News Karnataka Kannada
Saturday, April 27 2024
ಮಡಿಕೇರಿ

ಮಡಿಕೇರಿ: ಕೊಡವ ಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆಯನ್ನು ರೂಪಿಸಲು ಒತ್ತಾಯ

Madikeri: Kodava land demands geo-political autonomy
Photo Credit : By Author

ಮಡಿಕೇರಿ: ಕೊಡವ ಜನಾಂಗವನ್ನು ರಾಷ್ಟ್ರದ ಇತರ ನಾಗರಿಕರಿಗೆ ಸಮಾನವಾಗಿ ಪರಿಗಣಿಸುವ ಮೂಲಕ ಕೊಡವ ತಾಯ್ನಾಡು ಮತ್ತು ಕೊಡವರ ಭಾವನೆಗಳನ್ನು ಗೌರವಿಸಬೇಕು. ಇದಕ್ಕಾಗಿ ಕೊಡವ ಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆಯನ್ನು ರೂಪಿಸಲು ಸಂವಿಧಾನಕ್ಕೆ ತಿದ್ದುಪಡಿ ತರುವ ಕಾರ್ಯವಿಧಾನಕ್ಕೆ ತ್ವರಿತವಾಗಿ ಚಾಲನೆ ನೀಡಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿತು.

ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಧರಣಿ ನಡೆಸಿದ ಸಂಘಟನೆಯ ಪ್ರಮುಖರು “ಕೊಡವ ಲ್ಯಾಂಡ್” ಪರ ಘೋಷಣೆಗಳನ್ನು ಕೂಗಿದರು. ಸರ್ಕಾರಗಳು ಅತಿ ಸೂಕ್ಷ್ಮ ಕೊಡವ ಬುಡಕಟ್ಟು ಜನಾಂಗವನ್ನು ಸಮಾನ ನಾಗರಿಕರಂತೆ ಪರಿಗಣಿಸಬೇಕು ಮತ್ತು ತಾಯ್ನಾಡನ್ನು ಇತರ ಭಾಷಾವಾರು ರಾಜ್ಯಗಳಂತೆ ಗೌರವಯುತವಾಗಿ ಕಾಣಬೇಕು. ಆದರೆ ದುಃಖಕರ ವಿಚಾರವೆಂದರೆ ಸರ್ಕಾರಗಳು ಕೊಡವ ಪ್ರದೇಶವನ್ನು ತಮ್ಮ ಸಂಪನ್ಮೂಲ ಉತ್ಪಾದಿಸುವ ಆಕ್ರಮಿತ ಕಾಲೋನಿ ಎಂದು ಪರಿಗಣಿಸುತ್ತಿವೆ ಎಂದು ನಾಚಪ್ಪ ಬೇಸರ ವ್ಯಕ್ತಪಡಿಸಿದರು.

ಸಾಂವಿಧಾನಿಕ ಸಂಸದೀಯ ಸಹಭಾಗಿತ್ವದ ಪ್ರಜಾಪ್ರಭುತ್ವದಲ್ಲಿ ಸಿಎನ್‍ಸಿ ಸಂಘಟನೆ ಹಾಗೂ ಕೊಡವರು ಯಾವುದೇ ಜಾಗ ಅಥವಾ ಸಮಾನ ಪಾಲು ಕೇಳುತ್ತಿಲ್ಲ. ಬದಲಿಗೆ ಸಂವಿಧಾನದ 32ನೇ ವಿಧಿಯ ಅನುಷ್ಠಾನಕ್ಕೆ ಮನವಿ ಮಾಡಿಕೊಳ್ಳುತ್ತಿದೆ. ಬುಡಕಟ್ಟು ಜನಾಂಗವಾಗಿರುವ ಕೊಡವರ ಹಕ್ಕುಗಳಿಗೆ ಭದ್ರತೆ ನೀಡಲು ಆಡಳಿತವರ್ಗ ಮುಂದಾಗುವ ಮೂಲಕ ತನ್ನ ಮನೋಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು ಎಂದು ತಿಳಿಸಿದ ಅವರು, ಕಾನೂನುಬದ್ಧ ಆಶೋತ್ತರಗಳು ಮತ್ತು ಗೌರವಾನ್ವಿತ ಗುರಿಗಳನ್ನು ತಿಳಿಸಲು ಸಿಎನ್‍ಸಿ ನಿರಂತರ ಧರಣಿಗಳನ್ನು ನಡೆಸುತ್ತಿರುವುದಾಗಿ ತಿಳಿಸಿದರು.

ಭೂಮಿ ಸೃಷ್ಟಿಯಾದಾಗಲೇ ಕೊಡವ ಜನಾಂಗದ ಸಾಂಪ್ರದಾಯಿಕ ಮತ್ತು ಅವಿಭಾಜ್ಯ ತಾಯ್ನಾಡು ಕೊಡವಲ್ಯಾಂಡ್ ಅಸ್ತಿತ್ವದಲ್ಲಿದ್ದು, ಪವಿತ್ರ ಕಾವೇರಿ ನದಿಯ ಎರಡೂ ಬದಿಯಲ್ಲಿ ಕೊಡವರು ಅರಳಿ ವಿಕಸನಗೊಂಡಿದ್ದಾರೆ. ಆದರೆ 1956 ರ ರಾಜ್ಯ ಮರು-ಸಂಘಟನೆ ಕಾಯಿದೆಯಡಿಯಲ್ಲಿ ವಿಶಾಲ ಮೈಸೂರಿನೊಂದಿಗೆ ಕೂರ್ಗ್ ವಿಲೀನಗೊಂಡು ನಮ್ಮೆಲ್ಲ ಭರವಸೆಗಳು ಮತ್ತು ಆಕಾಂಕ್ಷೆಗಳು ಛಿದ್ರಗೊಂಡವು ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಕೊಡವಲ್ಯಾಂಡ್‍ಗೆ ಭೌಗೋಳಿಕ-ರಾಜಕೀಯ ಸ್ವಾಯತ್ತತೆಯನ್ನು ರಚಿಸುವ ಮೂಲಕ ರಾಷ್ಟ್ರ ಮತ್ತು ವಿಶ್ವ ಶಾಂತಿಗಾಗಿ ಕೊಡವರು ಪ್ರಾಣತ್ಯಾಗ ಮಾಡಿದ ಸತ್ಯವನ್ನು ಒಪ್ಪಿಕೊಳ್ಳಬೇಕು. ಸಂವಿಧಾನದ ಆರ್ಟಿಕಲ್ 244(ಎ) ಆರ್/ಡಬ್ಲ್ಯೂ 6ನೇ ಮತ್ತು 8ನೇ ಶೆಡ್ಯೂಲ್ ಅಡಿಯಲ್ಲಿ ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆಯನ್ನು ಆಂತರಿಕ ಸ್ವಯಂ-ನಿರ್ಣಯ ಅಧಿಕಾರದ ಹಕ್ಕಿನೊಂದಿಗೆ ರೂಪಿಸಬೇಕು. ಅತೀ ಸೂಕ್ಷ್ಮಾತಿ ಸೂಕ್ಷ್ಮ ಮೈಕ್ರೋ ಕೊಡವ ರೇಸ್ ಅನ್ನು ಎಸ್‍ಟಿ ಪಟ್ಟಿಯಲ್ಲಿ ಸೇರಿಸಬೇಕು. ಕೊಡವ ಜನಾಂಗೀಯ “ಸಂಸ್ಕಾರ ಗನ್” ಹಕ್ಕನ್ನು ಸಂವಿಧಾನದ 25 ಮತ್ತು 26 ನೇ ವಿಧಿಗಳಡಿಯಲ್ಲಿ ಅನುಮೋದಿಸಬೇಕು ಎಂದು ಒತ್ತಾಯಿಸಿದರು.

ಕೊಡವ ಜನಾಂಗವು ಎರಡು ಮಾನವ ದುರಂತಗಳನ್ನು ಮತ್ತು ಒಂದು ಭೌಗೋಳಿಕ-ರಾಜಕೀಯ ದುರಂತವನ್ನು ಅನುಭವಿಸಿದೆ. 1633 ರಿಂದ 1834 ರವರೆಗಿನ ಅರಮನೆಯ ಪಿತೂರಿಯಲ್ಲಿ ಕೊಡವ ಜನಾಂಗದ ರಾಜಕೀಯ ಹತ್ಯೆಗಳಾಗಿದೆ. 1785 ರಲ್ಲಿ ದೇವಾಟ್‍ಪರಂಬ್ ದುರಂತದಲ್ಲಿ ಕೊಡವ ಹತ್ಯಾಕಾಂಡವಾಗಿದೆ. 20ನೇ ಶತಮಾನದಲ್ಲಿ 1956 ಶಾಸನದಡಿಯಲ್ಲಿ ಮಹಾನ್ ಭೂ-ರಾಜಕೀಯ ಆಕ್ರಮಣ ನಡೆಯಿತು. ಕೊಡವ ಅವಿಭಾಜ್ಯ ಮತ್ತು ಸಾಂಪ್ರದಾಯಿಕ ತಾಯ್ನಾಡು ಕೂರ್ಗ್ ರಾಜ್ಯವನ್ನು ಕಿತ್ತುಕೊಳ್ಳಲಾಯಿತು. ಕೊಡವರು ಈ ಆಘಾತದಿಂದ ಇಲ್ಲಿಯವರೆಗೆ ಹೊರಬರಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.

ಕೂರ್ಗ್‍ನ ಆದಿಮಸಂಜಾತ ಮೂಲನಿವಾಸಿ ಕೊಡವ ಜನಾಂಗವನ್ನು ಹೊಸ ಮರು-ವ್ಯಾಖ್ಯಾನಿತ ಮಾನದಂಡಗಳ ಪ್ರಕಾರ ನಮ್ಮ ಸಂವಿಧಾನದ ಶೆಡ್ಯೂಲ್ ಪಟ್ಟಿಯಲ್ಲಿ ಸೇರಿಸಬೇಕು. ಕೊಡವ ತಕ್ಕ್ ಅನ್ನು 8ನೇ ಶೆಡ್ಯೂಲ್‍ಗೆ ಸೇರಿಸಬೇಕು. 347, 350, 350ಎ ಮತ್ತು 350ಬಿ ಅಡಿಯಲ್ಲಿ ಕೊಡವ ತಕ್ಕ್ ನ್ನು ಪಠ್ಯಕ್ರಮ ಮತ್ತು ಆಡಳಿತದಲ್ಲಿ ಪರಿಚಯಿಸಬೇಕು.

ಕೊಡವ ಸಂಸ್ಕೃತಿ-ಜಾನಪದ ಪರಂಪರೆಯನ್ನು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿ ಸೇರಿಸಬೇಕು. ಕೊಡವ ಸುಧಾರಿತ ಅಧ್ಯಯನ ಕೇಂದ್ರದ ಜೊತೆಗೆ ವಿಶ್ವ ಕೊಡವಾಲಜಿ ಅಧ್ಯಯನ ಕೇಂದ್ರವನ್ನು ಸ್ಥಾಪಿಸಬೇಕು. ಜಲದೇವತೆ ಕಾವೇರಿಯ ಜನ್ಮ ಸ್ಥಳವನ್ನು ಯಹೂದಿ ಜನರ ಟೆಂಪಲ್ ಮೌಂಟ್ ಮೊರೈಯಾ ಮಾದರಿಯಲ್ಲಿ ಕೊಡವ ಜನಾಂಗದ ಪವಿತ್ರ ತೀರ್ಥಯಾತ್ರಾ ಕೇಂದ್ರ ಎಂದು ಸರ್ಕಾರ ಪರಿಗಣಿಸಬೇಕು. ಅರಮನೆಯ ಸಂಚಿನಲ್ಲಿ ನಡೆದ ರಾಜಕೀಯ ಹತ್ಯೆಗಳ ಕುರಿತು ನಾಲ್ನಾಡ್ ಅರಮನೆ ಮತ್ತು ಮಡಿಕೇರಿ ಕೋಟೆಯಲ್ಲಿ ಹಾಗೂ ಕೊಡವ ಶೌರ್ಯವನ್ನು ಪ್ರತಿಬಿಂಬಿಸುವ ಉಲುಗುಲಿ-ಸುಂಟಿಕೊಪ್ಪ ಮತ್ತು ಮುಳ್ಳುಸೋಗೆಯಲ್ಲಿ ಯುದ್ಧ ಸ್ಮಾರಕ ನಿರ್ಮಾಣ ಮಾಡಬೇಕು. ಸಂವಿಧಾನದ 49 ನೇ ವಿಧಿ ಮತ್ತು 1964 ರ ವೆನಿಸ್ ಘೋಷಣೆಯಡಿಯಲ್ಲಿ ದೇವಾಟ್‍ಬರಂಬ್‍ನಲ್ಲಿ ಅಂತರರಾಷ್ಟ್ರೀಯ ಕೊಡವ ನರಮೇಧದ ಸ್ಮಾರಕ ನಿರ್ಮಾಣಕ್ಕೆ ಮುಂದಾಗಬೇಕು ಎಂದು ನಾಚಪ್ಪ ಒತ್ತಾಯಿಸಿದರು.

ಧರಣಿ ನಿರತರು ಸಿಎನ್‍ಸಿ ಯ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಅಪರ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಅವರಿಗೆ ಸಲ್ಲಿಸಿದರು. ಸಿಎನ್‍ಸಿ ಮಹಿಳಾ ಸ್ವಯಂ ಸೇವಕರಾದ ಪಟ್ಟಮಾಡ ಲಲಿತಾ ಗಣಪತಿ, ಪುಲ್ಲೇರ ಸ್ವಾತಿ ಕಾಳಪ್ಪ, ಕಲಿಯಂಡ ಮೀನಾ ಪ್ರಕಾಶ್, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಲೆ.ಕರ್ನಲ್ ಬಿ.ಎಂ.ಪಾರ್ವತಿ, ಕೂಪದಿರ ಪುಷ್ಪ ಮುತ್ತಪ್ಪ, ಪುರುಷ ಸ್ವಯಂ ಸೇವಕರಾದ ಕಲಿಯಂಡ ಪ್ರಕಾಶ್, ಪುಲ್ಲೇರ ಕಾಳಪ್ಪ, ಅಜ್ಜಿಕುಟ್ಟಿರ ಲೋಕೇಶ್, ಬೊಟ್ಟಂಗಡ ಗಿರೀಶ್, ಪಟ್ಟಮಾಡ ಕುಶ, ಚೆಂಬಂಡ ಜನತ್, ಮಂದಪಂಡ ಮನೋಜ್, ಕಾಟುಮಣಿಯಂಡ ಉಮೇಶ್, ಅಪ್ಪಾರಂಡ ಪ್ರಸಾದ್, ಮೇದುರ ಕಂಠಿ, ಮಣವಟ್ಟಿರ ಚಿಣ್ಣಪ್ಪ, ಪುಟ್ಟಿಚಂಡ ದೇವಯ್ಯ, ನಂದಿನೆರವಂಡ ವಿಜು, ಅಜ್ಜಿನಿಕಂಡ ಸನ್ನಿ ಮಾಚಯ್ಯ, ಕೂಪದಿರ ಸಾಬು, ಮಂದಪಂಡ ಸೂರಜ್, ಮಣವಟ್ಟಿರ ಶಿವಣಿ, ಕುಲ್ಲೇಟಿರ ಅರುಣ ಬೇಬ, ಬಡುವಂಡ ವಿಜಯ, ಮಣವಟ್ಟಿರ ಜಗದೀಶ್, ಮಣವಟ್ಟಿರ ಸ್ವರೂಪ್, ಮಣವಟ್ಟಿರ ನಂದ, ಪಟ್ಟಮಾಡ ಪ್ರಕಾಶ್ ಹಾಗೂ ಪಟ್ಟಮಾಡ ಅಶೋಕ್ ಧರಣಿಯಲ್ಲಿ ಪಾಲ್ಗೊಂಡಿದ್ದರು.

ಕೇಂದ್ರ ಗೃಹ ಮಂತ್ರಿ ಅಮಿತ್ ಶಾ, ಕೇಂದ್ರ ಕಾನೂನು ಮಂತ್ರಿ ಕಿರಣ್ ರಿಜಿಜು, ಅರ್ಥಶಾಸ್ತ್ರಜ್ಞ ಮತ್ತು ಕೇಂದ್ರದ ಮಾಜಿ ಕಾನೂನು ಮಂತ್ರಿ ಡಾ.ಸುಬ್ರಮಣ್ಯನ್ ಸ್ವಾಮಿ ಹಾಗೂ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನಾಚಪ್ಪ ಅವರು ಜಿಲ್ಲಾಡಳಿತದ ಮೂಲಕ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಸೂರ್ಯ-ಚಂದ್ರ, ಭೂದೇವಿ-ವನದೇವಿ, ಜಲದೇವತೆ ಕಾವೇರಿ, ಗುರು-ಕಾರೋಣ ಮತ್ತು ಭಾರತದ ಪವಿತ್ರ ಸಂವಿಧಾನದ ಹೆಸರಿನಲ್ಲಿ ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆಗಾಗಿ ಸಿಎನ್‌ಸಿಯೊಂದಿಗೆ ಸಮರ್ಪಣಾ ಭಾವದಿಂದ ಅರ್ಪಿಸಿಕೊಳ್ಳುವುದಾಗಿ ಪ್ರಮುಖರು ಇದೇ ಸಂದರ್ಭ ಪ್ರತಿಜ್ಞಾವಿಧಿ ಸ್ವೀಕರಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು