News Karnataka Kannada
Saturday, May 11 2024
ಮಡಿಕೇರಿ

ವಿರಾಜಪೇಟೆ: ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಪಕ್ಷಿತಜ್ಞ ಡಾ.ಎಸ್.ವಿ.ನರಸಿಂಹನ್

Koda
Photo Credit : News Kannada

ವಿರಾಜಪೇಟೆ: ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಜನವರಿ 21 ರಂದು ನಡೆಯಲಿರುವ ವಿರಾಜಪೇಟೆ ತಾಲ್ಲೋಕು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಕೊಡಗಿನ ಪಕ್ಷಿತಜ್ಞ, ಪರಿಸರ ಬರಹಗಾರ ಡಾ.ಎಸ್.ವಿ ನರಸಿಂಹನ್‌ ಆಯ್ಕೆಯಾಗಿದ್ದಾರೆ.

ವಿರಾಜಪೇಟೆ ತಾಲ್ಲೋಕಿನ ಆರ್ಜಿ ಮತ್ತು ಬೇಟೋಳಿ ಗ್ರಾಮದಲ್ಲಿ ಈ ಬಾರಿಯ ತಾಲ್ಲೋಕು ಸಮ್ಮೇಳನ ನಡೆಯಲಿದ್ದು ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಡಾ.ಎಸ್.ವಿ.ನರಸಿಂಹನ್‌ ವಹಿಸಲಿದ್ದಾರೆ.

ಇಂದು ವಿರಾಜಪೇಟೆ ತಾಲ್ಲೋಕು ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ವಿರಾಜಪೇಟೆಯ ಪುರಭವನದಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ, ವಿರಾಜಪೇಟೆ ತಾಲ್ಲೋಕು ಕ.ಸಾ.ಪ ಅಧ್ಯಕ್ಷ ರಾಜೇಶ್‌ ಪದ್ಮನಾಭ ಅಧ್ಯಕ್ಷತೆಯಲ್ಲಿ, ಜಿಲ್ಲಾಧ್ಯಕ್ಷರಾದ ಕೇಶವ ಕಾಮತ್ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ತಾಲ್ಲೋಕು ಕಸಾಪ ನಿಕಟ ಪೂರ್ವ ಅಧ್ಯಕ್ಷ ಮದೋಶ್ ಪೂವಯ್ಯ ಹಾಗೂ ಸಭೆಯ ಸರ್ವಾನುಮತದ ಒಪ್ಪಿಗೆಯ ಮೂಲಕ ಸಮ್ಮೇಳನ ಅಧ್ಯಕ್ಷರ ಆಯ್ಕೆಯನ್ನು ಮಾಡಲಾಯಿತು.

ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ.ಎಸ್.ವಿ.ನರಸಿಂಹನ್‌ ಮೂಲತಃ ವಿರಾಜಪೇಟೆಯವರೇ ಆಗಿದ್ದು, ಡಾ.ದೇಶಿಕಾಚಾರ್‌ ಹಾಗೂ ಜಾನಕಮ್ಮ ದಂಪತಿಗಳ ಸುಪುತ್ರ. ವೃತ್ತಿಯಿಂದ ವೈದ್ಯರಾಗಿರುವ ಇವರು ಪ್ರವೃತ್ತಿಯಿಂದ ಪಕ್ಷಿತಜ್ಞ, ಪರಿಸರ ಬರಹಗಾರ, ಖಗೋಳ ವೀಕ್ಷಕರು ಹೌದು. ಯಾವುದೇ ಪ್ರಚಾರ ಬಯಸದೇ ತಮ್ಮಷ್ಟಕ್ಕೆ ತಾವು ಪರಿಸರ ಸೇವೆಯನ್ನು ಮಾಡುತ್ತಾ ಅನೇಕ ಪರಿಸರ ಸಂಬಂಧಿತ ಲೇಖನಗಳನ್ನು ಬರೆದಿದ್ದಾರೆ.

ಅಲ್ಲದೆ ಕೂರ್ಗ್‌ ವೈಲ್ಡ್‌ ಲೈಫ್‌ ಸೊಸೈಟಿಯವರು ಪ್ರಕಟಮಾಡಿರುವ “ಕೊಡಗಿನ ಖಗರತ್ನಗಳು” (ಫೆದರ್ಡ್‌ ಜ್ಯುವೆಲ್‌ ಆಫ್‌ ಕೂರ್ಗ್‌) ಎನ್ನುವ ಪುಸ್ತಕ ಕನ್ನಡ ಹಾಗೂ ಇಂಗ್ಲೀಷ್ ಎರಡು ಭಾಷೆಯಲ್ಲಿ ಪ್ರಕಟವಾಗಿದೆ.

ಅಲ್ಲದೇ ೨೦೦೮ರಲ್ಲಿ ಈ ಪುಸ್ತಕದ ಪರಿಷ್ಕೃತ ಆವೃತ್ತಿಯೂ ಹೊರಬಂದಿದೆ. ಈ ಪುಸ್ತಕವು ಪಕ್ಷಿಗಳ ಬಗ್ಗೆ ಬರೆದಿರುವ ಅತ್ಯಂತ ಉತ್ತಮವಾದ ಪುಸ್ತಕ ಎಂದು ಎಂ.ವೈ ಘೋರ್ಪಡೆಯವರು ತಮ್ಮ ಪುಸ್ತಕದಲ್ಲಿ ದಾಖಲು ಮಾಡಿರುವುದು ಮತ್ತೊಂದು ವಿಶೇಷ.

ಹಾಗೂ ಈ ಪುಸ್ತಕ ಲಿಮ್ಕಾ ಬುಕ್‌ ಆಫ್‌ ರೇಕಾರ್ಡ್‌ಗು ಸೇರಿದೆ. ಅದಲ್ಲದೇ ಪ್ರತಿವರ್ಷ ವನ್ಯಜೀವಿ ಸಪ್ತಾಹದಂದು ಇವರೇ ಕಾರ್ಡಿನ್ನಲ್ಲಿ ತಮ್ಮ ಕೈಯಾರೆ ಪಕ್ಷಿಯ ಚಿತ್ರ ಬರೆದು ಅದರ ಜೊತೆಗೆ ವನ್ಯಜೀವಿಗೆ ಸಂದೇಶ ಪತ್ರಗಳನ್ನು ಪ್ರತಿವರ್ಷ ಕನ್ನಡದಲ್ಲೇ ಬರೆದು ರಾಜ್ಯದಾದ್ಯಂತ ಹಾಗೂ ವಿದೇಶಕ್ಕೂ ಕಳುಹಿಸುತ್ತಾರೆ.

ಇದುವರೆಗೂ ಸುಮಾರು 75 ಸಾವಿರ ಕಾರ್ಡುಗಳನ್ನು ಕನ್ನಡದಲ್ಲೇ ಬರೆಯುವ ಮೂಲಕ ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆಯಿಂದ “ಜೀವಮಾನ ಶ್ರೇಷ್ಟ ಸಾಧನೆಗೂ ಭಾಜನರಾಗಿದ್ದಾರೆ. ಅಲ್ಲದೇ 2013 ರಲ್ಲಿ ವಿಶ್ವ ಕನ್ನಡ ಸಮ್ಮೇಳನದಲ್ಲಿ ಸನ್ಮಾನಿಸಲ್ಪಟ್ಟಿದ್ದಾರೆ. 2013 ರಲ್ಲಿ ಕೊಡಗಿನ ವರ್ಷದ ವ್ಯಕ್ತಿಯಾಗಿಯೂ ಆಯ್ಕೆಯಾಗಿದ್ದಾರೆ. ಇವರ ಅನೇಕ ವೈಜ್ಞಾನಿಕ ಬರಹಗಳು ಸೇರಿದಂತೆ ಪರಿಸರ ಬರಹಗಳು ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಸಮ್ಮೇಳನಾಧ್ಯಕ್ಷರನ್ನು ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಿದ ಬಳಿಕ ವಿರಾಜಪೇಟೆಯ ದೇವಾಂಗ ಬೀದಿಯಲ್ಲಿರುವ ಅವರ ಸ್ವಗೃಹಕ್ಕೆ ತೆರಳಿ ವಿರಾಜಪೇಟೆ ಕ.ಸಾ.ಪ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷರಾದ ಕೇಶವ ಕಾಮತ್‌, ತಾಲ್ಲೋಕು ಕ.ಸಾ.ಪ ಅಧ್ಯಕ್ಷ ರಾಜೇಶ ಪದ್ಮನಾಭ, ಕ.ಸಾ.ಪದ ಪ್ರಧಾನ ಕಾರ್ಯದರ್ಶಿ ಟೋಮಿ ಥಾಮಸ್‌, ಪ್ರಧಾನ ಕಾರ್ಯದರ್ಶಿ ಸಾವಿತ್ರಿ ಹೆಚ್.ಜಿ ,ಕೋಶಾಧಿಕಾರಿ ಶಬರೀಶ್‌ ಶೆಟ್ಟಿ, ಅಮ್ಮತ್ತಿ ಹೋಬಳಿ ಅಧ್ಯಕ್ಷ ಮಂಜುನಾಥ್‌, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಗೋಪಾಲಕೃಷ್ಣಗೌಡ, ಮಂಜುನಾಥ್‌ ಪಿ.ಎ ಅವರುಗಳು ಡಾ.ನರಸಿಂಹನ್‌ ಅವರನ್ನು ಫಲತಾಂಬೂಲ ಕೊಟ್ಟು ಅಧಿಕೃತವಾಗಿ ವಿರಾಜಪೇಟೆ ತಾಲ್ಲೋಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನಿಸಿದರು.

ಸಭೆಯಲ್ಲಿ ಕ.ಸಾ.ಪದ ಸದಸ್ಯರುಗಳಾದ ಮಾಜಿ ಜಿ.ಪಂ ಸದಸ್ಯ ಶಶಿ ಸುಬ್ರಮಣಿ, ವಕೀಲರಾದ ಕೆ.ವಿ. ಸುನೀಲ್‌, ವಿಶ್ವನಾಥ್ ಪಿ.ವಿ, ಪುಷ್ಪಲತಾ ಶಿವಪ್ಪ, ವಿಮಲಾ ದಶರಥ್, ರಂಜಿತಾ ಕಾರ್ಯಪ್ಪ, ಹರ್ಷ ಟಿ. ಆರ್, ಪ್ರೀತಮ್, ಯುವರಾಜ್ ಕೃಷ್ಣ ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು