ಮಂಗಳೂರು : ರಾಜ್ಯದ ಜನರಿಗೆ ಗುಣಮಟ್ಟದ, ಶುದ್ಧ ಹಾಗೂ ಆರೋಗ್ಯಪೂರ್ಣ ಆಹಾರ ಒದಗಿಸುವುದು ಸರ್ಕಾರದ ಕರ್ತವ್ಯವಾಗಿದ್ದು, ಆಹಾರ ಸುರಕ್ಷತಾ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸುವ ಹೋಟೆಲ್, ಕ್ಯಾಟರಿಂಗ್ ಹಾಗೂ ಪಿ.ಜಿ.ಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ವಿಚಾರದಲ್ಲಿ ನನ್ನ ಆಪ್ತರು ಅಥವಾ ಪರಿಚಯಸ್ಥರೇ ಸಿಕ್ಕಿಬಿದ್ದರೂ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು. ಟಿ. ಖಾದರ್ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.

ಬುಧವಾರ ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಈಗಾಗಲೇ ಸ್ವೀಟ್ ಮಳಿಗೆಗಳು ಸೇರಿದಂತೆ ವಿವಿಧ ಆಹಾರ ಘಟಕಗಳ ಮೇಲೆ ದಾಳಿ ನಡೆಸಿ ಎರಡು ಘಟಕಗಳನ್ನು ಬಂದ್ ಮಾಡಲಾಗಿದೆ. ಇದು ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗಿರದೆ ಮಂಗಳೂರು, ಉಡುಪಿ, ಹುಬ್ಬಳ್ಳಿ, ಬೆಳಗಾವಿ, ಮೈಸೂರಿನಂತಹ ನಗರಗಳಲ್ಲೂ ತೀವ್ರಗೊಳ್ಳಲಿದೆ. ಮಂಗಳೂರಿನಲ್ಲೂ ಕೆಲವೆಡೆ ಪರಿಶೀಲನೆ ನಡೆಸಲಾಗಿದೆ ಎಂದರು.

“ವ್ಯಾಪಾರಿಗಳನ್ನು ಮುಚ್ಚಿಸುವುದು ಅಥವಾ ಬೆದರಿಸುವುದು ನಮ್ಮ ಉದ್ದೇಶವಲ್ಲ. ಆದರೆ ಗ್ರಾಹಕರಿಗೆ ಮೋಸವಾಗಬಾರದು. ಹೋಟೆಲ್ ಮಾಲೀಕರು ನನ್ನ ಪರಿಚಯಸ್ಥರೇ ಇರಬಹುದು. ಆದರೆ ಅಲ್ಲಿ ಬಂದು ಊಟ ಮಾಡುವ ಗ್ರಾಹಕರು ಕೂಡ ನನ್ನ ಪರಿಚಯದವರೇ. ಹೀಗಾಗಿ ಯಾರೇ ಸಿಕ್ಕಿಬಿದ್ದರೂ ನನ್ನ ಪರಿಚಯಸ್ಥರೆಂದು ರಿಯಾಯಿತಿ ಕೊಡುವ ಪ್ರಶ್ನೆಯೇ ಇಲ್ಲ. ಸಾರ್ವಜನಿಕರ ಆರೋಗ್ಯದ ವಿಚಾರದಲ್ಲಿ ರಾಜಿ ಇಲ್ಲ” ಎಂದು ಸ್ಪಷ್ಟಪಡಿಸಿದರು.

ಪಿ.ಜಿ. ಹಾಗೂ ಹಾಸ್ಟೆಲ್‌ಗಳನ್ನು ನಡೆಸುವರು ಅಲ್ಲಿಗೆ ಬರುವ ವಿದ್ಯಾರ್ಥಿಗಳನ್ನು ತಮ್ಮದೇ ಸ್ವಂತ ಮಕ್ಕಳಂತೆ ಭಾವಿಸಿ ಅವರಿಗೆ ಶುಚಿ-ರುಚಿಯಾದ ಪೌಷ್ಟಿಕ ಆಹಾರ ನೀಡಬೇಕು.

ಅತ್ಯಾಧುನಿಕ ಎನ್‌ಎಬಿಎಲ್ ಲ್ಯಾಬ್: ಆಹಾರ ಕಲಬೆರಕೆ ಹಾಗೂ ಗುಣಮಟ್ಟ ಪರೀಕ್ಷಾ ವರದಿಗಳು ನ್ಯಾಯಾಲಯದಲ್ಲೂ ಬಲವಾಗಿ ಸಾಬೀತಾಗುವಂತೆ ಮಾಡಲು ಅಂತಾರಾಷ್ಟ್ರೀಯ ಮಟ್ಟದ ಸುಸಜ್ಜಿತ ಎನ್ಎಬಿಎಲ್ (NABL) ಲ್ಯಾಬ್‌ಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ಕೋಲ್ಡ್ ಸ್ಟೋರೇಜ್‌ನಲ್ಲಿ ದೀರ್ಘಕಾಲ ಮೀನು, ಮಾಂಸ ಇಡುವ ಬಗ್ಗೆ ಎಫ್‌ಎಸ್‌ಎಸ್‌ಎಐ ನಿಯಮಾವಳಿಗಳ ಅನ್ವಯ ಕ್ರಮ ವಹಿಸಲಾಗುವುದು ಎಂದು ಸಚಿವರು ಹೇಳಿದರು.