ನಂಜನಗೂಡು : ದಕ್ಷಿಣಕಾಶಿ ನಂಜನಗೂಡಿನಲ್ಲಿ ಸ್ವಚ್ಛತಾ ಆಂದೋಲನಕ್ಕೆ ಮ್ಯಾರಥಾನ್ ಮೂಲಕ ಜಾಗೃತಿ ಮೂಡಿಸಲಾಯಿತು. ಓಡೋಣ ನಂಜನಗೂಡಿಗಾಗಿ- ಒಂದಾಗೋಣ ಸ್ವಚ್ಛತೆಗಾಗಿ ಘೋಷಣೆಯೊಂದಿಗೆ ಸ್ವಚ್ಛತೆಗೆ ಆದ್ಯತೆ ನೀಡಿ ಶಾಸಕ ದರ್ಶನ್ ಧ್ರುವನಾರಾಯಣ್ ರಿಂದ ಚಾಲನೆ ನೀಡಲಾಯಿತು.
“ನಮ್ಮ ಕಸ-ನಮ್ಮ ಜವಾಬ್ದಾರಿ” ಸಂದೇಶದೊಂದಿಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು. ಸರ್ಕಾರಿ ಜ್ಯೂನಿಯರ್ ಕಾಲೇಜಿನಿಂದ ಆರಂಭವಾದ ಮ್ಯಾರಥಾನ್ ಆರ್.ಪಿ.ರಸ್ತೆ ಹಾಗೂ ಎಂ.ಜಿ.ರಸ್ತೆಯಲ್ಲಿ ಸಾಗಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲಾಯಿತು. ನೂರಾರು ನಾಗರೀಕರು ಮ್ಯಾರಥಾನ್ ನಲ್ಲಿ ಭಾಗಿಯಾಗಿ ನಂಜನಗೂಡು ಸ್ವಚ್ಛತೆಗೆ ಕಂಕಣ ತೊಟ್ಟರು.
ಪರಿಸರ ಸಂರಕ್ಷಣೆ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಇಂತಹ ಕಾರ್ಯಕ್ರಮಗಳು ಅವಶ್ಯಕ ಎಂದು ದರ್ಶನ್ ಧ್ರುವನಾರಾಯಣ್ ಕಿವಿಮಾತು ಹೇಳಿದರು. ಖುದ್ದು ಮ್ಯಾರಥಾನ್ ನಲ್ಲಿ ಭಾಗಿಯಾಗುವ ಮೂಲಕ ಜಾಗೃತಿ ಮೂಡಿಸಿದರು. ಈ ಸಂಧರ್ಭದಲ್ಲಿ ನಗರಸಭಾ ಪೌರಾಯುಕ್ತ ಬಸವರಾಜ್, ಡಿವೈಎಸ್ಪಿ ಧರ್ಮೇಂದ್ರ, ನಗರಸಭಾ ಅಧ್ಯಕ್ಷರಾದ ಶ್ರೀಕಂಠಸ್ವಾಮಿ, ಗಾಯಿತ್ರಿ ಮೋಹನ್, ಕಮಲೇಶ್ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.

