News Karnataka Kannada
Saturday, May 04 2024
ಮೈಸೂರು

ರೈತರ ಆರ್ಥಿಕ ಶಕ್ತಿ ಹೆಚ್ಚಳಕ್ಕೆ ನಿರ್ದೇಶನಾಲಯ ಸ್ಥಾಪನೆ: ಸಿಎಂ

Mysore
Photo Credit :

ಮೈಸೂರು: ರೈತನ ಆದಾಯ ಹೆಚ್ಚಿಸುವ ಸಲುವಾಗಿ ಹೊಸ ನಿರ್ದೇಶನಾಲಯವನ್ನು ಸ್ಥಾಪಿಸಲಾಗುತ್ತಿದೆ. ಈ ಮೂಲಕ ರೈತರ ಆದಾಯಕ್ಕೆ ಬೇಕಾದ ಸಮಗ್ರ ಕೃಷಿ, ಇತರ ಕೃಷಿ ಚಟುವಟಿಕೆಗಳ ಚಿಂತನೆ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರು ಹೇಳಿದರು.

ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯಕಬ್ಬು ಬೆಳೆಗಾರರ ಸಂಘದ ಸಹಯೋಗದಲ್ಲಿ ವಿಶ್ವರೈತ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ರಾಜ್ಯ ಮಟ್ಟದ ಸಮಾವೇಶ, ಕುರುಬೂರು ಶಾಂತಕುಮಾರ್ ಅವರಿಗೆ ಅಭಿನಂದನಾ ಸಮಾರಂಭ ಹಾಗೂ ರೈತಧ್ವನಿ ವಿಶೇಷಾಂಕ ಮತ್ತು ಹಸಿರು ಹೊನ್ನು ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸರ್ಕಾರಗಳು ಆಹಾರ ಉತ್ಪಾದನೆ ಕಡೆಗೆ ಗಮನಕೊಟ್ಟಿವೆ. ಆದರೆ ರೈತರ ಆರ್ಥಿಕ ಅಭಿವೃದ್ಧಿಗೆ ಗಮನಕೊಟ್ಟಿಲ್ಲ. ಈ ಸಮಸ್ಯೆ ನಮ್ಮ ಗಮನದಲ್ಲಿದೆ. ಕೃಷಿ ಜೊತೆಗೆ ಪೂರಕ ಕೃಷಿ ಚಟುವಟಿಕೆ ಹಾಗೂ ಸಮಗ್ರ ಕೃಷಿ ಪದ್ಧತಿ ಅಳವಡಿಕೆಯಿಂದ ರೈತರ ಆದಾಯ ಹೆಚ್ಚಿಸಲು ಸಾಧ್ಯ ಎಂದರು.

ಕೃಷಿ ಉತ್ಪಾದನೆಗೆ ಸಂಶೋಧನೆ ಇದೆ, ಬೀಜಗಳಿವೆ, ಗೊಬ್ಬರ ಇವೆ. ಕೃಷಿ ಉತ್ಪಾದನೆಗಳ ಜೊತೆಗೆ ನಮ್ಮ ಯೋಚನೆ ಮತ್ತು ಯೋಜನೆ ರೈತರ ಬದುಕಿನ ಕಡೆಗೆ ಇರಬೇಕು. ಆತನ ಆರ್ಥಿಕ ಸ್ಥಿತಿ ಉತ್ತಮಗೊಂಡರೆ ಕೃಷಿ ತಂತಾನೆ ಬೆಳೆಯುತ್ತದೆ ಎಂದರು.

ಎಲ್ಲ ರಾಜಕೀಯ ಪಕ್ಷಗಳು ರೈತರಿಗೆ ಸೇರಿವೆ ಎಂಬ ವಾಸ್ತವವನ್ನು ತಿಳಿದುಕೊಂಡರೆ ರೈತರಿಗೆ ರಾಜಕೀಯ ಪಕ್ಷಗಳು ಬೆನ್ನೆಲುಬು ಆಗುತ್ತವೆ. ಈ ಕಟು ಸತ್ಯ ತಿಳಿದುಕೊಳ್ಳಲು 75 ವರ್ಷವಾದರೂ ಸಾಧ್ಯವಾಗಿಲ್ಲ. ಚಳವಳಿ ಮತ್ತು ರಾಜಕಾರಣದ ನಡುವೆ ಒಂದು ಸಂಬಂಧ ಇರಬೇಕಾಗಿತ್ತು ಎಂದು ಹೇಳಿದರು.

ಇಂದು ಆಹಾರ ಉತ್ಪನ್ನ ಮಾರಾಟಗಾರರ ಜೇಬು ತುಂಬಿದೆ. ಆದರೆ ಆಹಾರ ಉತ್ಪಾದಕರ ಜೇಬು ಖಾಲಿ ಇದೆ. ಎಲ್ಲಿಯ ವರೆಗೆ ಈ ಸತ್ಯ ಆಡಳಿತದ ಕೇಂದ್ರ ಬಿಂದು ಆಗುವುದಿಲ್ಲವೊ ಅಲ್ಲಿವರೆಗೂ ಕೆಲವು ರಿಯಾಯಿತಿಗಳನ್ನು ಕೊಡುತ್ತಾ ಹೋಗುತ್ತವೆ, ಸಮಸ್ಯೆ ಬಗೆಹರಿಯುವುದಿಲ್ಲ ಎಂದರು.

ಆಹಾರ ಉತ್ಪಾದನೆ ಹೆಚ್ಚಾದರೂ ಕಷ್ಟ, ಕಡಿಮೆಯಾದರೂ ಕಷ್ಟ. ಬೇರೆ ಬೇರೆ ಸಂಶೋಧನೆಯಿಂದ ಹೊಸ ಹೊಸ ತಳಿಗಳು ಬರುತ್ತವೆ. ಒಂದು ತಳಿ ಬಿತ್ತಿ, ಬೆಳೆದು ನಿಭಾಯಿಸಿ ಸುಸ್ತಾಗಿ ಅದರ ಆಳ ಅಗಲ ತಿಳಿಯುವ ವೇಳೆಗೆ ಇನ್ನೊಂದು ತಳಿ ಬಂದಿರುತ್ತದೆ. ಯಾವುದೋ ಒಂದು ತಳಿಯಲ್ಲಿ ಒಂದು ರೋಗ, ಸಮಸ್ಯೆ ಕಂಡು ಬಂದರೆ ಅದರ ನಿವಾರಣೆಗೆ ಇನ್ನೊಂದು ತಳಿ ಬರುತ್ತದೆ. ಅದರಲ್ಲಿ ಇನ್ನೇನೋ ಸಮಸ್ಯೆ ಇರುತ್ತದೆ. ಈ ಮಧ್ಯೆ ರೈತ ತನ್ನಆರ್ಥಿಕ ದುಸ್ಥಿತಿಯಿಂದ ಇನ್ನಷ್ಟು ಹೈರಾಣಾಗಿರುತ್ತಾನೆ ಎಂದರು.

ಈಗಾಗಲೇ ವಿದ್ಯಾನಿಧಿ ಯೋಜನೆಯಡಿ 2.4 ಲಕ್ಷ ಮಕ್ಕಳಿಗೆ ಸೌಲಭ್ಯ ನೀಡಲಾಗಿದೆ. ಪದವಿ ಮಕ್ಕಳ ಪ್ರವೇಶ ಈಗ ಆಗುತ್ತಿದೆ. ಮಾರ್ಚ್ ವೇಳೆಗೆ 5 ಲಕ್ಷ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಸಿಗಲಿದೆ. ಗ್ರಾಮೀಣ ಭಾಗದ ಪ್ರೌಢಶಾಲೆಯ ಹೆಣ್ಣು ಮಕ್ಕಳಿಗೂ ಈ ಯೋಜನೆಯನ್ನು ವಿಸ್ತರಿಸುವ ಆಲೋಚನೆ ಇದೆ ಎಂದರು.

ಈ ಸರ್ಕಾರ ರೈತರ ಪರ ಸಂವೇದನಾಶೀಲತೆ ಹೊಂದಿದೆ, ಗಟ್ಟಿಯಾಗಿ ನಿಮ್ಮ ಪರವಾಗಿ ನಿಲ್ಲುತ್ತದೆ. ನಿಮ್ಮ ಸಲಹೆ ಸಹಕಾರಇರಲಿ. ರೈತರ ಸಮಸ್ಯೆಗಳಿಗೆ ಪರಿಹಾರ ಮಾಡುವ ಇಚ್ಛಾಶಕ್ತಿ ಇದೆ. ಸಮಯವನ್ನು ವ್ಯರ್ಥ ಮಾಡದೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ ಎಂದರು.

ಸಮಾರಂಭದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ರಾಜ್ಯಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷರಾದ ಕುರುಬೂರು ಶಾಂತಕುಮಾರ್, ಪಬ್ಲಿಕ್ ಟಿ.ವಿ. ಮುಖ್ಯಸ್ಥ ಹೆಚ್.ಆರ್. ರಂಗನಾಥ್, ಕನ್ನಡಪ್ರಭ ಸುವರ್ಣಟಿವಿ ಸಂಪಾದಕ ರವಿ ಹೆಗಡೆ, ಭಾರತ ಸರ್ಕಾರದ ರೈತರ ಆದಾಯ ದ್ವಿಗುಣ ಸಮಿತಿ ಮುಖ್ಯಸ್ಥರಾದ ಅಶೋಕ್ ದಳವಾಯಿ, ತಮಿಳುನಾಡಿನ ಅರಿಶಿನಿ ಬೆಳೆಗಾರರ ಸಂಘದ ರಾಷ್ಟ್ರೀಯ ಅಧ್ಯಕ್ಷ ದೈವಶಿಗಾಮಣಿ, ರೈತ ಮುಖಂಡರಾದ ಟಿ.ವಿ.ಗೋಪಿನಾಥ್, ವಿಶ್ವರೈತ ದಿನಾಚರಣೆ ಸಮಿತಿಯ ಅಧ್ಯಕ್ಷರಾದ ಡಾ. ಎಸ್.ಶಿವರಾಜಪ್ಪ ಶಾಸಕ ಎಲ್.ನಾಗೇಂದ್ರ ಮತ್ತಿತರರು ಉಪಸ್ಥಿತರಿದ್ದರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು