News Karnataka Kannada
Monday, April 29 2024
ಮೈಸೂರು

ಅಧಿಕಾರಿಗಳು ನಾಜಿಯಾ ಸುಲ್ತಾನರಂತಿರಬೇಕು: ಬನ್ನೂರು ರಾಜು

Mysore
Photo Credit :

ಮೈಸೂರು: ಜನ ಸ್ನೇಹಿಯಾಗಿ ಮಾನವೀಯ ಕಾಳಜಿಯಿಂದ ಅದರಲ್ಲೂ ಕಾರ್ಮಿಕರ ಕಲ್ಯಾಣ  ಕಾರ್ಯಗಳಲ್ಲಿ ವಿಶೇಷ ಆಸಕ್ತಿ ತೋರುತ್ತ ತಮ್ಮ ಇಲಾಖೆಯ ಮೂಲಕ ಪ್ರಾಮಾಣಿಕತೆಯಿಂದ ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕ ಇಲಾಖೆಯ ಮೈಸೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತೆ ನಾಜಿಯಾ ಸುಲ್ತಾನ ರಂತೆ ಪ್ರತಿಯೊಬ್ಬ ಅಧಿಕಾರಿಯೂ ತಮ್ಮ ತಮ್ಮ ಇಲಾಖೆಗಳಲ್ಲಿ ಕೆಲಸ ಮಾಡಿದರೆ ಸಮಸ್ಯೆಗಳೇ ಇರುವುದಿಲ್ಲ  ಮತ್ತು ಹೆಚ್ಚು ಜನಾನುಕೂಲ ಕೆಲಸಗಳಾಗುತ್ತವೆಂದು ಸಾಹಿತಿ  ಬನ್ನೂರು ಕೆ. ರಾಜು ಅವರು ಶ್ಲಾಘನೆಯ ಮಾತುಗಳನ್ನಾಡಿದರು.

ನಗರದ ನೂರಡಿ ರಸ್ತೆಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದಲ್ಲಿ ಕಾರ್ಮಿಕ ದಿನಾಚರಣೆಯ ಅಂಗವಾಗಿ  ಮೈಸೂರು ಕನ್ನಡ ವೇದಿಕೆಯ ಆಶ್ರಯದಲ್ಲಿ ಆಯೋಜಿಸಿದ್ದ ಕಾಯಕಯೋಗಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದ ಅವರು,ಕೆಲವು ಅಧಿಕಾರಿಗಳು ದೊಡ್ಡ ದೊಡ್ಡ ಮಾತನಾಡುತ್ತಾರೆ,ಉದ್ದುದ್ದ ಭಾಷಣ ಮಾಡುತ್ತಾರೆ. ಆದರೆ ಏನೂ ಪ್ರಯೋಜನವಿರದು. ಆದರೆ ನಾಜಿಯಾ ಸುಲ್ತಾನ ಅವರು ಹಾಗಲ್ಲ.ತಮ್ಮ ಇಲಾಖೆಯ ಪ್ರತಿಯೊಂದು ವಿಷಯಗಳನ್ನೂ, ಯೋಜನೆಗಳನ್ನೂ ದೊರೆತ ಸಾರ್ವಜನಿಕ ಸಂಘ-ಸಂಸ್ಥೆಗಳ ವೇದಿಕೆಗಳ ಮೂಲಕ ಹಾಗೂ ಇಲಾಖೆಯ ಕಾರ್ಯಕ್ರಮಗಳ ಮುಖೇನ ಎಲ್ಲೂ  ವಿಷಯಾಂತರ ಮಾಡದೆ ತಮ್ಮ ನಿರರ್ಗಳವಾದ ಆಕರ್ಷಕ ಭಾಷಣದಿಂದಲೇ ಕಾರ್ಮಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದು, ಇವರದು ನಿಷ್ಪ್ರಯೋಜಕ ಒಣ ಭಾಷಣವಾಗಿರದೆ ಜನೋಪಯೋಗಿ ಭಾಷಣ ವಾಗಿರುತ್ತದೆಂದರು.

ವಿಶ್ವೇಶ್ವರಯ್ಯ ನಲ್ಲಿ ಮತ್ತು ಒಳಚರಂಡಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಹೇಶ್ ಎಸ್. ಜಯನಗರ ಸೇರಿದಂತೆ ವಿವಿಧ ಕ್ಷೇತ್ರಗಳ ಕಾರ್ಮಿಕ ಸಾಧಕರಾದ ಪೌರಕಾರ್ಮಿಕ ಕಣ್ಣಯ್ಯ, ಪತ್ರಕರ್ತ ಯಶಸ್ ಮಾವತ್ತೂರು, ಆಟೋ ಚಾಲಕಿ  ಶೋಭಾ,ಗಾರೆ ಕಾರ್ಮಿಕ ಮಂಜು, ಎಳನೀರು ವ್ಯಾಪಾರಿ ನಾಗರತ್ನ, ಸಮಾಜಸೇವಕಿ ಶಶಿಕಲಾ,ವಿಶೇಷ ಚೇತನರಾದ ಸಣ್ಣ ವ್ಯಾಪಾರಿ ಮಹದೇವಮ್ಮ ಅವರುಗಳಿಗೆ ನಾಜಿಯಾ ಸುಲ್ತಾನ ಅವರು ಕಾಯಕಯೋಗಿ ಪ್ರಶಸ್ತಿ ನೀಡಿ ಗೌರವಿಸಿದರು.

ನಾಜಿಯಾ ಸುಲ್ತಾನ ಅವರು, ನಮ್ಮ ಕಾರ್ಮಿಕ ಇಲಾಖೆ ಇರುವುದೇ ಕಾರ್ಮಿಕರ ಹಿತರಕ್ಷಣೆಗಾಗಿ. ಸಹಸ್ರಾರು ಅಸಂಘಟಿತ ಕಾರ್ಮಿಕರು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುತ್ತಾರೆ. ಇವರಲ್ಲಿ ಬಹಳಷ್ಟು ಮಂದಿಗೆ ಅವರಿಗೋಸ್ಕರವೇ ಕಾರ್ಮಿಕ  ಇಲಾಖೆ ಎಂಬುದೊಂದು ಇದೆ ಎಂಬುದೇ ಗೊತ್ತಿರುವುದಿಲ್ಲ. ಆದ್ದರಿಂದ ಏನೇ ಕೆಲಸ ಮಾಡುತ್ತಿರಲಿ  ಪ್ರತಿಯೊಬ್ಬ ಕಾರ್ಮಿಕರೂ ನಮ್ಮ ಇಲಾಖೆಯ ಬಗ್ಗೆ ಮೊದಲು ತಿಳಿದುಕೊಂಡು ನಂತರ ಸೂಕ್ತ ದಾಖಲೆಗಳೊಡನೆ ನೊಂದಾಯಿಸಿಕೊಂಡು ಅಧಿಕೃತ ಗುರುತಿನ ಕಾರ್ಡ್ ಪಡೆದುಕೊಳ್ಳಬೇಕು. ಬಹಳಷ್ಟು ಯೋಜನೆಗಳು ಕಾರ್ಮಿಕ ಕಲ್ಯಾಣಕ್ಕಾಗಿಯೇ ಇವೆ. ಕಾರ್ಮಿಕ ಕುಟುಂಬಗಳ ಮದುವೆ ಮೊದಲ್ಗೊಂಡು ಮನೆ ನಿರ್ಮಾಣ, ಮಕ್ಕಳ ಶಿಕ್ಷಣ,ಆರೋಗ್ಯ, ಅಪಘಾತ, ರೋಗ-ರುಜಿನ, ಸಾವು-ನೋವು ಮುಂತಾಗಿ ಪ್ರತಿಯೊಂದಕ್ಕೂ ಸರ್ಕಾರದ ವಿವಿಧ ಯೋಜನೆಗಳ ಮೂಲಕ ನಮ್ಮ ಇಲಾಖೆ ಕಾರ್ಮಿಕರಿಗೆ ನೆರವಾಗುತ್ತದೆ. ಇದನ್ನು ಸದ್ಬಳಕೆ ಮಾಡಿಕೊಂಡು ಗೊತ್ತಿಲ್ಲದ ಇತರೆ ಕಾರ್ಮಿಕರಿಗೂ ನಮ್ಮ ಇಲಾಖೆಯ ಸವಲತ್ತುಗಳ ಬಗ್ಗೆ ನೀವುಗಳು ತಿಳಿಸಿಕೊಡಬೇಕೆಂದು ಹೇಳಿದ ಅವರು, ಇದಕ್ಕೆ ಸಂಬಂಧಿಸಿದಂತೆ ಇಲಾಖೆಯ ಯೋಜನೆಗಳ ಭಿತ್ತಿ ಚಿತ್ರವನ್ನು ಎಲ್ಲೆಡೆ ಪ್ರದರ್ಶಿಸುವಂತೆ ಭಿತ್ತಿ ಚಿತ್ರಗಳನ್ನು ವಿತರಿಸಿ ಕಾರ್ಮಿಕರಿಗೆ ಅನುಕೂಲವಾಗುವಂತಹ ಇಲಾಖೆಯ ಎಲ್ಲಾ ಯೋಜನೆಗಳನ್ನು ಸವಿವರವಾಗಿ ತಿಳಿಸಿಕೊಟ್ಟರು.

ಸಮಾಜಸೇವಕ ಶ್ರೀಷಭಟ್ ಸಮಾರಂಭವನ್ನು ಉದ್ಘಾಟಿಸಿ ಶುಭ ಹಾರೈಸಿದರು.ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್.  ಬಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು