News Karnataka Kannada
Tuesday, April 30 2024
ಮಡಿಕೇರಿ

ಮಡಿಕೇರಿ: ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯಗೌಡರ ಪ್ರತಿಮೆ ಕೊಡಗಿಗೆ ಆಗಮನ

Madikeri: A statue of freedom fighter Kedambadi Ramayya Gowda arrives in Kodagu
Photo Credit : By Author

ಮಡಿಕೇರಿ: ಬ್ರಿಟಿಷರ ವಿರುದ್ಧ ರಣ ಕಹಳೆ ಮೊಳಗಿಸಿದ್ದ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಸುಳ್ಯದ ಕೆದಂಬಾಡಿ ರಾಮಯ್ಯಗೌಡರ ಕಂಚಿನ ಪ್ರತಿಮೆಯನ್ನು ಮಂಗಳೂರಿನ ಬಾವುಟಗುಡ್ಡೆಯಲ್ಲಿ ಪ್ರತಿಷ್ಠಾಪಿಸಲಾಗುತ್ತಿದೆ.

ಆಂಧ್ರಪ್ರದೇಶದ ವಿಜಯವಾಡದಲ್ಲಿ ೧೧ ಅಡಿ ಎತ್ತರದ ಕಂಚಿನ ಪ್ರತಿಮೆ ತಯಾರಾಗಿದ್ದು, ಆ.೨೭ ರಂದು ಮಂಡ್ಯದ ಆದಿಚುಂಚನಗಿರಿ ಕ್ಷೇತ್ರಕ್ಕೆ ತಲುಪಲಿದೆ. ಆ.೨೮ ರಂದು ಜಗದ್ಗುರು ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿಗಳಿಂದ ಪ್ರತಿಮೆಯ ಯಾತ್ರೆಗೆ ಚಾಲನೆ ದೊರೆಯಲಿದ್ದು, ಮಧ್ಯಾಹ್ನ ೨.೩೦ ಗಂಟೆಗೆ ಕೊಡಗು ಪ್ರವೇಶಿಸಲಿದೆ ಎಂದು ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೆದಂಬಾಡಿ ರಾಮಯ್ಯಗೌಡರ ಕಂಚಿನ ಪ್ರತಿಮೆ ಹುಟ್ಟೂರು ಸುಳ್ಯಕ್ಕೆ ಆ.೨೯ರಂದು ತಲುಪಲಿದ್ದು, ಸುಳ್ಯದಿಂದ ಮಂಗಳೂರಿಗೆ ಅದ್ಧೂರಿ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಭಾನುವಾರ ಶಿರಂಗಾಲದ ಮೂಲಕ ಕೊಡಗು ಜಿಲ್ಲೆಗೆ ಪ್ರತಿಮೆ ಪ್ರವೇಶ ಮಾಡಲಿದ್ದು, ಮಧ್ಯಾಹ್ನ ೩ ಗಂಟೆಗೆ ಕುಶಾಲನಗರ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಗುವುದು. ನಂತರ ಕಾರು ನಿಲ್ದಾಣದಲ್ಲಿ ಪುಷ್ಪನಮನದ ಮೂಲಕ ಗೌರವ ಅರ್ಪಿಸಲಾಗುವುದು.

ಪ್ರತಿಮೆ ಹೊತ್ತ ವಾಹನದ ಮುಂಭಾಗದಲ್ಲಿ ಕೆದಂಬಾಡಿ ರಾಮಯ್ಯಗೌಡರ ಅವರ ಭಾವಚಿತ್ರದೊಂದಿಗೆ ಅಲಂಕೃತ ಬೆಳ್ಳಿರಥ ಇರಲಿದೆ. ಗುಡ್ಡೆಹೊಸೂರು, ಸುಂಟಿಕೊಪ್ಪದ ಮೂಲಕ ಸಂಜೆ ೪.೩೦ ಗಂಟೆಗೆ ಸುದರ್ಶನ ವೃತ್ತಕ್ಕೆ ಬರುವ ಪ್ರತಿಮೆಗೆ ಪುಷ್ಪನಮನ ಸಲ್ಲಿಸಲಾಗುವುದು.

ಕೆದಂಬಾಡಿ ರಾಮಯ್ಯ ಗೌಡ ಸಹವರ್ತಿ ಸ್ವಾತಂತ್ರ‍್ಯ ಹೋರಾಟಗಾರ ಅಪ್ಪಯ್ಯಗೌಡರ ಪ್ರತಿಮೆ ಬಳಿ ನಾಡಿನ ಹಿರಿಯರು, ಜನಪ್ರತಿನಿಧಿಗಳು, ಕೆದಂಬಾಡಿ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಗೌರವ ಸಲ್ಲಿಸಲಿದ್ದಾರೆ. ನಂತರ ವಾಹನ ಜಾಥಾದೊಂದಿಗೆ ತಿಮ್ಮಯ್ಯ ವೃತ್ತ, ಬಸ್ ನಿಲ್ದಾಣ, ಗುಡ್ಡೆಮನೆ ಅಪ್ಪಯ್ಯ ಗೌಡ ರಸ್ತೆಯಲ್ಲಿ ಸಾಗಿ ಕೊಡಗು ಗೌಡ ಸಮಾಜದ ಆವರಣದಲ್ಲಿ ರಥ ತಂಗಲಿದೆ.

ಆ.೨೯ ರಂದು ಬೆಳಗ್ಗೆ ೭ ಗಂಟೆಗೆ ನಗರದ ಕೋಟೆ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ರಥವು ಸುಮಾರು ೩೦೦ಕ್ಕೂ ಹೆಚ್ಚು ವಾಹನಗಳ ಜಾಥಾದೊಂದಿಗೆ ಸುಳ್ಯ ತಲುಪಲಿದೆ ಎಂದು ಸೂರ್ತಲೆ ಸೋಮಣ್ಣ ತಿಳಿಸಿದ್ದಾರೆ.

ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ದುಷ್ಟ ಆಡಳಿತದ ವಿರುದ್ಧ ಸಮರ ಸಾರಿ ಕೊಡಗು ಹಾಗೂ ಮಂಗಳೂರು ಪ್ರಾಂತ್ಯದಿಂದ ಬ್ರಿಟೀಷ್ ಸೈನ್ಯವನ್ನು ಹೊಡೆದೋಡಿಸಿ ಸ್ವಾತಂತ್ರ‍್ಯದ ಧ್ವಜವನ್ನು ಹಾರಿಸಿ ೧೩ ದಿವಸಗಳ ಕಾಲ ಆಡಳಿತ ನಡೆಸಿದ ಯೋಧ ಪಡೆಯ ಮುಂಚೂಣಿ ನಾಯಕರಲ್ಲಿ ಹುತಾತ್ಮರಾದ ಗುಡ್ಡೆಮನೆ ಅಪ್ಪಯ್ಯ ಗೌಡ ಹಾಗೂ ಕೆದಂಬಾಡಿ ರಾಮಯ್ಯ ಗೌಡರು ಪ್ರಮುಖರು.

ಭಾರತದ ಪ್ರಥಮ ಸ್ವಾತಂತ್ರö್ಯ ಸಂಗ್ರಾಮಕ್ಕೂ ಮೊದಲೇ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗೆ ಸ್ವಾತಂತ್ರö್ಯದ ಕಿಚ್ಚು ಹಚ್ಚಿಸಿದ, ಇತಿಹಾಸದ ಪುಟಗಳಲ್ಲಿ ಅಷ್ಟಾಗಿ ಬೆಳಕು ಚೆಲ್ಲದ ಮಹಾನ್ ನಾಯಕನ ಸಾಧನೆಗೆ ಗೌರವ ನೀಡುವ ಕಾಲ ಸನ್ನಿಹಿತವಾಗುತ್ತಿದೆ. ಪ್ರಥಮ ಸ್ವಾತಂತ್ರ‍್ಯ ಸಂಗ್ರಾಮ ಆರಂಭವಾಗಿದ್ದು ೧೮೫೭ ರಲ್ಲಿ ಎಂದು ಉಲ್ಲೇಖಿಸಲಾಗಿದ್ದರೂ ಅದಕ್ಕೂ ೨೦ ವರ್ಷ ಮೊದಲೇ ಬ್ರಿಟಿಷರ ದಾಸ್ಯದ ಪದ್ಧತಿಯನ್ನು ವಿರೋಧಿಸಿ ಹೋರಾಟ ನಡೆದಿದೆ.

ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಂಗಳೂರು ಮಹಾನಗರ ಪಾಲಿಕೆಯು ರಾಮಯ್ಯ ಗೌಡರ ಕಂಚಿನ ಪ್ರತಿಮೆಯನ್ನು ಬಾವುಟಗುಡ್ಡೆಯಲ್ಲಿ ಸ್ಥಾಪಿಸಲು ಅನುದಾನ ಮಂಜೂರು ಮಾಡಿದೆ. ಈಗಾಗಲೇ ಪ್ರತಿಮೆ ಪ್ರತಿಷ್ಠಾಪನೆಯ ಸ್ಥಳದ ಅಂಗಣ ಮತ್ತು ಅಡಿಪಾಯದ ಕಾಮಗಾರಿ ಪೂರ್ಣಗೊಂಡಿದೆ.

ಅಕ್ಟೋಬರ್ ತಿಂಗಳಿನಲ್ಲಿ ಜಗದ್ಗುರು ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮಿಜಿಗಳ ನೇತೃತ್ವದಲ್ಲಿ ಈ ಪ್ರತಿಮೆ ಲೋಕಾರ್ಪಣೆಗೊಳ್ಳಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರು ಹಾಗೂ ಶಾಸಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು