News Karnataka Kannada
Saturday, May 18 2024
ಮಂಡ್ಯ

ಕೆ.ಆರ್.ಪೇಟೆ ಹೇಮಾವತಿ ಜಲಾಶಯದ ಮುಖ್ಯ ನಾಲೆಯಲ್ಲಿ ಕುಸಿತ

Photo Credit : News Kannada

ಮಂಡ್ಯ :  ಕೆ.ಆರ್.ಪೇಟೆ ತಾಲೂಕಿನ ವ್ಯಾಪ್ತಿಯಲ್ಲಿ ಹಾದುಹೋಗಿರುವ ಹೇಮಾವತಿ ಜಲಾಶಯದ ಮುಖ್ಯ ನಾಲೆಯ ಲೈನಿಂಗ್ ಕುಸಿತದ ಘಟನೆಗಳು ಮರುಕಳಿಸಿರುವುದರಿಂದ ರೈತರು ಚಿಂತೆಗೀಡಾಗಿದ್ದಾರೆ.

ಪಿ.ಬಿ.ಮಂಚನಹಳ್ಳಿ ಬಳಿ ಮುಖ್ಯನಾಲೆಯ 156 ಕಿ.ಮಿ ವ್ಯಾಪ್ತಿಯಲ್ಲಿ ನಾಲೆಯ ಲೈನಿಂಗ್ ಕುಸಿದಿತ್ತು. ಇದರ ದುರಸ್ತಿಗಾಗಿ ರೈತಸಂಘಟನೆಗಳು ಪ್ರತಿಭಟನೆ ಮಾಡಿದ್ದವು. ಇದೀಗ ಪಿ.ಬಿ.ಮಂಚನಹಳ್ಳಿ ಬಳಿಯ ಲೈನಿಂಗ್ ಕುಸಿತದ ಬೆನ್ನೆಲ್ಲೆ ತಾಲೂಕಿನ ಕುಂದೂರು ಬಳಿ 133 ರಿಂದ 114 ನೇ ಕಿ.ಮೀ. ನಡುವೆ ನಾಲೆಯ ಲೈನಿಂಗ್ ಮಣ್ಣು ಏರಿಯ ಸಮೇತ ಕುಸಿದು ಬಿದ್ದಿದೆ.

ಇದೇ ರೀತಿ ನಾಲಾ ಸರಪಳಿ 125, 134, 144 ಮತ್ತು 157 ನೇ ಕಿ.ಮಿ ವ್ಯಾಪ್ತಿಯ ಮಾಚಹಳ್ಳಿ, ಸಾರಂಗಿ, ಸಿಂದುಘಟ್ಟ, ಪಿ.ಬಿ.ಮಂಚನಹಳ್ಳಿ, ಭಾಗದಲ್ಲೂ ನಾಲಾ ಲೈನಿಂಗ್ ಕುಸಿತವಾಗುತ್ತಿದೆ. ಲೈನಿಂಗ್ ಜೊತೆಯಲ್ಲಿಯೇ ದಡದ ಮಣ್ಣು ಕುಸಿದು ನಾಲೆಯ ಮಧ್ಯದಲ್ಲಿಯೇ ಬೀಳುತ್ತಿರುವುದರಿಂದ ಸುಲಲಿತ ನೀರು ಹರಿಯುವಿಕೆಗೆ ಅಡಚಣೆ ಎದುರಾಗಿದೆ. ಸಧ್ಯ ನಾಲೆಯಲ್ಲಿ ಇನ್ನೂ ಬೇಸಿಗೆ ಬೆಳೆಗೆ ನೀರು ಹರಿಸಿಲ್ಲ. ಹೇಮಾವತಿ ಜಲಾಶಯದ ಮುಖ್ಯ ನಾಲೆಯಲ್ಲಿ ನೀರು ಹರಿಸಿ ಕೆರೆ ಕಟ್ಟೆಗಳನ್ನು ತುಂಬಿಸುವಂತೆ ರೈತರು ಈಗಾಗಲೇ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.

ಆದರೆ ನಾಲೆಯಲ್ಲಿ ನೀರು ಹರಿಸುವ ಮುನ್ನವೇ ನಾಲೆಯುದ್ದಕ್ಕೂ ಲೈನಿಂಗ್ ಕುಸಿತ ಆರಂಭಗೊಂಡಿದೆ. ಕಾಂಕ್ರಿಟ್ ಮತ್ತು ಮಣ್ಣಿನ ಸಮೇತ ಲೈನಿಂಗ್ ಕುಸಿದು ನಾಲೆಯೊಳಗೆ ಬೀಳುತ್ತಿರುವುದರಿಂದ ನೀರು ಹರಿಸಿದರೆ ನಾಲೆ ಮತ್ತಷ್ಟು ಅಪಾಯಕ್ಕೆ ಸಿಲುಕುವ ಭೀತಿ ಎದುರಾಗಿದೆ. ಇದು ನೀರಿಗಾಗಿ ಜಾತಕಪಕ್ಷಿಯಂತೆ ಕಾಯುತ್ತಿರುವ ರೈತ ಸಂಕುಲವನ್ನು ಚಿಂತೆಗೀಡುಮಾಡಿದೆ.

1000 ಕೋಟಿ ಅಂದಾಜು ವೆಚ್ಚದಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಮುಕ್ತಾಯಗೊಂಡ ಹೇಮಾವತಿ ಮುಖ್ಯ ನಾಲೆಯ ಆಧುನೀಕರಣ ಕಾಮಗಾರಿ ಸಂಪೂರ್ಣ ಕಳಪೆ ಎನ್ನುವುದು ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿರುವ ಲೈನಿಂಗ್ ಕುಸಿತದಿಂದ ಬಯಲಾಗುತ್ತಿದೆ. ನಾಲೆಯ ಮಣ್ಣು ಏರಿ ನಿರ್ಮಾಣ, ತಡೆಕಲ್ಲುಗಳನ್ನು ಅಳವಡಿಸಿದಿದ್ದರೂ ಅಳವಡಿಸಿದಂತೆ ಬಿಲ್ ಮಾಡಿರುವುದು, ಕಬ್ಬಿಣ ಬಳಸದಿದ್ದರೂ ಲೈನಿಂಗ್ ಕಾಮಗಾರಿಗೆ ಕಬ್ಬಿಣ ಬಳಕೆ ಮಾಡಿರುವುದಾಗಿ ಬಿಲ್ ಬರೆದುಕೊಂಡು ನೂರಾರು ಕೋಟಿ ರೂ.ಗಳನ್ನು ಗುತ್ತಿಗೆದಾರ ಮತ್ತು ಎಂಜಿನಿಯರುಗಳು ಪರಸ್ಪರ ಶಾಮೀಲಾಗಿ ಲೂಟಿ ಮಾಡಿದ್ದಾರೆ.

ಪ್ರಸ್ತುತ ನಾಲೆಯ ಕಳಪೆ ಕಾಮಗಾರಿಯ ಬಗ್ಗೆ ರೈತಸಂಘ ರೈತ ಹೋರಾಟಗಾರ ಪಿ.ಬಿ.ಮಂಚನಹಳ್ಳಿ ನಾಗೇಗೌಡರ ನೇತೃತ್ವದಲ್ಲಿ ಮಾನ್ಯ ಲೋಕಾಯುಕ್ತ ನ್ಯಾಯಾಲಯಕ್ಕೆ ದೂರು ನೀಡಿದೆ. ನಾಗೇಗೌಡರ ದೂರಿನ ಮೇರೆಗೆ ಕಳೆದ 6 ತಿಂಗಳ ಹಿಂದೆ ನಾಲೆಯುದ್ದಕ್ಕೂ ಸಂಚರಿಸಿದ ಲೋಕಾಯುಕ್ತ ಇಂಜಿನಿಯರ್ ನಿರಂಜನ್ ನೇತೃತ್ವದ ಪರಿಣಿತರ ತಂಡ ನಾಲೆಯ ಕಾಮಗಾರಿ ನಿಯಮಾನುಸಾರ ನಡೆದಿದ್ದು ಗುಣಮಟ್ಟದಿಂದ ಕೂಡಿದೆ ಎಂದು ವರದಿ ನೀಡಿ ಕಳಪೆ ಕಾಮಗಾರಿಯನ್ನು ಮುಚ್ಚಿಹಾಕಲು ಯತ್ನಿಸಿತ್ತು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರೈತ ನಾಗೇಗೌಡ ಕಳಪೆ ಕಾಮಗಾರಿಯನ್ನು ಉತ್ತಮವಾಗಿದೆ ಎಂದು ವರದಿ ನೀಡಿ ಮುಚ್ಚಿಹಾಕಲು ಯತ್ನಿಸಿದ ಲೋಕಾಯುಕ್ತ ಎಂಜಿನಿಯರ್ ನಿರಂಜನ್ ಅವರಿಗೆ ಲೋಕಾರತ್ನ ಪ್ರಶಸ್ತಿ ನೀಡುವಂತೆ ಸೂಚಿಸಿ ಲೋಕಾಯುಕ್ತ ಕಚೇರಿಗೆ ಒಂದು ರೂಪಾಯಿ ಡಿ.ಡಿ ಕಳುಹಿಸುವ ಮೂಲಕ ತಮ್ಮ ಪ್ರತಿಭಟನೆ ದಾಖಲಿಸಿದ್ದಾರಲ್ಲದೆ ಲೋಕಾಯುಕ್ತ ಮುಖ್ಯ ನಾಯಾಧೀಶರೇ ಖುದ್ದು ನಾಲೆಯ ಮೇಲೆ ಸಂಚರಿಸಿ ಪರಿಶೀಲಿಸುವಂತೆ ಮನವಿ ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು