ನಂಜನಗೂಡು: ನಂಜನಗೂಡು ತಾಲ್ಲೂಕಿನ ಹೆಮ್ಮರಗಾಲ ಗ್ರಾಮದಲ್ಲಿ ನಿರ್ಮಾಣವಾಗಿರುವ ನೂತನ ಹೆಮ್ಮರಗಾಲ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣದಲ್ಲಿ ಭಾರೀ ಅಕ್ರಮ ನಡೆದಿದ್ದು, ತನಿಖೆ ನಡೆಸುವಂತೆ ಯುವ ಮುಖಂಡ ಕುಂಬ್ರಹಳ್ಳಿ ಶಶಿಕುಮಾರ್ ಆಗ್ರಹಿಸಿದ್ದಾರೆ.

ನಂಜನಗೂಡಿನಲ್ಲಿ ಮಾತನಾಡಿದ ಅವರು, ಹೆಮ್ಮಲಗಾಲ ಗ್ರಾಮ ಪಂಚಾಯಿತಿಯಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಸರಿಯಾಗಿ ಮಾಡುತ್ತಿಲ್ಲ. ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಬೀದಿ ದೀಪ ಅಳವಡಿಸಿಲ್ಲ. ಚರಂಡಿಗಳು ಕಬ್ಬೆದ್ದು ನಾರುತ್ತಿವೆ ಚರಂಡಿಗಳನ್ನು ಸ್ವಚ್ಛತೆ ಮಾಡಿಲ್ಲ. ಈ ಬಗ್ಗೆ ಸಾಕಷ್ಟು ಬಾರಿ ಗ್ರಾಮ ಸಭೆಗಳಲ್ಲಿ ಕೇಳಿದ್ದೇನೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ.

ಅಲ್ಲದೆ ಸುಮಾರು 5 ವರ್ಷಗಳಿಂದಲೂ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ ಆದರೆ ಬಾಲ್ ಆಗಿವೆ ಕೆಲಸ ಮಾತ್ರ ಆಗಿರಲಿಲ್ಲ. ನರೇಗಾ ಯೋಜನೆ, ವರ್ಗ 2 ಮತ್ತು 15ನೇ ಹಣಕಾಸು ಯೋಜನೆಯನ್ನು ಸಂಪೂರ್ಣವಾಗಿ ದುರ್ಬಳಕೆ ಮಾಡಿಕೊಂಡು ಅನುದಾನವನ್ನು ಗುಳುಂ ಮಾಡಿದ್ದಾರೆ. ಕಟ್ಟಡ ನಿರ್ಮಾಣದ ಹೆಸರಿನಲ್ಲಿ ಎಲ್ಲಾ ಬಿಲ್ ಗಳನ್ನು ಮಾಡಿಕೊಂಡಿದ್ದಾರೆ.

ಗುಣಮಟ್ಟದಿಂದ ಕಟ್ಟಡದ ನಿರ್ಮಾಣವಾಗಿಲ್ಲ. ಕಳೆದ ಹದಿನೈದು ದಿನಗಳಿಂದ ತುರ್ತಾಗಿ ಕಟ್ಟಡದ ಕೆಲಸ ಮಾಡಿ, ಉದ್ಘಾಟನೆ ಮಾಡಲು ಹೊರಟಿದ್ದಾರೆ. ಐದು ವರ್ಷಗಳಿಂದ ಆಗದ ಕೆಲಸವನ್ನು ಹದಿನೈದು ದಿನಕ್ಕೆ ಮಾಡಿದ್ದಾರೆ ಎಂದರೆ ನನಗೆ ಅನುಮಾನ ಕಾಡುತ್ತಿದೆ. ಅನುದಾನಗಳನ್ನು ದುರ್ಬಳಕೆ ಮಾಡಿಕೊಂಡು ಅಕ್ರಮ ನಡೆಸಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.