News Karnataka Kannada
Sunday, April 28 2024
ಮೈಸೂರು

ಮೈಸೂರು: ಅರಮನೆಯಲ್ಲಿ ರತ್ನಖಚಿತ ಸಿಂಹಾಸನ ಜೋಡಣೆ

Mysuru Dasara
Photo Credit : By Author

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಖಾಸಗಿ ದರ್ಬಾರ್ ಒಂದಾಗಿದ್ದು, ಮಂಗಳವಾರ ಅಂಬಾವಿಲಾಸ ಅರಮನೆಯಲ್ಲಿ ಶಾಸ್ತ್ರೋಕ್ತವಾಗಿ ಸಿಂಹಾಸನ ಜೋಡಣೆ ಮಾಡಿ ಪೂಜೆ ಸಲ್ಲಿಸಲಾಯಿತು.

ನವರಾತ್ರಿಗೂ ಮುನ್ನ ಭದ್ರತಾ ಕೊಠಡಿಯಲ್ಲಿರಿಸಿದ್ದ ಸಿಂಹಾಸನದ ಬಿಡಿ ಭಾಗಗಳನ್ನು ಹೊರತಂದು ಅದನ್ನು ಜೋಡಿಸಿ ಸಂಪ್ರದಾಯಬದ್ಧ ಪೂಜೆ ಬಳಿಕ ವಿಜಯದಶಮಿಯ ಎಲ್ಲ ಕಾರ್ಯಕ್ರಮಗಳನ್ನು ನೆರವೇರಿಸುವುದು ವಾಡಿಕೆ. ಖಾಸಗಿ ದರ್ಬಾರ್ ರಾಜಮನೆತನದ ಪ್ರಮುಖ ಧಾರ್ಮಿಕ ಕಾರ್ಯವಾಗಿದ್ದು, ದರ್ಬಾರ್ ಹಾಲ್‌ನಲ್ಲಿ ರತ್ನ ಖಚಿತ ಸಿಂಹಾಸನದ ಮೇಲೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ವಿರಾಜಮಾನರಾಗಿ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಸೆ.26ರಿಂದ ಅ.5ರವರೆಗೆ ಅರಮನೆಯಲ್ಲಿ ವಿವಿಧ ಧಾರ್ಮಿಕ ಕಾರ್ಯ ಜರುಗಲಿದ್ದು, ಪ್ರತಿ ದಿನ ಸಂಜೆ ಖಾಸಗಿ ದರ್ಬಾರ್ ನಡೆಯಲಿದೆ. ಈ ಹಿನ್ನೆಲೆಯಲ್ಲಿ ದಸರಾ ಮಹೋತ್ಸವದ ಆರಂಭಕ್ಕೆ ಕೇವಲ 6ದಿನಗಳಷ್ಟೇ ಬಾಕಿ ಇರುವುದರಿಂದ ಮಂಗಳವಾರ ಶಾಸ್ತ್ರೋಕ್ತವಾಗಿ ವಿಧಿ ವಿಧಾನದಂತೆ ಸಿಂಹಾಸನ ಜೋಡಿಸಿ ದರ್ಬಾರ್‌ಗೆ ಸಿದ್ದತೆ ಮಾಡಲಾಯಿತು.

ಇದುವರೆಗೆ ಅರಮನೆಯ ಸುಪರ್ಧಿನಲ್ಲಿದ್ದ ಸಿಂಹಾಸನವನ್ನು ಪ್ರಮೋದಾದೇವಿ ಅವರು ಜಿಲ್ಲಾಡಳಿತದ ವಶಕ್ಕೆ ನೀಡಿದರು. ಬಿಗಿ ಭದ್ರತೆಯಲ್ಲಿ ಸ್ಟ್ರಾಂಗ್ ರೂಂನಿಂದ ಹೊರತೆಗೆದು ಅರಮನೆ ಪಂಚಾಂಗದಂತೆ ಬೆಳಗ್ಗೆ 10.45ರಿಂದ 11.05ರವರೆಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಸಿಂಹಾಸನ ಜೋಡಣೆ ಮಾಡಲಾಯಿತು. ಇದಕ್ಕಾಗಿ ಬೆಳಗ್ಗೆ 7ರಿಂದಲೇ ವಿವಿಧ ಪೂಜಾ ಕೈಂಕರ್ಯ ಜರುಗಿದವು.

ಅರಮನೆ ಪುರೋಹಿತರ ನೇತೃತ್ವದಲ್ಲಿ ನವಗ್ರಹ ಹೋಮ, ಗಣಪತಿ ಹೋಮ, ಶ್ರೀ ಚಾಮುಂಡಿ ಪೂಜೆ ನೆರವೇರಿಸಿ, ನಂತರ ಪೂರ್ಣಾಹುತಿ ನೆರವೇರಿಸಲಾಯಿತು. ಅಂತಿಮವಾಗಿ ಶಾಂತಿ ಪೂಜೆ ಮಾಡಲಾಯಿತು. ಬಳಿಕ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳ ಸಮ್ಮುಖದಲ್ಲಿ ಸಿಂಹಾಸನದ ಜೋಡಣೆ ಕಾರ್ಯ ನಡೆಯಿತು. ನಂತರ ಪಟ್ಟದ ಕುದುರೆ, ಪಟ್ಟದ ಹಸುವನ್ನು ಕಲ್ಯಾಣಮಂಟಪದ ಸಮೀಪ ಇರುವ ಅಂಗಳಕ್ಕೆ ಕರೆತಂದು ಪೂಜಿಸಲಾಯಿತು.

ಅರಮನೆಯ ನೆಲಮಾಳಿಗೆಯಲ್ಲಿರುವ ಸ್ಟ್ರಾಂಗ್ ರೂಮ್ ತೆರೆಯಲಾಯಿತು. ಬಳಿಕ ಸ್ಟ್ರಾಂಗ್ ರೂಮ್‌ನಲ್ಲಿ ಇಡಲಾಗಿದ್ದ ಸಿಂಹಾಸನ ಹಾಗೂ ಭದ್ರಾಸನದ ಬಿಡಿ ಭಾಗಗಳನ್ನು ಪ್ರತ್ಯೇಕಿಸಲಾಯಿತು. ಶಸ್ತ್ರಸಜ್ಜಿತ ಪೊಲೀಸರ ಕಣ್ಗಾವಲಿನಲ್ಲಿ ಒಂದೊಂದೆ ಬಿಡಿ ಭಾಗವನ್ನು ದರ್ಬಾರ್ ಹಾಲ್‌ಗೆ ತರಲಾಯಿತು. ಸುಮಾರು 14 ಬಿಡಿ ಭಾಗಗಳಾಗಿ ವಿಂಗಡಿಸಲಾಗಿದ್ದ ಈ ಸಿಂಹಾಸನವನ್ನು ಜೋಡಿಸಿ, ಪರದೆ ಬಿಡಲಾಯಿತು. ದರ್ಬಾರ್ ಹಾಲ್‌ನಲ್ಲಿ ಸಿಂಹಾಸನ, ಕನ್ನಡಿ ತೊಟ್ಟಿಯಲ್ಲಿ ಭದ್ರಾಸನ ಜೋಡಿಸಲಾಯಿತು. ಬೆಳಗ್ಗೆ ಶಾಂತಿಹೋಮದೊಂದಿಗೆ ಪೂಜಾ ಕಾರ್ಯಕ್ರಮಗಳನ್ನು ಆರಂಭ ಮಾಡಿ ಕಳಶ ಸ್ಥಾಪನೆ, ಪವಿತ್ರ ಜಲ ಪ್ರೋಕ್ಷಣೆ, ಹೋಮ ಸೇರಿದಂತೆ ಪೂರ್ವ ನಿರ್ಧರಿತ ಮುಹೂರ್ತದಲ್ಲಿ ಸಿಂಹಾಸನ ಜೋಡಣಾ ಕಾರ್ಯ ಸಂಪನ್ನಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ತ್ರಿಷಿಕಾ ಕುಮಾರಿ ಒಡೆಯರ್ ಪಾದಪೂಜೆ ನೆರವೇರಿಸಿದರು.

ಸಿಂಹಾಸನವನ್ನು 8, ಬೆಳ್ಳಿಯ ಭದ್ರಾಸನವನ್ನು 6 ಬಿಡಿಭಾಗಗಳಾಗಿ ವಿಂಗಡಿಸಲಾಗಿರುತ್ತದೆ. ಸಿಂಹಾಸನದ ಬಿಡಿಭಾಗ, ಭದ್ರಾಸನ ಜೋಡಿಸಿದ ಬಳಿಕ, ಸಿಂಹಾಸನಕ್ಕೆ ಉಮಾಪಕ್ಷಿ, ಮುತ್ತಿನ ಜಾಲರಿ, ಮಕರ ತೋರಣ, 25ಜತೆ ನಗಗಳು, 1 ಜತೆ ಚಿನ್ನದ ಕುದುರೆ, ತುರಾಯಿ ಜೋಡಿ, 1ಜತೆ ಚಿನ್ನದ ಕಳಶ ಜೋಡಿಸಿ ಅಲಂಕರಿಸಲಾಯಿತು. ಇದರ ಬಿಡಿ ಭಾಗಗಳನ್ನು ಜೋಡಿಸಿ ಅದಕ್ಕೆ ಸಿಂಹದ ಮುಖವನ್ನು ಅಳವಡಿಸಿದಾಗ ಸಿಂಹಾಸನ ಜೋಡಣೆ ಪೂರ್ಣಗೊಳ್ಳುತ್ತದೆ. ಸಿಂಹವನ್ನು ಸೆ.26ರಂದು ಜೋಡಿಸಿ ಪೂರ್ಣಗೊಂಡ ಸಿಂಹಾಸನವನ್ನು ದರ್ಬಾರ್ ಸಭಾಂಗಣದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. 26ರಿಂದ ಅ.5ರವರೆಗೆ ಯದುವೀರ್ ಸಿಂಹಾಸನವೇರಿ ದರ್ಬಾರ್ ನಡೆಸಲಿದ್ದಾರೆ. ಅ.20ರಂದು ಸಿಂಹಾಸನ ವಿಸರ್ಜನೆ ಮಾಡಲಾಗುತ್ತದೆ.

ಅರಮನೆಯಲ್ಲಿ ನೆರವೇರುತ್ತಿದ್ದ ಸಿಂಹಾಸನಾ ಜೋಡಣಾ ಕಾರ್ಯದಿಂದಾಗಿ ಸಾರ್ವಜನಿಕರಿಗೆ ಅರಮನೆಗೆ ಪ್ರವೇಶ ನಿಷೇಧಿಸಲಾಗಿತ್ತು. ಈ ಎಲ್ಲ ಕಾರ್ಯಗಳನ್ನು ಪೊಲೀಸರ ಬಿಗಿ ಭದ್ರತೆಯಲ್ಲಿ ನಡೆಸಲಾಯಿತು. ಸಿಂಹಾಸನದ ಜೋಡಣೆ ವೇಳೆ ಪ್ರಮೋದಾ ದೇವಿ ಒಡೆಯರ್, ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು