ಹನೂರು: ಮಲೆ ಮಹದೇಶ್ವರ ವನ್ಯಜೀವಿಧಾಮದ ಬಫರ್ ವಲಯಕ್ಕೆ ಸೇರಿದ ಉಡುತೊರೆಹಳ್ಳ ಜಲಾಶಯದ ಹಿನ್ನೀರಿನ ಅರಣ್ಯ ಪ್ರದೇಶದಲ್ಲಿ ಕಡವೆಯನ್ನು ಬೇಟೆಯಾಡಿ, ಅದರ ಮಾಂಸವನ್ನು ಸಾಗಿಸುತ್ತಿದ್ದ ನಾಲ್ವರು ಆರೋಪಿಗಳು ಅರಣ್ಯ ಸಿಬ್ಬಂದಿಯನ್ನು ಕಂಡು ಪರಾರಿಯಾದ ಘಟನೆ ನಡೆದಿದೆ.
ಉಡುತೊರೆಹಳ್ಳ ಡ್ಯಾಂ ಗೇಟ್ ಬಳಿ ಉಪ ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿ ರಾತ್ರಿ ಗಸ್ತು ತಿರುಗುತ್ತಿದ್ದಾಗ, ಹಿನ್ನೀರಿನ ಭಾಗದಿಂದ ಬಂದೂಕು ಮತ್ತು ಚೀಲಗಳನ್ನು ಹೊತ್ತು ಬರುತ್ತಿದ್ದ ನಾಲ್ವರು ವ್ಯಕ್ತಿಗಳು ಕಂಡುಬಂದಿದ್ದಾರೆ. ಗಸ್ತು ತಿರುಗುತ್ತಿದ್ದ ಅರಣ್ಯ ಸಿಬ್ಬಂದಿಯನ್ನು ಕಾಣುತ್ತಿದ್ದಂತೆ ಆರೋಪಿಗಳು ತಮ್ಮಲ್ಲಿದ್ದ ಚೀಲಗಳನ್ನು ಸ್ಥಳದಲ್ಲೇ ಬಿಸಾಡಿ ಕತ್ತಲಲ್ಲಿ ಓಡಿ ಪರಾರಿಯಾಗಿದ್ದಾರೆ.
ಸಿಬ್ಬಂದಿ ಸ್ಥಳದಲ್ಲಿದ್ದ ಚೀಲಗಳನ್ನು ತಪಾಸಣೆ ನಡೆಸಿದಾಗ, ನಾಡಬಂದೂಕಿನಿಂದ ಗುಂಡು ಹಾರಿಸಿ ಕೊಂದಿದ್ದ ಕಡವೆಯ ದೇಹವನ್ನು ಮೂರು ಭಾಗಗಳಾಗಿ ಕತ್ತರಿಸಿ ಚೀಲಗಳಲ್ಲಿ ತುಂಬಿರುವುದು ಪತ್ತೆಯಾಗಿದೆ.
ತನಿಖೆ ಹಾಗೂ ಶೋಧ ಕಾರ್ಯ:
ಪ್ರಕರಣಕ್ಕೆ ಸಂಬಂಧಿಸಿದಂತೆ ವನ್ಯಜೀವಿ ಅಪರಾಧ ವರದಿ (WLOR) ದಾಖಲಿಸಿಕೊಳ್ಳಲಾಗಿದ್ದು, ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಶ್ವಾನದಳದ ನೆರವಿನೊಂದಿಗೆ ಅರಣ್ಯ ಪ್ರದೇಶದಲ್ಲಿ ಸುಳಿವಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ.
ಈ ಕಾರ್ಯಾಚರಣೆಯು ಪ್ರಭಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿರಾಜ್ ಶ್ರೀಕಾಂತ್ ಹೊಸೂರು ಅವರ ಮಾರ್ಗದರ್ಶನದಲ್ಲಿ, ವಲಯ ಅರಣ್ಯಾಧಿಕಾರಿ ಮಹೇಶ್ ಹೆಚ್.ಎನ್. ಅವರ ನೇತೃತ್ವದಲ್ಲಿ ನಡೆದಿದ್ದು, ಉಪ ವಲಯ ಅರಣ್ಯಾಧಿಕಾರಿ ನಂದೀಶ್ ಎಸ್.ಬಿ. ಹಾಗೂ ಅರಣ್ಯ ಸಿಬ್ಬಂದಿ ಭಾಗವಹಿಸಿದ್ದರು.

