ನಂಜನಗೂಡು: ತಾಲ್ಲೂಕಿನ ಹುಲ್ಲಹಳ್ಳಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇಕೋ ಕ್ಲಬ್ ವತಿಯಿಂದ ಪರಿಸರ ಸಂರಕ್ಷಣೆಯ ಜಾಗೃತಿ ಜಾಥಾಕ್ಕೆ ಚಾಲನೆ ನೀಡಲಾಯಿತು.

ಹುಲ್ಲಹಳ್ಳಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪರಿಸರ ಸಂರಕ್ಷಣೆಯ ಬಗ್ಗೆ ಘೋಷಣೆಗಳನ್ನು ಕೂಗಿದರು. ಬಿತ್ತಿ ಪತ್ರಗಳನ್ನು ಸಿದ್ಧಪಡಿಸಿ ಪ್ರಮುಖ ಸ್ಥಳಗಳಲ್ಲಿ ಪ್ರದರ್ಶಿಸಿದರು.

ನಂತರ ಕಾಲೇಜಿನ ಪ್ರಾಂಶುಪಾಲರಾದ ಸೋಮಶೇಖರ್ ಮಾತನಾಡಿ, ಜಾಗತಿಕ ತಾಪಮಾನ ಕಡಿಮೆಗೊಳಿಸಿ ಉತ್ತಮ ಗಾಳಿ, ಹಾಗೂ ಹೆಚ್ಚಿನ ಮಳೆ ಪಡೆಯಲು ಅಗತ್ಯವಿರುವ ಸ್ಥಳಗಳಲ್ಲಿ ಗಿಡಗಳನ್ನು ನೆಟ್ಟು ಪೋಷಿಸುವಂತೆ ಕರೆ ನೀಡಿದರು. ಪರಿಸರದ ಸ್ವಚ್ಛತೆಯನ್ನು ಕಾಪಾಡಿಕೊಂಡು ತ್ಯಾಜ್ಯಗಳನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡುವಂತೆ ಮನವಿ ಮಾಡಿದರು.

ಬಳಿಕ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಹೆಚ್. ಎಂ. ಬಸವಣ್ಣ ಮಾತನಾಡಿ, ವಿದ್ಯಾರ್ಥಿಗಳು ಪರಿಸರದ ಕಾಳಜಿಯನ್ನು ಬೆಳೆಸಿಕೊಂಡು ಸುತ್ತಮುತ್ತಲಿನ ವಾತಾವರಣವನ್ನು ಶುಚಿಯಾಗಿಡುವಂತೆ ಕರೆ ನೀಡಿದರು. ಜಾಥಾ ಜಾಗೃತಿ ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ನಾಗರತ್ನ, ಸುಶೀಲ, ಸುರೇಶ್ ಮನು, ಪ್ರೇಮಮ್ಮ ಮತ್ತು ಲಕ್ಷ್ಮಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.