News Karnataka Kannada
Monday, May 06 2024
ಮಡಿಕೇರಿ

21 ದಿನದಲ್ಲಿಯೇ ಸರ್ಕಾರದ ಮೊದಲ ಗ್ಯಾರಂಟಿ ಜಾರಿ, ‘ಶಕ್ತಿ’ ಯೋಜನೆಗೆ ಎನ್.ಎಸ್.ಭೋಸರಾಜು ಚಾಲನೆ

Government issues first guarantee within 21 days, launches 'Shakti' scheme by NS Bhosaraju
Photo Credit : News Kannada

ಮಡಿಕೇರಿ: ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಶಕ್ತಿ’ ಯೋಜನೆಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು, ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಭೋಸರಾಜು ಅವರು ಭಾನುವಾರ ಚಾಲನೆ ನೀಡಿದರು.

ನಗರದ ಕೆಎಸ್‍ಆರ್‍ಟಿಸಿ ಬಸ್ಸು ನಿಲ್ದಾಣದಲ್ಲಿ ‘ಶಕ್ತಿ’ ಉಚಿತ ಪ್ರಯಾಣ ನಮ್ಮ ಪ್ರಮಾಣ’ ಮಹಿಳಾ ಸಬಲೀಕರಣದತ್ತ ದಿಟ್ಟ ಹೆಜ್ಜೆ ‘ಶಕ್ತಿ’ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ರಾಜ್ಯದ ನಿವಾಸಿ ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯವನ್ನು ಸರ್ಕಾರ ಕಲ್ಪಿಸಿದೆ ಎಂದು ಸಚಿವರು ತಿಳಿಸಿದರು.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನಗರ ಸಾರಿಗೆ, ಸಾಮಾನ್ಯ ಮತ್ತು ವೇಗದೂತ ಬಸ್ಸುಗಳಲ್ಲಿ ಮಹಿಳೆಯರು ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣಿಸಲು ಸರ್ಕಾರ ಅವಕಾಶ ಮಾಡಿದೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಭೋಸರಾಜು ಅವರು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದು 21 ದಿನದಲ್ಲಿಯೇ 5 ಗ್ಯಾರಂಟಿಗಳಲ್ಲಿ ‘ಶಕ್ತಿ’ ಯೋಜನೆಯಡಿ ಮೊದಲ ಗ್ಯಾರಂಟಿಯನ್ನು ಜಾರಿಗೊಳಿಸಿದ್ದೇವೆ, ಉಳಿದಂತೆ ಶೀಘ್ರ ಅನ್ನಭಾಗ್ಯ ಯೋಜನೆ ಜೊತೆಗೆ ಆಗಸ್ಟ್ 15 ರೊಳಗೆ ಉಳಿದ ಗ್ಯಾರಂಟಿ ಯೋಜನೆ ಜಾರಿಗೊಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.

ಕೊಡಗು ಜಿಲ್ಲೆಯಲ್ಲಿ 91 ಬಸ್ಸುಗಳು ಸಂಚರಿಸುತ್ತಿದ್ದು, ಇನ್ನೂ ಹೆಚ್ಚಿನ ಬಸ್ಸುಗಳ ಸೌಕರ್ಯ ಬೇಕಿದೆ. ಜೊತೆಗೆ ವಿರಾಜಪೇಟೆಯಲ್ಲಿಯೂ ಕೆಎಸ್‍ಆರ್‍ಟಿಸಿ ಘಟಕ ಸ್ಥಾಪನೆಗೆ ಕ್ರಮ ವಹಿಸಲಾಗುವುದು ಎಂದು ಸಚಿವರು ನುಡಿದರು.

ಸರ್ಕಾರದ ಯೋಜನೆಗಳು ಅರ್ಹರಿಗೆ ತಲುಪಬೇಕು. ಯಾವುದೇ ರೀತಿಯ ತೊಂದರೆ ಆಗದಂತೆ ಎಚ್ಚರ ವಹಿಸಬೇಕು. ಸರ್ಕಾರದ ಆದೇಶವನ್ನು ಪರಿಪೂರ್ಣವಾಗಿ ಅನುಷ್ಠಾನಗೊಳಿಸಬೇಕು ಎಂದು ಸಚಿವರು ತಾಕೀತು ಮಾಡಿದರು.

‘ಸಾರ್ವಜನಿಕ ಸಾರಿಗೆ ಸಂಸ್ಥೆಯಲ್ಲಿ ಪ್ರಯಾಣ ಮಾಡುವುದರಿಂದ ಹಲವು ಸಮಸ್ಯೆಗಳು ಬೆಳಕಿಗೆ ಬರುತ್ತವೆ. ಅದನ್ನು ಸರ್ಕಾರದ ಗಮನಕ್ಕೂ ತರಬಹುದಾಗಿದೆ  ಯಾವುದೇ ರೀತಿಯ ದೂರು ಬರದಂತೆ ಅಧಿಕಾರಿಗಳು ಎಚ್ಚರದಿಂದ ಕಾರ್ಯನಿರ್ವಹಿಸಬೇಕು. ಆ ನಿಟ್ಟಿನಲ್ಲಿ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು  ಭೋಸರಾಜು ಅವರು ನುಡಿದರು.’

ಶಾಸಕರಾದ ಡಾ.ಮಂತರ್ ಗೌಡ ಅವರು ಮಾತನಾಡಿ ಸರ್ಕಾರ ಪ್ರಣಾಳಿಕೆಯಲ್ಲಿ ಹೇಳಿದಂತೆ ನಡೆದುಕೊಂಡಿದೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರು ಮೊದಲ ಗ್ಯಾರಂಟಿಯಾಗಿ ‘ಶಕ್ತಿ’ ಯೋಜನೆ ಅನುಷ್ಠಾನಗೊಳಿಸಿದ್ದಾರೆ ಎಂದರು.

ಜಿಲ್ಲೆಯಲ್ಲಿ 91 ಬಸ್ಸುಗಳು ಸಂಚರಿಸುತ್ತಿದ್ದು, ಇದರಲ್ಲಿ 41 ಬಸ್ಸುಗಳು ಮಾತ್ರ ಜಿಲ್ಲಾ ವ್ಯಾಪ್ತಿಯಲ್ಲಿ ಸಂಚರಿಸುತ್ತಿವೆ. ಆದ್ದರಿಂದ ಬಸ್ಸುಗಳ ಸಂಖ್ಯೆ ಹೆಚ್ಚಿಸಿ, ಎಲ್ಲೆಡೆ ಸರ್ಕಾರಿ ಸಾರಿಗೆ ಬಸ್ಸುಗಳು ಸಂಚಾರ ಮಾಡುವಂತಾಗಬೇಕು ಎಂದು ಶಾಸಕರು ಕೋರಿದರು.

‘ಶಕ್ತಿ’ ಯೋಜನೆಯು ಬಡ ಹಾಗೂ ಕಷ್ಟದಲ್ಲಿರುವ ಮಹಿಳೆಯರಿಗೆ ಸಹಕಾರಿ ಆಗಲಿದೆ. ಸ್ಥಳೀಯ ಸಮಸ್ಯೆಗಳು ಇದ್ದಲ್ಲಿ ಮಾಹಿತಿ ನೀಡುವಂತಾಗಬೇಕು ಎಂದರು.

ಕೆಎಸ್‍ಆರ್‍ಟಿಸಿ ಪುತ್ತೂರು ವಿಭಾಗದ ನಿಯಂತ್ರಣಾಧಿಕಾರಿ ಬಿ.ಜಯಕರ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಪ್ರಯಾಣಿಸುವ ಮಹಿಳೆಯರು ಶಕ್ತಿ ಕಾರ್ಡ್ ಪಡೆಯುವ ತನಕ ಆಧಾರ್ ಅಥವಾ ಚುನಾವಣಾ ಗುರುತಿನ ಚೀಟಿ ತೋರಿಸಿ ಶೂನ್ಯ ಮೌಲ್ಯದ ಟಿಕೆಟ್ ಪಡೆದು ಮಹಿಳೆಯರು ರಾಜ್ಯದ್ಯಾಂತ ಪ್ರಯಾಣ ಮಾಡಬಹುದಾಗಿದೆ ಎಂದರು.

ಮಹಿಳಾ ಪ್ರಯಾಣಿಕರು ‘ಶಕ್ತಿ’ ಸ್ಮಾರ್ಟ್ ಕಾರ್ಡ್ ಗಾಗಿ ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬೇಕು. ಅಲ್ಲಿಯ ವರೆಗೆ ಈ ದಾಖಲೆಗಳನ್ನು ತೋರಿಸಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ ಎಂದರು.

ನಗರರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ತಹಶೀಲ್ದಾರ್ ಕಿರಣ್ ಗೌರಯ್ಯ, ಕೆಎಸ್‍ಆರ್‍ಟಿಸಿ ಮಡಿಕೇರಿ ಘಟಕದ ವ್ಯವಸ್ಥಾಪಕರಾದ ಗೀತಾ, ಭದ್ರತಾ ಮತ್ತು ಜಾಗೃತಿ ವಿಭಾಗದ ಅಧಿಕಾರಿ ಶರತ್ ಕುಮಾರ್ ಇತರರು ಇದ್ದರು. ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು.

ಸಿಹಿ ವಿತರಿಸಿ ಶಕ್ತಿ ಯೋಜನೆಗೆ ಚಾಲನೆ: ‘ಶಕ್ತಿ ಯೋಜನೆಗೆ ಚಾಲನೆ ನೀಡುವ ಸಂದರ್ಭದಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು ಮಹಿಳೆಯರಿಗೆ ಸಿಹಿ ವಿತರಿಸಿ ಉಚಿತ ಬಸ್ಸು ಪ್ರಯಾಣಕ್ಕೆ ಚಾಲನೆ ನೀಡಿದರು.

ಬಸ್ಸು ನಗರದ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತ ಮೂಲಕ, ಮಂಗೇರಿರ ಮುತ್ತಣ್ಣ ವೃತ್ತ, ಜನರಲ್ ಕೆ.ಎಸ್.ತಿಮ್ಮಯ್ಯ ವೃತ್ತದ ಮೂಲಕ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದ ವರೆಗೆ ಸಾಗಿ ಮತ್ತೆ ಬಸ್ಸು ನಿಲ್ದಾಣ ತಲುಪಿತು. ‘ಶಕ್ತಿ’ ಯೋಜನೆ ಚಾಲನೆ ಸಂದರ್ಭದಲ್ಲಿ ಮಹಿಳೆಯರಲ್ಲಿ ಒಂದು ರೀತಿ ಸಂಭ್ರಮ, ಸಡಗರದ ವಾತಾವರಣ ನಿರ್ಮಾಣವಾಗಿತ್ತು.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ನುಡಿದಂತೆ ನಡೆದಿದ್ದೇವೆ, ನಡೆಯುತ್ತೇವೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಮುಂಗಾರು ಎದುರಿಸಲು ಸರ್ಕಾರ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ. ಕಾಡಾನೆ ಹಾವಳಿ ನಿಯಂತ್ರಣ ಸೇರಿದಂತೆ ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು ಎಂದು ಸಚಿವರು ಹೇಳಿದರು.

ಬಜೆಟ್ ಆರಂಭಕ್ಕೂ ಮೊದಲು ಜಿಲ್ಲೆಗೆ ಆಗಮಿಸಿ ಕೆಡಿಪಿ ಸಭೆ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಭೋಸರಾಜು ಅವರು ತಿಳಿಸಿದರು.

ಶಾಸಕರಾದ ಡಾ.ಮಂತರ್ ಗೌಡ ಅವರು ಮಾತನಾಡಿ ಮಡಿಕೇರಿ ನಗರಕ್ಕೆ ಕುಡಿಯುವ ಪೂರೈಕೆಯಲ್ಲಿ ವ್ಯತ್ಯಯ ಆಗದಂತೆ ಗಮನಹರಿಸಲಾಗಿದೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು