News Karnataka Kannada
Sunday, April 28 2024
ಮೈಸೂರು

ಮೈಸೂರಿನ ಮನೆಗಳಲ್ಲೀಗ ಬೊಂಬೆಗಳ ಮೆರವಣಿಗೆ

New Project 2021 10 12t164443.855
Photo Credit :

ಮೈಸೂರು: ಮೈಸೂರು ದಸರಾ ಸರಳ ಸಾಂಪ್ರದಾಯಿಕವಾಗಿ ನಡೆಯುತ್ತಿದೆ. ನಗರದಲ್ಲಿ ದಸರಾ ಸಂಭ್ರಮ ಕಾಣಿಸದಿದ್ದರೂ ನವರಾತ್ರಿಯ ಒಂಬತ್ತು ದಿನವೂ ಮನೆಮನೆಗಳಲ್ಲಿ ಬೊಂಬೆಗಳ ಮೆರವಣಿಗೆ ಮಾತ್ರ ಯಾವುದೇ ಅಡ್ಡಿಯಿಲ್ಲದೆ ಸಾಗುತ್ತಿದೆ.

ಬೊಂಬೆ ಕೂರಿಸುವುದು ಮೈಸೂರಿನ ಮನೆಗಳಲ್ಲಿ ಮಾತ್ರವಲ್ಲ ಅರಮನೆಯಲ್ಲಿ ವಿವಿಧ ಬೊಂಬೆಗಳನ್ನು ಸಾಲಾಂಕೃತವಾಗಿ ಜೋಡಿಸಿ, ಪೂಜಿಸಿ ಪ್ರದರ್ಶಿಸಲಾಗುತ್ತದೆ. ಇದು ರಾಜಒಡೆಯರ ಆಡಳಿತದ ಆರಂಭದಿಂದಲೂ ನಡೆದು ಬಂದಿರುವುದಾಗಿ ಇತಿಹಾಸ ಹೇಳುತ್ತಿದೆ. ರಾಜ ಒಡೆಯರ್ ಅರಮನೆಯಲ್ಲಿ ದರ್ಬಾರ್ ಹಾಲ್, ಚಿತ್ರಶಾಲೆ, ವಿವಾಹ ಮಂಟಪ, ಭೋಜನ ಶಾಲೆ, ಶಸ್ತ್ರಗಾರವಿರುವಂತೆ ಬೊಂಬೆಗಳ ಪ್ರದರ್ಶನಕ್ಕೂ ಒಂದು ಪ್ರತ್ಯೇಕ ಸ್ಥಳವನ್ನು ಮೀಸಲಿರಿಸಿದರು. ಅದೇ ’ತೊಟ್ಟಿಮನೆ’. ಈ ತೊಟ್ಟಿಮನೆಯಲ್ಲಿ ಗತಕಾಲದ ಕಲಾತ್ಮಕತೆಯನ್ನು ಸಾರುವ ದಂತ, ಶ್ರೀಗಂಧದ ಮರ ಸೇರಿದಂತೆ ಬೆಲೆಬಾಳುವ ಮರಗಳಿಂದ ಕೆತ್ತಿದ ಅಪೂರ್ವ ಬೊಂಬೆಗಳನ್ನು ಅಲ್ಲಿರಿಸಿದರು. ಅದು ಇವತ್ತು ಅರಮನೆಗೊಂದು ಆಕರ್ಷಣೆಯಾಗಿ ಗಮನಸೆಳೆಯುತ್ತದೆ.

ದಸರೆಯ ಸಂದರ್ಭ ಮನೆಮನೆಗಳಲ್ಲಿ ಬೊಂಬೆ ಕೂರಿಸಿ ಪೂಜಿಸುವ ಸಂಪ್ರದಾಯ ಕೇವಲ ಮೈಸೂರಿನಲ್ಲಿ ಮಾತ್ರವಲ್ಲ ರಾಜ್ಯದ ಇತರ ಕಡೆಗಳಲ್ಲಿಯೂ ಇರುವುದನ್ನು ನಾವು ಕಾಣಬಹುದು. ಆದರೆ ಮೈಸೂರಿನಲ್ಲಿ ಮಾತ್ರ ಬೊಂಬೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿರುವುದನ್ನು ನಾವು ಕಾಣಬಹುದು. ಮೈಸೂರಿನ ಹಲವು ಮನೆಗಳಲ್ಲಿ ಬೊಂಬೆಗಳನ್ನು ಕೂರಿಸಲಾಗುತ್ತಿದ್ದು ಕೆಲವರು ಸಾರ್ವಜನಿಕರಿಗೂ ವೀಕ್ಷಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಇನ್ನು ಮೃಗಾಲಯದ ಎದುರು ಇರುವ ರಾಮ್‌ಸನ್ ಪ್ರತಿಷ್ಠಾನದಲ್ಲಿ ಪ್ರತೀ ವರ್ಷ ಬೊಂಬೆಗಳ ಪ್ರದರ್ಶನ ಏರ್ಪಡಿಸಲಾಗುತ್ತಿದೆ.

ಸಾಮಾನ್ಯವಾಗಿ ಬೊಂಬೆ ಪ್ರದರ್ಶನದಲ್ಲಿ ರಾಜ-ರಾಣಿಯರದ್ದೇ ದರ್ಬಾರು. ಮೈಸೂರು ರಾಜಒಡೆಯರ ಪ್ರತೀಕವೆಂಬಂತೆ ಅವರಿಗೆ ಗೌರವ ಸೂಚಕವಾಗಿ ಪ್ರತಿ ಮನೆಮನೆಯ ಬೊಂಬೆಗಳ ಸಾಲಿನಲ್ಲಿ ರಾಜರಾಣಿ ಬೊಂಬೆ ಮೇಲ್ಪಂಕ್ತಿಯಲ್ಲಿ ಸ್ಥಾನಪಡೆದಿರುತ್ತವೆ. ಈ ಬೊಂಬೆಗಳನ್ನು ಪಟ್ಟದ ಬೊಂಬೆಗಳೆಂದು ಕರೆಯಲಾಗುತ್ತದೆ. ಉಳಿದಂತೆ ಅಂಬಾರಿ ಹೊತ್ತ ಆನೆ, ಪದಾತಿದಳ, ಕುದುರೆ, ಒಂಟೆಗಳ ಸಾಲು, ಮೈಸೂರು ಅರಮನೆ ಸೇರಿದಂತೆ ಹಲವು ಬೊಂಬೆಗಳು ಪ್ರದರ್ಶನದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿರುತ್ತವೆ. ಇತ್ತೀಚೆಗೆ ಕೆಲವು ಆಧುನಿಕ ರೀತಿಯ ಬೊಂಬೆಗಳು ಕೂಡ ಪ್ರದರ್ಶನದಲ್ಲಿ ಕಂಡುಬರುತ್ತಿವೆ. ಹಾಗೆನೋಡಿದರೆ ದಸರಾ ಹಬ್ಬಕ್ಕೆ ಮೈಸೂರು ಸಜ್ಜಾಗುತ್ತಿದ್ದಂತೆಯೇ ಇಲ್ಲಿನ ಸಂಸ್ಕೃತಿ, ಪರಂಪರೆಗಳನ್ನೊಳಗೊಂಡ ಆಚರಣೆಗಳು ಕೂಡ ಸದ್ದಿಲ್ಲದೆ ಗರಿಬಿಚ್ಚಿಕೊಳ್ಳುತ್ತವೆ. ಒಂಬತ್ತು ದಿನಗಳ ಕಾಲವೂ ವಿವಿಧ ಆಚರಣೆಗಳು ನಡೆಯುತ್ತವೆ. ಆ ಪೈಕಿ ಮನೆಮನೆಗಳಲ್ಲಿ ಬೊಂಬೆಗಳನ್ನು ಕೂರಿಸುವುದು ಕೂಡ ಒಂದಾಗಿದೆ.

ಆಶ್ವೀಜ ಮಾಸದ ಶುಕ್ಲಪಕ್ಷದ ಪ್ರಥಮ ದಿವಸ ನವರಾತ್ರಿ ಆರಂಭವಾಗುತ್ತದೆ. ಈ ಸಂದರ್ಭವೇ ಮನೆಮನೆಗಳಲ್ಲಿ ವಿವಿಧ ಬಣ್ಣದ ವಿವಿಧ ನಮೂನೆಯ ಗೊಂಬೆಗಳನ್ನಿರಿಸಲಾಗುತ್ತದೆ. ಅಲ್ಲದೆ ಅವುಗಳನ್ನು ಅಲಂಕರಿಸಿ ಮುತೈದೆಯರು ಆರತಿ ಬೆಳಗುವ ಮೂಲಕ ಪೂಜೆ ಸಲ್ಲಿಸುತ್ತಾರೆ. ಇದು ಪಾಡ್ಯದಿಂದ ಆರಂಭವಾಗಿ ಬಿದಿಗೆ, ತದಿಗೆ, ಚೌತಿ, ಪಂಚಮಿ, ಷಷ್ಠಿ, ಸಪ್ತಮಿ,ಅಷ್ಠಮಿ, ನವಮಿ ತನಕ ಒಂಬತ್ತು ದಿನಗಳ ಕಾಲ ನಡೆಯುತ್ತದೆ.

ಇತರೆ ದಿನಗಳಲ್ಲಿ ಮನೆಯ ಶೋಕೇಶ್‌ನಲ್ಲಿಟ್ಟ ಗೊಂಬೆಗಳಿಗೆ ನವರಾತ್ರಿ ಬರುತ್ತಿದ್ದಂತೆಯೇ ದೇವರಕೋಣೆಯಲ್ಲಿ ಪೂಜ್ಯ ಸ್ಥಾನ ದೊರೆಯುತ್ತದೆ. ಮನೆಯಲ್ಲಿರುವ ಗೃಹಿಣಿಯರಿಗೆ ಬೊಂಬೆಗಳನ್ನು ಕೂರಿಸುವ ಸಂಭ್ರಮ ಪ್ರಾರಂಭವಾಗುತ್ತದೆ. ಕೆಲವರು ಮಣ್ಣು, ಗಾಜು, ಉಲ್ಲಾನ್, ಪ್ಲಾಸ್ಟಿಕ್, ಪಿಂಗಾಣಿ, ಇನ್ನಿತರೆ ವಸ್ತುಗಳಿಂದ ತಯಾರಿಸಿದ ಗೊಂಬೆಗಳನ್ನು ಮನೆಯಲ್ಲಿ ಕೂರಿಸಿದರೆ ಮತ್ತೆ ಕೆಲವರು ಮಣ್ಣಿನಿಂದಲೇ ಮಾಡಿದ ಗೊಂಬೆಗಳನ್ನು ಕೂರಿಸುತ್ತಾರೆ. ಈ ಗೊಂಬೆಗಳು ಸಾಮಾನ್ಯವಾಗಿ ಪುರಾಣದ ಕಥೆಗಳನ್ನು, ನಾಡಿನ ಪರಂಪರೆಯನ್ನು ಸಾರುತ್ತಿರುತ್ತವೆ. ಈಶ್ವರ, ಗಣಪತಿ, ಲಕ್ಷ್ಮಿ, ಸರಸ್ವತಿ, ದುರ್ಗಿ ಮೊದಲಾದ ದೇವರ ಮೂರ್ತಿಗಳನ್ನೂ, ದುಷ್ಟ ಸಂಹಾರಕ್ಕೆ ಸಂಬಂಧಿಸಿದ ಕಥಾ ಹಿನ್ನಲೆಗಳನ್ನು ಹೊಂದಿರುವ ಗೊಂಬೆಗಳನ್ನು ಇಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಈ ಬಾರಿ ದಸರಾ ಮಂಕಾಗಿದೆ. ರಾತ್ರಿಯಾಯಿತೆಂದರೆ ಮಳೆ ಸುರಿಯುತ್ತದೆ. ಕೇವಲ ವಿದ್ಯುದ್ದೀಪ ಅಲಂಕಾರವಷ್ಟೆ ನೋಡಿ ಬರಬೇಕು ಅದು ಬಿಟ್ಟರೆ ಇನ್ನೇನು ಇಲ್ಲ. ಹೀಗಾಗಿ ಹೆಚ್ಚಿನವರು ಅದರಲ್ಲೂ ಹೆಣ್ಣು ಮಕ್ಕಳು ಮನೆಯಲ್ಲಿ ಬೊಂಬೆಗಳನ್ನು ಕೂರಿಸಿ ಸಂಭ್ರಮ ಪಡುತ್ತಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು