News Karnataka Kannada
Thursday, May 02 2024
ಮೈಸೂರು

ರಾಮ ಮಂದಿರ ಉದ್ಘಾಟನೆ: ಶ್ರೀರಾಮ ನಾಮ ಸ್ಮರಣೆಗೆ ಮೈಸೂರು ಸಜ್ಜು

ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ಶ್ರೀರಾಮ ಮಂದಿರ ಉದ್ಘಾಟನೆ ಮತ್ತು ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ಹಿನ್ನಲೆಯಲ್ಲಿ ಮೈಸೂರಿನಲ್ಲಿ ರಾಮ ಭಕ್ತರ ಸಂಭ್ರಮ ಮುಗಿಲು ಮುಟ್ಟಿದ್ದು, ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
Photo Credit : By Author

ಮೈಸೂರು: ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ಶ್ರೀರಾಮ ಮಂದಿರ ಉದ್ಘಾಟನೆ ಮತ್ತು ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ಹಿನ್ನಲೆಯಲ್ಲಿ ಮೈಸೂರಿನಲ್ಲಿ ರಾಮ ಭಕ್ತರ ಸಂಭ್ರಮ ಮುಗಿಲು ಮುಟ್ಟಿದ್ದು, ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ನಗರದಲ್ಲಿರುವ ಶ್ರೀರಾಮ ಮಂದಿರ, ಆಂಜನೇಯಸ್ವಾಮಿ ದೇವಸ್ಥಾನಗಳಲ್ಲಿ ಮಾತ್ರವಲ್ಲದೆ, ಬಹುತೇಕ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಲಿವೆ. ಜತೆಗೆ ವಿವಿಧ ಸಂಘ ಸಂಸ್ಥೆಗಳು ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಕೃಷ್ಣಮೂರ್ತಿಪುರಂನ ಶ್ರೀರಾಮ ಮಂದಿರದಲ್ಲಿ ಸೋಮವಾರ ಮಹಾಜನ ಸಭಾ ವತಿಯಿಂದ ಬೆಳಗ್ಗೆ 9ಕ್ಕೆ ವೇದ ಬಳಗದವರಿಂದ ಪಾರಾಯಣ ಮತ್ತು ಶ್ರೀ ರಾಮದೇವರಿಗೆ ಅಭಿಷೇಕ ನಡೆಯಲಿದೆ. ಅಲ್ಲದೆ, ಸಂಜೆ 6ಕ್ಕೆ ದೀಪೋತ್ಸವ ಜರುಗಲಿದೆ.

ಶಿವರಾಂಪೇಟೆ ಶ್ರೀ ರಾಮಾಭ್ಯುದಯ ಸಭಾದ ಶ್ರೀರಾಮ ಮಂದಿರದಲ್ಲಿ ಅರ್ಚಕ ಲಕ್ಷ್ಮೀನಾರಾಯಣಶಾಸ್ತ್ರಿ ಹಾಗೂ ಸಭಾದ ಅಧಕ್ಷ ಡಾ.ಎನ್. ಶ್ರೀರಾಮ್ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ. ಬೆಳಗ್ಗೆ 7ಕ್ಕೆ ರುದ್ರಾಭಿಷೇಕ, ಶ್ರೀರಾಮ ಸೀತಾ ಹನುಮ ಅಷ್ಟೋತ್ತರ ಹಾಗೂ ರಾಮ ತಾರಕ ಹೋಮ, 11.30ರಿಂದ 12ರವರೆಗೆ ರಾಮ ಭಜನೆ, 12.30ಕ್ಕೆ ಮಹಾ ಮಂಗಳಾರತಿ ನಡೆಯಲಿದ್ದು, ಬಳಿಕ ಸಾರ್ವಜನಿಕರಿಗೆ ಪ್ರಸಾದ ವಿನಿಯೋಗ ಜರುಗಲಿದೆ. ವೀರನಗೆರೆ ಶ್ರೀ ವೀರಗಣಪತಿ ದೇವಸ್ಥಾನದಲ್ಲಿ ರಾಮಜ್ಯೋತಿ ಸೇವಾ ಸಮಿತಿ ವತಿಯಿಂದ ಸಂಜೆ 6.30ಕ್ಕೆ ದೇವಸ್ಥಾನದಿಂದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದವರೆಗೆ ಅಶೋಕ ರಸ್ತೆಯಲ್ಲಿ ಸುಮಾರು 2ಲಕ್ಷ ದೀಪಗಳನ್ನು ಬೆಳಗಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಅರಮನೆ ಮಂಡಳಿ ಮತ್ತು ಮುಜರಾಯಿ ಇಲಾಖೆ ಜಂಟಿ ಆಶ್ರಯದಲ್ಲಿ ಅರಮನೆ ಮುಂಭಾಗದಲ್ಲಿ ಪೂರ್ಣಾಹುತಿ, ಮಹಾಮಂಗಳಾರತಿ, ರಾಮ ತಾರಕ ಹೋಮ ನೆರವೇರಿಸಲಾಗುತ್ತಿದೆ. ಅಲ್ಲದೆ, ಪ್ರಸಾದ ವಿನಿಯೋಗ ಇರಲಿದ್ದು, ಅಯೋಧ್ಯೆ ಕಾರ್ಯಕ್ರಮದ ನೇರ ಪ್ರಸಾರವನ್ನು ಎಲ್ ಇಡಿ ಪರದೆಯಲ್ಲಿ ಪ್ರಸಾರ ಮಾಡಲಾಗುವುದು. ಇದರಲ್ಲಿ ಪಾಲ್ಗೊಳ್ಳಲು ಜಯರಾಮ, ಬಲರಾಮ ಮತ್ತು ಅಂಬಾವಿಲಾಸ ದ್ವಾರಗಳಲ್ಲಿ ಸಾರ್ವಜನಿಕರಿಗೆ ಉಚಿತ ಪ್ರವೇಶಾವಕಾಶ ಕಲ್ಪಿಸಲಾಗಿದೆ.

ಸೈಕಲ್ ಪ್ಯೂರ್ ಅಗರ್‌ ಬತ್ತೀಸ್ ಸಂಸ್ಥೆಯಿಂದ 111 ಅಡಿ ಉದ್ದದ ಊದುಬತ್ತಿ ತಯಾರಿಸಿದ್ದು, ಬೆಳಗ್ಗೆ ನಗರದ ಕೋಟೆ ಆಂಜನೇಯಸ್ವಾಮಿ ದೇಗುಲ ಬಳಿ ಊದುಬತ್ತಿ ಹಚ್ಚಲಾಗುತ್ತದೆ. ಇದಕ್ಕೆ 10 ಬಗೆಯ ಮೂಲ ವಸ್ತುಗಳನ್ನು ಬಳಸಿ ತಯಾರಿಸಲಾಗಿದ್ದು, ಗಂಧದ ಮರದ ಪುಡಿ ಜತೆಗೆ ಇದ್ದಿಲು, ಜೇನು, ದೇವದಾರು, ಬಿದಿರು, ಗುಗ್ಗುಲು, ಜಿಗುಟು, ಬೆಲ್ಲದ ಮಿಶ್ರಣ, ಸಾಸಿವೆ, ಸಾಂಬ್ರಾಣಿ ಹಾಗೂ ಬಿಳಿ ಸಾಸಿವೆ ಬಳಕೆ ಮಾಡಲಾಗಿದೆ. 18 ನುರಿತ ಕುಶಲಕರ್ಮಿಗಳು 23 ದಿನಗಳಲ್ಲಿ ಇದನ್ನು ಸಿದ್ಧಪಡಿಸಿದ್ದಾರೆ.

ಅಯೋಧ್ಯೆಯಲ್ಲಿ ಮಂದಿರ ಉದ್ಘಾಟನೆ ಹಿನ್ನೆಲೆ ಶಿಲ್ಪಿ ಅರುಣ್ ಯೋಗಿರಾಜ್ ಮನೆ ಮುಂದೆಯೂ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಮಾಡಲು ಸಿದ್ಧತೆ ನಡೆಸಲಾಗಿದೆ. ಈಗಾಗಲೇ ಮನೆಯಲ್ಲಿ ಸಿದ್ಧತೆ ನಡೆಸಲಾಗುತ್ತಿದ್ದು, ಮನೆಯ ಮುಂಭಾಗ ಶಾಮಿಯಾನ ಹಾಗೂ ಫ್ಲೆಕ್ಸ್ ಹಾಕಲಾಗಿದೆ. ಸೋಮವಾರ ಮುಂಜಾನೆ ಕುಟುಂಬಸ್ಥರಿಂದ ವಿಶೇಷ ಪೂಜೆ ನೆರವೇರಲಿದೆ.

ವಿ.ಆರ್.ಟ್ರಸ್ಟ್ ವತಿಯಿಂದ ಜ.22ರಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 12.30ರವರೆಗೆ ನಗರದ ಆಲಮ್ಮ ಛತ್ರದಲ್ಲಿನ ಕುಂಚಿಟಿಗರ ಸಂಘದಲ್ಲಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ನಗರ ಮತ್ತು ಜಿ ಬ್ರಾಹ್ಮಣ ಸಂಘದಿಂದ ಶ್ರೀರಾಮ ಪ್ರತಿಷ್ಠಾಪನಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲೆಂದು ನಗರದ ಸಿಎಫ್‌ಟಿಆರ್‌ಐ ಪಕ್ಕದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಶ್ರೀರಾಮ ತಾಕರ ಹೋಮ, ಶ್ರೀರಾಮ ಜಪ ಹಾಗೂ ಶ್ರೀರಾಮ ಭಜನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಅವಧೂತ ದತ್ತ ಪೀಠದ ವತಿಯಿಂದ ಶ್ರೀರಾಮ ದೇವರ ಅದ್ಧೂರಿ ರಥೋತ್ಸವ ಆಯೋಜಿಸಲಾಗಿದೆ. ಜತೆಗೆ ನಗರದ ಜೈನ್ ಸಮಾಜದಿಂದ 1 ಲಕ್ಷ ಲಾಡು ತಯಾರಿಸುತ್ತಿದ್ದು, ಸಾರ್ವಜನಿಕರಿಗೆ ವಿತರಣೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ರಾಮ ಮಂದಿರ ಉದ್ಘಾಟನೆ, ರಾಮಲ ಪ್ರಾಣ ಪ್ರತಿಷ್ಠೆ ಹಿನ್ನೆಲೆ ಮೈಸೂರಿನಲ್ಲಿ ಶ್ರೀ ರಾಮನಿಗೆ ಪ್ರಿಯವಾದ ಮೋತಿಚೂರ್ ಲಡ್ಡು ತಯಾರಿಸಲಾಗಿದೆ. ಮೈಸೂರಿನ ಆಲಮ್ಮ ಛತ್ರದಲ್ಲಿ ರಾಮಭಕ್ತರು ಒಂದು ಲಕ್ಷದ ಎಂಟು ಸಾವಿರ ಲಡ್ಡು ತಯಾರಿಸಿದ್ದು ಮೈಸೂರಿನ ರಾಮಮಂದಿರಗಳ ಬಳಿ ಭಕ್ತರಿಗೆ ಹಂಚಲು ಸಿದ್ಧತೆ ನಡೆಸಿದ್ದಾರೆ.

ಶ್ರೀರಾಮ ಮಂದಿರ ಉದ್ಘಾಟನೆ ಮತ್ತು ಶ್ರೀ ರಾಮಲಲ್ಲಾ ಪ್ರಾಣಪ್ರತಿಷ್ಠೆ ಮಾಡುವ ಕಾರ್ಯವನ್ನು ಎಲ್ಲರೂ ವೀಕ್ಷಿಸಲು ಅನುವಾಗುವಂತೆ ಬಿಜೆಪಿ ನಗರದ ಎಲ್ಲಾ 65 ವಾರ್ಡ್‌ ಗಳಲ್ಲಿ ವಾರ್ಡ್‌ ಗೆ 2ರಂತೆ 130 ಎಲ್‌ಇಡಿ ಪರದೆ ಅಳವಡಿಸಿ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು