News Karnataka Kannada
Sunday, April 28 2024
ಮಂಡ್ಯ

ಶ್ರೀರಂಗಪಟ್ಟಣದಲ್ಲಿ 9ದಿನಗಳ ದಸರಾ ಆಚರಣೆಗೆ ಚಿಂತನೆ

Chamarajamnagar
Photo Credit :

ಮಂಡ್ಯ: ಕೊರೋನಾ ಮಹಾಮಾರಿ ನಿರ್ನಾಮವಾಗಿ, ಕೋವಿಡ್ ಇಲ್ಲದಂತಾದರೇ ಮುಂದಿನ ವರ್ಷ 9 ದಿನಗಳ ಕಾಲ ದಸರಾ ಆಚರಿಸೋಣ. ಕೊರೋನಾ ಮುಕ್ತವಾಗಲು ತಾಯಿ ಚಾಮುಂಡೇಶ್ವರಿ ದೇವಿಯನ್ನ ಪ್ರಾರ್ಥಿಸೋಣ ಎಂದು ನಾರಾಯಣ ಗೌಡ ಅವರು ತಿಳಿಸಿದರು.

ಶ್ರೀರಂಗಪಟ್ಟಣ ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಕೆಸಿ ನಾರಾಯಣಗೌಡ ಅವರು ಚಾಲನೆ ನೀಡಿ ಮಾತನಾಡಿದರು.

ಇಡೀ ವಿಶ್ವದಲ್ಲೇ ಮೈಸೂರು ಪ್ರಸಿದ್ದಿಯಾಗಿದೆ. ಅದರ ಪಕ್ಕದಲ್ಲೇ ಇರುವ ಮಂಡ್ಯ, ಶ್ರೀರಂಗಪಟ್ಟಣವೂ ಕೂಡ ಅಷ್ಟೇ ಪ್ರಸಿದ್ಧಿ ಪಡೆದಿದೆ ಎಂದರು.

ಕ್ರೀಡೆ ಬಗ್ಗೆ ನನಗೆ ಚಿಕ್ಕ ವಯಸ್ಸಿನಿಂದಲೂ ಆಸಕ್ತಿ ಇದೆ. ಅದಕ್ಕಾಗಿಯೇ ನಾನು ಕೇಳಿ ಕ್ರೀಡಾ ಇಲಾಖೆಯನ್ನ ಪಡೆದಿದ್ದೇನೆ. ಕ್ರೀಡಾ ಇಲಾಖೆಯಲ್ಲಿ ಹಲವು ಕನಸುಗಳನ್ನ ಕಂಡಿದ್ದು, ಅದನ್ನ ಸಾಕಾರಗೊಳಿಸುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನ ಮಾಡಲಾಗುತ್ತಿದೆ ಎಂದರು.

2024ರ ಒಲಂಪಿಕ್‌ಗೆ ಕರ್ನಾಟಕದಿಂದ ಕನಿಷ್ಠ ನೂರು ಕ್ರೀಡಾಪಟುಗಳು ಭಾಗವಹಿಸುವಂತಾಗಬೇಕು. ಆ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳನ್ನ ಮಾಡಲಾಗುತ್ತಿದೆ ಎಂದು ಸಚಿವ ನಾರಾಯಣಗೌಡ ಅವರು ತಿಳಿಸಿದರು.

ಒಬ್ಬ ಕ್ರೀಡಾಪಟುವನ್ನು ಒಲಿಂಪಿಕ್‌ಗೆ ಕಳುಹಿಸಿ ಕೊಡಲು ಸುಮಾರು 35-40 ಲಕ್ಷ ರೂಪಾಯಿ ವೆಚ್ಚವಾಗುತ್ತಿದೆ. ಹಲವು ಕಂಪನಿಗಳು ಕ್ರೀಡಾಪಟುಗಳನ್ನ ದತ್ತು ತೆಗೆದುಕೊಳ್ಳಲು ಮುಂದೆ ಬಂದಿದ್ದು, ಜಿಂದಾಲ್ ಕಂಪನಿಯೊಂದೇ 50 ಕ್ರೀಡಾಪಟುಗಳನ್ನ ದತ್ತು ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.

ಈ ಬಾರಿಯ ಮೈಸೂರು ದಸರಾ ಉದ್ಘಾಟನೆ ಮಾಡಿರೋದು ಈ ಜಿಲ್ಲೆಯ ಮಣ್ಣಿನ ಮಗ,  ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರು. ಇದು ನಮ್ಮೆಲ್ಲರ ಹೆಮ್ಮೆ ಎಂದು ನಾರಾಯಣಗೌಡ ಅವರು ಸಂತಸ ವ್ಯಕ್ತಪಡಿಸಿದರು.

ಅದೇ ರೀತಿ ಆದಿಚುಂಚನಗಿರಿ ಮಹಾಸಂಸ್ಥಾನ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ ಅವರು ನವರಾತ್ರಿಯ 9 ದಿನಗಳ ಎಲ್ಲೂ ಹೋಗುವುದಿಲ್ಲ. ಆದರೆ ಶ್ರೀರಂಗಪಟ್ಟಣ ದಸರಾ ಮಹೋತ್ಸವದ ಉದ್ಘಾಟನೆಗೆ ಬಂದಿದ್ದಾರೆ. ಇದು ನಮ್ಮೆಲ್ಲರ ಸೌಭಾಗ್ಯ ಎಂದು ಹೇಳಿದರು.

ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ಕಳೆದ ಎರಡು ವರ್ಷದಿಂದ ಶ್ರೀರಂಗಪಟ್ಟಣ ದಸರಾ ಆಚರಿಸಲು ಆಗಿರಲಿಲ್ಲ, ಈ ಬಾರಿ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಇದಕ್ಕೆ ಸಚಿವ ನಾರಾಯಣಗೌಡ ಅವರು ಎಲ್ಲಾ ರೀತಿಯ ನೆರವು ನೀಡುತ್ತಿದ್ದಾರೆ. ಮುಂದಿನ ವರ್ಷದಿಂದ ಸರ್ಕಾರದಿಂದ ಶ್ರೀರಂಗಪಟ್ಟಣ ದಸರಾಕ್ಕೆ ಪ್ರತ್ಯೇಕ ಅನುದಾನ ಮೀಸಲಿಡಬೇಕು. ಈ ಬಗ್ಗೆ ಸಚಿವ ನಾರಾಯಣಗೌಡ ಅವರು ಸರ್ಕಾರದ ಜೊತೆ ಮಾತನಾಡಬೇಕು ಎಂದು ಹೇಳಿದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ವಿವಿಧ ಇಲಾಖೆಗಳಿಂದ ಹಾಕಿರುವ ಮಳಿಗೆಗಳನ್ನ ಸಚಿವ ನಾರಾಯಣಗೌಡ ಅವರು ಉದ್ಘಾಟಿಸಿದರು. ರೇಷ್ಮೆ ಇಲಾಖೆ ವತಿಯಿಂದ ಹಾಕಲಾಗಿದ್ದ ಮಳಿಗೆಗೆ ಭೇಟಿ ಕೊಟ್ಟು ರೇಷ್ಮೆ ಸೀರೆ ಸೇರಿದಂತೆ ರೇಷ್ಮೆ ಉತ್ಪನ್ನಗಳನ್ನ ಪರಿಶೀಲನೆ ನಡೆಸಿದರು. ರೇಷ್ಮೆ ಉತ್ಪನ್ನಗಳ ಬಳಕೆ ಹೆಚ್ಚಾಗಬೇಕು. ಆ ನಿಟ್ಟಿನಲ್ಲಿ ಅಗತ್ಯ ಪ್ರಚಾರ ನೀಡಬೇಕು ಎಂದು ಅಧಿಕಾರಿಗಳಿಗೆ ಸಚಿವ ನಾರಾಯಣ ಗೌಡ ಅವರು ಸೂಚನೆ ನೀಡಿದರು.

ಇದೇ ವೇಳೆ ಶ್ರೀರಂಗಪಟ್ಟಣದ ಸೆಂದಿಲ್ ಕೋಟೆ ಆವರಣದಲ್ಲಿ ಕ್ರೀಡಾ ದಸರಾ ಕುಸ್ತಿಯನ್ನು ಸಚಿವರಾದ ಕೆ.ಸಿ ನಾರಾಯಣಗೌಡ ಉದ್ಘಾಟಿಸಿದರು.

ಶ್ರೀರಂಗಪಟ್ಟಣ ದಸರಾ ಹಿನ್ನೆಲೆಯಲ್ಲಿ ಖ್ಯಾತ ಸಂಗೀತ ನಿರ್ದೇಶಕ, ಹಿನ್ನೆಲೆ ಗಾಯಕ ರಘು ದೀಕ್ಷಿತ್ ಅವರಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶಾಸಕ ರವೀಂದ್ರ ಶ್ರೀಕಂಠಯ್ಯ, ಕೆಪಿಎಸ್‌ಸಿ ಸದಸ್ಯರಾದ ನೆಲಮನೆ ಪ್ರಭುದೇವ್, ಜಿಲ್ಲಾಧಿಕಾರಿ ಅಶ್ವಥಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು