News Karnataka Kannada
Saturday, May 11 2024
ಮೈಸೂರು

ಮೈಸೂರು: ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಗೆ ಪ್ರಧಾನಿಗೆ ಡಾ.ಶ್ವೇತಾ ಮಡಪ್ಪಾಡಿ ಪತ್ರ

Dr. Shwetha Madappadi has written a letter to The Prime Minister to give stringent punishment to the rapists.
Photo Credit : By Author

ಮೈಸೂರು: ಕೊಲೆಗಡುಕರನ್ನು, ಅತ್ಯಾಚಾರಿಗಳನ್ನು ಶಿಕ್ಷಿಸುವ ಪ್ರಕ್ರಿಯೆ ಏಕೆ ನಿಧಾನವಾಗುತ್ತಿದೆ? ನಿಧಾನಗತಿಯ ಶಿಕ್ಷೆಯ ಪ್ರಕ್ರಿಯೆಗಳು ಹಾಗೂ ದೇಶದಲ್ಲಿ ನಡೆಯುತ್ತಿರುವ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಯ ಪ್ರಮಾಣ ಎರಡನ್ನು ಗಮನಿಸುತ್ತಿದ್ದರೆ ಆತಂಕವಾಗುತ್ತಿದ್ದು, ಅತ್ಯಾಚಾರಿ ಕೊಲೆಗಡುಕರಿಗೆ ಶೀ‍‍ಘ್ರವೇ ಶಿಕ್ಷೆ ವಿಧಿಸುವಂತೆ ಉದ್ಯಮಿ ಡಾ.ಶ್ವೇತಾ ಮಡಪ್ಪಾಡಿ ಪ್ರಧಾನಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ಕೊಲ್ಲುವ ಪ್ರಕ್ರಿಯೆ ಬಹಳ ಸುಲಭ ಮತ್ತು ಸೇಫ್ ಎಂಬ ಸಾಮಾಜಿಕ ಧೈರ್ಯ ಸೃಷ್ಟಿಯಾಗುತ್ತಿದೆಯೇ? ಎಂದು ಪ್ರಶ್ನಿಸಿದ್ದಾರೆ. ಸಾರ್ವಜನಿಕವಾಗಿ ಕೊಲೆಯಾದ ಎಷ್ಟು ಹೆಣ್ಣುಮಕ್ಕಳಿಗೆ ಇಲ್ಲಿಯವರೆಗೆ ನ್ಯಾಯದೊರಕಿದೆ. ಮನುಷ್ಯನನ್ನು ಮನುಷ್ಯ ಕೊಲ್ಲುವ ಈ ಹೊಸ ಸಂಸ್ಕೃತಿ ಎಲ್ಲಿಗೆ ಹೋಗಿ ತಲುಪುತ್ತದೆ? ಕೊಲೆಗಾರರು ಮತ್ತು ಅತ್ಯಾಚಾರಿಗಳಿಗೆ ಶಿಕ್ಷೆ ವಿಧಿಸುವ ಪ್ರಕ್ರಿಯೆ ನಿಧಾನವಾದಷ್ಟೂ ಕೊಲೆಗಾರರಿಗೆ ಧೈರ್ಯಕೊಟ್ಟಂತಲ್ಲವೇ? ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ದೇಶವನ್ನುಕಾನೂನಾತ್ಮಕವಾಗಿ ಇನ್ನಷ್ಟು ಭದ್ರಪಡಿಸಬೇಕಾದ ಅವಶ್ಯಕತೆಯಿದೆ. ದೇಶದಲ್ಲಿ ಕಾನೂನು ಜಾರಿಯಲ್ಲಿರುವುದು ಜನಹಿತಕ್ಕಾಗಿ ಮತ್ತು ಪ್ರತಿ ಪ್ರಜೆಯೂ ಸುರಕ್ಷಿತವಾಗಿರಬಹುದು ಎಂಬ ಯಾವ ನಂಬಿಕೆಯೂ ಕಳೆದು ಹೋಗುತ್ತಿದೆ. ಹೆಣ್ಣುಮಕ್ಕಳು ಹಾದಿಬೀದಿಯಲ್ಲಿ ಬರ್ಬರವಾಗಿ ಕೊಲೆಯಾಗುತ್ತಿದ್ದಾರೆ. ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲಾಗುತ್ತಿರುವ ಆತಂಕಕಾರಿ ಆಕ್ರಮಣಗಳನ್ನು ಕುರಿತು ಈಗಾಗಲೇ ಸರಕಾರ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂಬುದು ಅಸ್ಪಷ್ಟ.

ನಾವು ಮನುಷ್ಯರು ತಲೆತಗ್ಗಿಸುವಂಥ ಹಲವು ಘಟನೆಗಳು ಮತ್ತೆ ಮತ್ತೆ ರಾಜಾರೋಷವಾಗಿ ಮರುಕಳಿಸುತ್ತಿದೆಯೇ ಹೊರತು, ಒಂದು ತಪ್ಪಿಗೂ ತಕ್ಕ ಶಿಕ್ಷೆಯಾಗಿದ್ದು ಜನ ಸಾಮಾನ್ಯರ ಗಮನಕ್ಕೆ ಬಂದಿರುವುದಿಲ್ಲ. ಹೈದರಾಬಾದ್(ದಿಶಾ) ಗ್ಯಾಂಗ್‌ರೇಪ್, ನಿರ್ಭಯಾ (ಜ್ಯೋತಿಸಿಂಗ್) ಹತ್ಯೆಎರಡನ್ನು ಹೊರತುಪಡಿಸಿ ಉಳಿದವುಗಳ ಕತೆ ಏನು? ಜನಸಾಮಾನ್ಯರು ಆತಂಕಿತರಾಗಿದ್ದೇವೆ. ಸಾಕ್ಷಿಯ ಭೀಕರ ಕೊಲೆ ದೇಶದ ಎದೆನಡುಗಿಸುವಂಥದ್ದು. ಶ್ರದ್ಧಾ ಹತ್ಯೆ ನಮಗೆ ನಾವೇ ಮಾಡಿಕೊಂಡ ಅವಮಾನ. ಕೆದಕಿದರೆ ಇಂಥ ನೂರು ಘಟನೆಗಳು ಸಿಗುತ್ತವೆ.

ರಾಜ್ಯದಲ್ಲಿ ಕೂಡ ಹಲವಾರು ಪ್ರಕರಣಗಳು ಇನ್ನೂಇತ್ಯರ್ಥಗೊಂಡಿಲ್ಲ. ಮಂಡ್ಯದಲ್ಲಿ ಟ್ಯೂಷನ್ ಶಿಕ್ಷಕನಿಂದ ಅತ್ಯಾಚಾರಕ್ಕೊಳಗಾದ ಮಗುವಿಗೆ ಇನ್ನೂ ನ್ಯಾಯದೊರಕಿಲ್ಲ. ಮುರುಘಾಮಠದ ವಿಚಾರ ಎಲ್ಲಿಗೆ ಬಂತು ?ಪ್ರಶ್ನಿಸಬಹುದಾದ ವಿದ್ಯಾವಂತರಿಂದು ’ತಾವು ತಮಗೆ ಕೆಲಸ ಕೊಟ್ಟ ಸಂಸ್ಥೆಗಳ ಅಧೀನರು ಮತ್ತು ಮರ್ಯಾದೆಯ ಪ್ರಶ್ನೆಗಾಗಿ ಮಾತನಾಡುವಂತಿಲ್ಲ ಎನ್ನುತ್ತಾರೆ. ಹೊಸ ಯುವ ಜನತೆಯನ್ನು ಕಟ್ಟುವ ಜವಾಬ್ಧಾರಿ ಶಿಕ್ಷಕರು ಹಾಗೂ ಕಾಲೇಜು ಪ್ರಾಧ್ಯಾಪಕರುಗಳ ಮೇಲಿದೆ. ಶಾಲೆ ಹಾಗೂ ಕಾಲೇಜುಗಳು ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಕಟ್ಟುವ ಗುರುತರ ಜವಾಬ್ಧಾರಿ ಹೊಂದಿವೆ. ತಮ್ಮವಿದ್ಯಾರ್ಥಿನಿಯರರಕ್ಷಣೆಗಾಗಿ ಕಾನೂನಾತ್ಮಕ ರಕ್ಷಣೆಯನ್ನು ಗಟ್ಟಿಗೊಳಿಸುವಂತೆ ಕೋರುವುದು ಶಿಕ್ಷಕ ವೃಂದದ ಕರ್ತವ್ಯವೂ ಹೌದು. ಆದರೆ ಅವರೂ ಮಾತು ಮರೆತಿದ್ದಾರೆ. ವಿದ್ಯಾವಂತರೇ ನ್ಯಾಯ ಕೇಳಲು ಹಿಂಜರಿದರೆ ಇನ್ನು ಹೇಗೆ ಮಾತನಾಡಬಲ್ಲರು? ಜನಪ್ರತಿನಿಧಿಗಳು ಮತಬ್ಯಾಂಕಿನ ಹಿಂದೆ ಬಿದ್ದಿದ್ದಾರೆ.

ರಾಜಕಾರಣಿಗಳು ತಮ್ಮ ಅಸ್ತಿತ್ವದ ಅಳಿವು- ಉಳಿವುಗಳ ಕುರಿತು ಚಿಂತಿಸುವುದರಲ್ಲೇ ಕಳೆದು ಹೋಗಿದ್ದಾರೆ. ಇವೆಲ್ಲವುಗಳ ನಡುವೆ ಜನಸಾಮಾನ್ಯರೂ ದ್ವೇಷದ ರಾಜಕಾರಣದ ನಡುವೆ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ತಲ್ಲಣಿಸುತ್ತಿದ್ದಾರೆ. ರಾಷ್ಟ್ರೀಯ ಪಕ್ಷಗಳು ಪರಸ್ಪರ ದೂಷಿಸುವುದರಲ್ಲೇ ಕಾಲಹರಣ ಮಾಡುತ್ತಿವೆ. ಎಂದೂ ಇರದ ಕೌರ್ಯ ಹೆಣ್ಣಿನ ವಿಚಾರವಾಗಿ ಪ್ರಸ್ತುತ ಸಮಾಜದಲ್ಲಿ ಕಂಡು ಬರುತ್ತಿದೆಯೆಂದರೆ ಕಾನೂನು ಹೆಣ್ಣುಮಕ್ಕಳ ವಿಚಾರವಾಗಿ ಇನ್ನೂ ಸುಭದ್ರಗೊಳ್ಳಬೇಕಾದ ಅವಶ್ಯಕತೆಯಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಯಾವುದೇ ಬದಲಾವಣೆಗೆ ಒಂದು ಸಮಗ್ರ ಪ್ರಯತ್ನದ ಅವಶ್ಯಕತೆಯಿದೆ. ದೇಶದಲ್ಲಿ ಹೆಣ್ಣುಮಕ್ಕಳಿಗೆ ಭದ್ರತೆ ನೀಡುವಂತೆ ಮಾಡಲು ಒಂದು ಸಂಘಟಿತ ಪ್ರಯತ್ನದ ಅವಶ್ಯಕತೆಯಿದೆ. ಪೋಲೀಸ್ ವ್ಯವಸ್ಥೆ ಹೆಣ್ಣಿಗೆ ಇನ್ನಷ್ಟು ರಕ್ಷಣೆ ಒದಗಿಸಬೇಕಾಗಿದೆ. ಸಾಮಾಜಿಕ ಭದ್ರತೆ ಒದಗಿಸುವಲ್ಲಿ ಪೋಲಿಸರ ಪಾತ್ರ ಬಹುಮುಖ್ಯ. ಸಾರ್ವಜನಿಕ ಸ್ಥಳಗಳಲ್ಲಿ ನಿರಾಯಾಸವಾಗಿ ಕೊಲೆಗಾರರು ಓಡಾಡುತ್ತಿದ್ದಾರೆ ಎಂದರೆ ಅದು ಪೋಲೀಸ್‌ ಇಲಾಖೆಯ ಅಸಹಾಯಕತೆ ಹಾಗೂ ಸೋಲನ್ನುಎತ್ತಿ ಹಿಡಿಯುತ್ತದೆ.

ದೇಶದ ಹೊರಗಿನ ಶತ್ರುಗಳಿಂದ ನಮ್ಮನ್ನು ಕಾಪಾಡಲು ಸೈನಿಕರು ಪಣತೊಡುವಂತೆ ದೇಶದ ಒಳಗಿನ ಘಾತಕರಿಂದ ಜನಸಾಮಾನ್ಯರಿಗೆ ಪೋಲಿಸರು ರಕ್ಷಣೆ ನೀಡಬೇಕಿದೆ. ಈ ಎಲ್ಲ ವ್ಯವಸ್ಥೆಯನ್ನು ಬಲಪಡಿಸದೇ ಹೋದಲ್ಲಿ ಮುಂದೆ ಇನ್ನೂ ಅಪಾಯಕಾರಿ ವ್ಯವಸ್ಥೆಯೊಂದನ್ನು ನಾವು ಎದುರು ನೋಡಬೇಕಾಗುತ್ತದೆ ಎಂದವರು ಅಭಿಪ್ರಾಯಪಟ್ಟರು.

ಹಾಗಾಗಿ ಇಲ್ಲಿಯವರೆಗಿನ ಅನ್ಯಾಯಗಳಿಗೆ ಸಂಬಂಧಪಟ್ಟಂತೆ ಕಾನೂನಾತ್ಮಕವಾದ ಎಲ್ಲಾ ಪ್ರಕ್ರಿಯೆಗಳನ್ನು ಶೀಘ್ರವೇ ಪೂರ್ಣಗೊಳಿಸಿ ಕೊಲೆಗಾರರು ಮತ್ತು ಅತ್ಯಾಚಾರಿಗಳಿಗೆ ತಕ್ಕ ಶಿಕ್ಷೆಯನ್ನು ನೀಡುವ ಮೂಲಕ ಸಮಾಜಕ್ಕೆ ಒಂದು ಎಚ್ಚರಿಕೆಯನ್ನು ನೀಡಬೇಕೆಂದು ಈ ಮೂಲಕ ಮಾನ್ಯ ಪ್ರಧಾನಿಯವರಿಗೆ ಹಾಗೂ ಸಂಬಂಧಪಟ್ಟ ಇಲಾಖೆಗೆ ಕೋರಿಕೊಳ್ಳುವುದಾಗಿ ಅವರು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು