಈ ಬಾರಿ ಜೆಡಿಎಸ್ 123 ಸ್ಥಾನ ಗೆದ್ದು ಸ್ವಂತ ಬಲದಲ್ಲಿ ಅಧಿಕಾರ ಹಿಡಿಯಲಿದ್ದು, ವಾತಾವರಣವೂ ಪೂರಕವಾಗಿದೆ. ಯಾರು ಏನೇ ಹೇಳಿದರೂ ಫಲಿತಾಂಶದ ಬಳಿಕ ಸತ್ಯಾಂಶ ಹೊರಬೀಳಲಿದೆ ಎಂದು ಹೇಳಿದರು.

2009-10ರಲ್ಲಿಯೇ ಎಲ್ಲ ಬಡವರಿಗೆ ಮನೆ ನೀಡಲಾಗಿದೆ ಎಂದು ಯುಪಿಎ ಸರ್ಕಾರ ಹೇಳಿತ್ತು. ಆದರೆ, ಅದು ಕಾಗದದಲ್ಲಷ್ಟೇ ಇದೆ. ಬಹಿರ್ದೆಸೆ ಮುಕ್ತ ರಾಜ್ಯವೆಂದು ಘೋಷಣೆಯಾಗಿದ್ದರೂ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಶೌಚಾಲಯಗಳಿಲ್ಲ. ಮಹಿಳೆಯರು, ಹೆಣ್ಣು ಮಕ್ಕಳು ನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಸುಸಜ್ಜಿತ ಆಸ್ಪತ್ರೆ, ಶಾಲೆ, ಬಡವರಿಗೆ ನಿವೇಶನ, ಮನೆ, ಯುವಕರಿಗೆ ಉದ್ಯೋಗ, ರೈತರ ಸಮಸ್ಯೆಗಳಿಗೆ ಪರಿಹಾರ ಪಂಚರತ್ನ ಕಾರ್ಯಕ್ರಮಗಳಲ್ಲಿದೆ. ಪಂಚರತ್ನ ಕಾರ್ಯಕ್ರಮಗಳ ಜಾರಿಗೆ 2.5 ಲಕ್ಷ ಕೋಟಿ ಸಂಗ್ರಹಿಸಲಾಗುವುದು. ಬಂಡವಾಳ ವೆಚ್ಚವಾಗಿ ಕಾರ್ಯಕ್ರಮಗಳಿಗೆ ಸದ್ವಿನಿಯೋಗ ಮಾಡಲಾಗುವುದು. ಅಲ್ಲದೆ ನನ್ನ ಕಾರ್ಯಕ್ರಮಗಳು ಸರ್ಕಾರದ ಆಸ್ತಿಯನ್ನು ದ್ವಿಗುಣಗೊಳಿಸಲಿವೆ ಎಂದರು.

ಕಾಂಗ್ರೆಸ್ ಮತಕ್ಕಾಗಿ ಘೋಷಣೆಗಳ ಮೇಲೆ ಘೋಷಣೆ ಮಾಡುತ್ತಿದೆ. ಜನರಿಗೆ ನೀಡುತ್ತಿರುವ ಗ್ಯಾರಂಟಿ ಕಾರ್ಡ್‌ಗಳು ನಕಲಿ. ಅವು ಸುಳ್ಳಿನ ಭರವಸೆಯಾಗಿದ್ದು, ರಾಜ್ಯದ ಈಗಿನ ಆರ್ಥಿಕ ಪರಿಸ್ಥಿತಿಯಲ್ಲಿ ಜಾರಿ ಮಾಡುವುದು ಕಷ್ಟ. ಈ ಕಾರ್ಯಕ್ರಮಗಳಿಗೆ ಎಲ್ಲಿಂದ ಹಣ ಹೊಂದಿಸುತ್ತಾರೆ? ಕಾಂಗ್ರೆಸ್ ಅಧಿಕಾರದಲ್ಲಿರುವ ಛತ್ತೀಸಗಡ, ರಾಜಸ್ಥಾನದಲ್ಲಿ ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು ಜಾರಿಗೊಳಿಸಬೇಕಿತ್ತಲ್ಲವೇ? ಬಿಜೆಪಿಯ ಯೋಜನೆಗಳೂ ಕೂಡ ಜಾಹೀರಾತುಗಳಲ್ಲಿ ಕಾಣುತ್ತವೆ. ಅವು ಜನರಿಗೆ ತಲುಪಿಲ್ಲ ಎಂದರು.

ಶಾಸಕರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಅಶ್ವಿನ್ ಕುಮಾರ್, ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ, ನಗರಾಧ್ಯಕ್ಷ ಚಲುವೇಗೌಡ, ಮುಖಂಡರಾದ ಆರ್.ಲಿಂಗಪ್ಪ, ಎಂ.ಜೆ.ರವಿಕುಮಾರ್, ಎಸ್‌ಬಿಎಂ ಮಂಜು, ಕೆ.ವಿ.ಮಲ್ಲೇಶ್, ಪ್ರೇಮಾ ಶಂಕರೇಗೌಡ ಸೇರಿದಂತೆ ಹಲವರು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು