ಮೈಸೂರು: ‘ಎಂಪಿಎಂಸಿ ಕಾಯ್ದೆ (ತಿದ್ದುಪಡಿ) ರೈತರ ಬೇಡಿಕೆಯಾಗಿತ್ತು. ಅದು ಬಿಜೆಪಿ ಬೇಡಿಕೆಯಾಗಿರಲಿಲ್ಲ’ ಎಂದು ಕೇಂದ್ರ ಕೃಷಿ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಗುರುವಾರ ಇಲ್ಲಿ ಹೇಳಿದರು.
ನಗರದ ಅರಮನೆ ಅಂಗಳದಲ್ಲಿ ಮಾವುತರು ಮತ್ತು ಕಾವಾಡಿಗರಿಗೆ ಆಯೋಜಿಸಿದ್ದ ಉಪಾಹಾರ ಕೂಟದಲ್ಲಿ ಭಾಗಿಯಾದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟ ರಾಜಕೀಯ ಪ್ರೇರಿತ’ ಎಂದು ಕಿಡಿಕಾರಿದರು.
‘ಗುಜರಾತ್, ಪಂಜಾಬ್, ಉತ್ತರ ಪ್ರದೇಶ, ಮಣಿಪುರದಲ್ಲಿ ಚುನಾವಣೆ ಹತ್ತಿರದಲ್ಲಿದೆ. ಚುನಾವಣೆ ಉದ್ದೇಶವಾಗಿಟ್ಟುಕೊಂಡು ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. 30-40 ವರ್ಷಗಳ ಹಿಂದೆಯೇ ರೈತರು ಬೇಡಿಕೆ ಇಟ್ಟಿದ್ದರು. ಎಪಿಎಂಸಿ ಕಾಯ್ದೆ ರದ್ದಾಗಬೇಕು, ಅದಕ್ಕೆ ತಿದ್ದುಪಡಿಯಾಗಬೇಕು ಎಂಬುದು ಬಿಜೆಪಿ ಬೇಡಿಕೆಯಲ್ಲ, ರೈತರ ಬೇಡಿಕೆಯಾಗಿತ್ತು. ಈ ಹಿಂದೆಯೇ ಸಂಸತ್ನಲ್ಲಿ ಆಗಿದ್ದ ಚರ್ಚೆ, ವಿವಿಧ ಸಮಿತಿಗಳು ಸಲ್ಲಿಸಿದ ವರದಿ ಆಧರಿಸಿ ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿದೆ. ಈ ಕಾಯ್ದೆಗಳಿಂದ ರೈತರಿಗೆ ಒಳ್ಳೆಯದಾಗಿ ಬಿಡುತ್ತೆ ಎಂಬ ಕಾರಣಕ್ಕೆ ಅನೇಕ ರಾಷ್ಟ್ರಗಳು ವಿರೋಧ ವ್ಯಕ್ತಪಡಿಸುತ್ತಿವೆ. ಅದಕ್ಕೆ ನಮ್ಮಲ್ಲೂ ಕೆಲವರು ಕೈ ಜೋಡಿಸಿದ್ದಾರೆ’ ಎಂದು ಶೋಭಾ ಅಸಮಾಧಾನ ವ್ಯಕ್ತಪಡಿಸಿದರು.