News Karnataka Kannada
Sunday, May 05 2024
ಮೈಸೂರು

ಮೈಸೂರು: ರಾಜರ ಕೊಡುಗೆಗೆ ಸೀತಾವಿಲಾಸ ಛತ್ರ ಸಾಕ್ಷಿ

Mysuru: Sitavilasa Chhatra is a testimony to the contribution of kings
Photo Credit : By Author

ಮೈಸೂರು: ಮೈಸೂರು ಮಹಾರಾಜರ ಕಾಲದಲ್ಲಿ ದಸರಾ ಜಂಬೂಸವಾರಿಯನ್ನು ವೀಕ್ಷಿಸಲು ದೂರದ ಊರುಗಳಿಂದ ಬರುವ ಪ್ರಜೆಗಳ ಅನುಕೂಲಕ್ಕಾಗಿ ಛತ್ರಗಳನ್ನು ಕಟ್ಟಿಸಲಾಗಿತ್ತು ಎಂಬುದಕ್ಕೆ ನಗರದ ಚಾಮರಾಜ ಜೋಡಿ ರಸ್ತೆಯ ಶಾಂತಲ ಚಿತ್ರಮಂದಿರದ ಬಳಿಯಿರುವ ಸೀತಾವಿಲಾಸ ಛತ್ರ ಸಾಕ್ಷಿಯಾಗಿದೆ.

ನಾಡ ಹಬ್ಬದ ದಸರಾದ ಸಂಭ್ರಮ ಬರೀ ನಗರ ಮಾತ್ರವಲ್ಲದೆ, ಹಳ್ಳಿಹಳ್ಳಿಗೂ ವ್ಯಾಪಿಸುತ್ತಿತ್ತು. ಹೀಗಾಗಿ ಮಹಾರಾಜರು ಜಂಬೂಸವಾರಿಯಲ್ಲಿ ತೆರಳುವ ಆ ಸುಂದರ ಕ್ಷಣಗಳನ್ನು ಕಣ್ತುಂಬಿಸಿಕೊಳ್ಳಲು ಜನ ಸಮಾರೋಪಾದಿಯಲ್ಲಿ ಬರುತ್ತಿದ್ದರು. ಆದರೆ ಆ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಿಗೆ ಸರಿಯಾದ ರಸ್ತೆ, ವಾಹನ ಸಂಚಾರ ಇರಲಿಲ್ಲ. ಹೀಗಾಗಿ ಕೆಲವರು ನಡೆದುಕೊಂಡು ಬಂದರೆ ಮತ್ತೆ ಕೆಲವರು ಎತ್ತಿನಗಾಡಿಗಳಲ್ಲಿ ಬರುತ್ತಿದ್ದರು. ಹೀಗೆ ಬಂದವರು ನಗರದಲ್ಲಿ ವಾಸ್ತವ್ಯ ಹೂಡಿ ರಾಜವೈಭವವನ್ನು ಕಣ್ಣಾರೆ ನೋಡಿ ಸಂತೆಯಲ್ಲಿ ಒಂದಷ್ಟು ವಸ್ತುಗಳನ್ನು ಖರೀದಿಸಿ, ಮತ್ತೊಂದಷ್ಟು ತಿನಿಸುಗಳ ರುಚಿಯನ್ನು ಸವಿದು ದಸರಾದ ಸುಂದರ ದೃಶ್ಯಗಳನ್ನು ಮೆಲುಕು ಹಾಕುತ್ತಾ ತಮ್ಮ ಊರಿನತ್ತ ಮುಖ ಮಾಡುತ್ತಿದ್ದರು.

ದಸರಾ ವೇಳೆ ಮಾತ್ರವಲ್ಲದೆ, ಇತರೆ ದಿನಗಳಲ್ಲಿ ದೂರದ ಊರುಗಳಿಂದ ಬರುವವರು ವಾಸ್ತವ್ಯ ಹೂಡಲೆಂದೇ ನಗರದ ಹಲವೆಡೆ ಧರ್ಮ ಛತ್ರಗಳನ್ನು ನಿರ್ಮಿಸಲಾಗಿತ್ತು. ಇಲ್ಲಿ ಕೆಲವು ದಿನಗಳವರೆಗೆ ಉಳಿದುಕೊಂಡು ನಂತರ ತೆರಳುವ ಅವಕಾಶವಿತ್ತು. ಈ ವೇಳೆ ಊಟ, ತಿಂಡಿ, ಇನ್ನಿತರ ಅಗತ್ಯತೆಗಳನ್ನು ನೋಡಿಕೊಳ್ಳಲಾಗುತ್ತಿತ್ತು. ಇಂತಹ ಛತ್ರಗಳ ಪೈಕಿ ಚಾಮರಾಜ ಜೋಡಿ ರಸ್ತೆಯ ಶಾಂತಲ ಚಿತ್ರಮಂದಿರದ ಬಳಿಯಿರುವ ಸೀತಾವಿಲಾಸ ಛತ್ರವೂ ಒಂದಾಗಿದ್ದು, ಇದು ಇತಿಹಾಸದ ಕಥೆ ಹೇಳುತ್ತಾ ಇವತ್ತೂ ನಮ್ಮ ನಡುವೆಯಿದ್ದು, ಹಲವು ಕುಟುಂಬಗಳಿಗೆ ಆಶ್ರಯ ನೀಡಿದೆ.

ದಸರಾ ವೀಕ್ಷಣೆಗೆ ಬರುವವರಿಗೆ ವಾಸ್ತವ್ಯಕ್ಕೆ ತೊಂದರೆಯಾಗದಂತೆ ನಿರ್ಮಿಸಲಾಗಿರುವ ಸೀತಾ ವಿಲಾಸ ಛತ್ರ ಮೈಸೂರಿನ ಪಾರಂಪರಿಕ ಕಟ್ಟಡವಾಗಿದೆ. ಇದು ಮೇಲ್ನೋಟಕ್ಕೆ ಪಾಳುಬಿದ್ದ ಕಟ್ಟಡದಂತೆ ಕಂಡು ಬಂದರೂ ಇತರೆ ಕಟ್ಟಡಗಳಿಗಿಂತ ವಿಭಿನ್ನವಾಗಿ ನಮ್ಮನ್ನು ಸೆಳೆಯುತ್ತದೆ. ಈ ಕಟ್ಟಡವು ಸುಮಾರು ಒಂದು ಕಾಲು ಶತಮಾನವನ್ನು ಪೂರೈಸಿದೆ ಎಂದು ಹೇಳಲಾಗುತ್ತಿದ್ದು ಇದರ ನಿರ್ಮಾತೃ ರಾಜರ್ಷಿ ನಾಲ್ವಡಿಕೃಷ್ಣರಾಜ ಒಡೆಯರ್ ಆಗಿದ್ದಾರೆ.

ಅವತ್ತು ಈ ಕಟ್ಟಡವನ್ನು ಛತ್ರದ ಪರಿಕಲ್ಪನೆಯಲ್ಲಿಯೇ ನಿರ್ಮಿಸಿದ್ದು ವಿಶಾಲವಾದ ಜಗಲಿ, ಮುಂದೆ ವಿಶಾಲ ಪ್ರಾಂಗಣ, ಕಟ್ಟಡಕ್ಕೆ ಬೃಹತ್ ಕಂಬಗಳು ಆಸರೆಯಾಗಿವೆಯಲ್ಲದೆ, ಆಕರ್ಷಣೆಯೂ ಹೌದು. ಇನ್ನು ಇಲ್ಲಿನ ಪ್ರತಿಯೊಂದು ಕೊಠಡಿಯೂ ವಿಶಾಲವಾಗಿದ್ದು, ಮಹಡಿಗೆ ತೆರಳಲು ಮರದ ಮೆಟ್ಟಿಲು ನಿರ್ಮಿಸಲಾಗಿದ್ದು, ವಿದ್ಯುತ್ ಸಂಪರ್ಕಕ್ಕೆ ಮರದ ಪಟ್ಟಿಯನ್ನು ಬಳಸಲಾಗಿದ್ದು, ಮದ್ರಾಸ್ ತಾರಸಿಯಿಂದ ನಿರ್ಮಿಸಿದ ಕಟ್ಟಡವಾಗಿದ್ದು, ಇಂದಿಗೂ ಇದು ಗಟ್ಟಿಮುಟ್ಟಾಗಿದೆ.

ಅವತ್ತಿನ ದಿನಗಳಲ್ಲಿ ಈ ಕಟ್ಟಡವನ್ನು ಮಹಾರಾಜರು ದಸರಾ ವೀಕ್ಷಿಸಲು ರಾಜ್ಯದ ಇತರೆ ಕಡೆಗಳಿಂದ ಬರುವ ಪ್ರವಾಸಿಗರ ವಾಸ್ತವ್ಯಕ್ಕಾಗಿ ನಿರ್ಮಿಸಿದ್ದರು ಎಂದು ಹೇಳಲಾಗಿದೆ. ಅವತ್ತಿನ ಕಾಲಕ್ಕೆ ಇದು ವಿಶಾಲವಾದ ಕಟ್ಟಡವಾಗಿತ್ತು. ಜತೆಗೆ ಅರಮನೆಗೆ ಒಂದಷ್ಟು ಹತ್ತಿರದಲ್ಲಿತ್ತು. ಹೀಗಾಗಿ ದಸರಾ ನೋಡಲು ಆಗಮಿಸುತ್ತಿದ್ದ ಜನರು ಇಲ್ಲಿ ತಂಗುತ್ತಿದ್ದರು. ತದ ನಂತರದ ವರ್ಷಗಳಲ್ಲಿ ಮೈಸೂರು ಅಭಿವೃದ್ಧಿಯಾಗ ತೊಡಗಿತು. ಹೀಗಾಗಿ ಈ ಛತ್ರವನ್ನು ಭಾಗಗಳನ್ನಾಗಿ ಮಾಡಿ ಅರಮನೆಯಲ್ಲಿ ವಿವಿಧ ಕೆಲಸಗಳನ್ನು ಮಾಡುತ್ತಿದ್ದ ಸುಮಾರು ಹತ್ತೊಂಬತ್ತು ನೌಕರರಿಗೆ ಬಾಡಿಗೆ ರೂಪದಲ್ಲಿ ನೀಡಲಾಯಿತು. ಇವತ್ತಿಗೂ ಈ ಕುಟುಂಬಗಳ ತಲೆಮಾರಿನವರು ಇಲ್ಲಿ ವಾಸಿಸುತ್ತಿದ್ದಾರೆ. ಅದು ಏನೇ ಇರಲಿ ಮೈಸೂರು ಮಹಾರಾಜರ ದೂರದೃಷ್ಟಿಯಲ್ಲಿ ನಿರ್ಮಾಣವಾಗಿದ್ದ ಹಲವು ಛತ್ರಗಳು ಜನರಿಗೆ ಸಹಕಾರಿಯಾಗಿದ್ದವು ಎನ್ನುವುದು ಸತ್ಯ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು