News Karnataka Kannada
Sunday, May 05 2024
ಮಡಿಕೇರಿ

ಕುಶಾಲನಗರದಲ್ಲಿ ಕಳೆಗಟ್ಟಿದ ಜಾತ್ರಾ ಸಂಭ್ರಮ

Jatra celebrations in Kushalnagar
Photo Credit : By Author

ಕುಶಾಲನಗರ: ಸಂಜೆ 6 ಗಂಟೆ ಆಗುವುದೇ ತಡ, ಕುಶಾಲನಗರ ಪಟ್ಟಣದ ರಸ್ತೆಗಳೆಲ್ಲಾ ಗುಂಡೂರಾವ್ ಬಡಾವಣೆಯ ಜಾತ್ರಾ ಮೈದಾನದತ್ತ ಮುಖ ಮಾಡುತ್ತಿದೆ. ಚುಮು ಚುಮು ಚಳಿ ಮೈಯನ್ನು ಆವರಿಸಿಕೊಳ್ಳಲು ಶುರುಮಾಡುತ್ತಿದ್ದಂತೆಯೇ ಇಲ್ಲಿಯ ಸಾಂಸ್ಕೃತಿಕ ವೇದಿಕೆ ರಂಗೇರುತ್ತದೆ. ಮರಣ ಬಾವಿಯ ಬೈಕ್‌ಗಳ ಕಿವಿಗಪ್ಪಳಿಸುವ ಶಬ್ದದ ಮಧ್ಯೆ ರಾತ್ರಿ ತನಕ ಜಾತ್ರೆಯ ಸೊಗಡು ಅನುಭವಿಸುವುದೇ ವಿಶೇಷ ಅನುಭವ.

ಕುಶಾಲನಗರದ ಶ್ರೀ ಮಹಾಗಣಪತಿ ರಥೋತ್ಸವ ಹಿನ್ನೆಲೆಯಲ್ಲಿ ನಡೆಯುತ್ತಿರುವ ಜಾತ್ರೆ ಈ ಬಾರಿ ಕಳೆಗಟ್ಟಿದೆ. ಕೊರೊನಾ ಕಾರಣಕ್ಕೆ 2 ವರ್ಷ ಸರಳವಾಗಿ ನಡೆದಿದ್ದ ಕಾರ್ಯಕ್ರಮಗಳಲ್ಲಿ ಈಗ ಸಂಭ್ರಮ ಎದ್ದು ಕಾಣುತ್ತಿದೆ. ಪ್ರತಿ ದಿನ ನಡೆಯುತ್ತಿರುವ ವೈವಿದ್ಯಮಯ ಸಾಂಸ್ಕೃತಿಕ ಕಲರವಗಳು ಮತ್ತು ಮನೋರಂಜನಾ ಚಟುವಟಿಕೆಗಳಲ್ಲಿ ಜನಸಂದಣಿ ಹೆಚ್ಚುತ್ತಲೇ ಇದೆ.

ರಥೋತ್ಸವ ಕಳೆದ ನಂತರ ಪ್ರತಿದಿನ ಜಾತ್ರಾ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದೆ. ಸ್ಥಳೀಯ ಕಲಾವಿದರಿಗೆ ಆದ್ಯತೆ ಕೊಟ್ಟು ಕಾರ್ಯಕ್ರಮಗಳನ್ನು ರೂಪಿಸಲಾಗಿದ್ದು, ವೈವಿದ್ಯಮಯವಾಗಿ ಮೂಡಿಬರುತ್ತಿದೆ. ದಿನಕಳೆದಂತೆ ಹೆಚ್ಚುತ್ತಿರುವ ಪ್ರೇಕ್ಷಕರ ಸಂಖ್ಯೆಯೇ ಇದಕ್ಕೆ ಸಾಕ್ಷಿ ಹೇಳುತ್ತಿದೆ.

ಕವಿಗೋಷ್ಠಿ, ಹಾಡು, ನೃತ್ಯ, ಮಿಮಿಕ್ರಿ, ರಸಮಂಜರಿ, ಜಾದೂ ಪ್ರದರ್ಶನ, ಅಂತ್ಯಾಕ್ಷರಿ, ರ‍್ಯಾಪ್ ಸಂಗೀತ. ಹೀಗೆ ಪ್ರತಿ ದಿನವೂ ವೇದಿಕೆಯಲ್ಲಿ ಕಲಾಭಿಮಾನಿಗಳಿಗೆ ರಸದೌತಣವನ್ನೇ ಉಣಬಡಿಸಲಾಗುತ್ತಿದೆ. ವಿ.ಪಿ. ಶಶಿಧರ್ ನೇತೃತ್ವದ ಸಾಂಸ್ಕೃತಿಕ ಸಮಿತಿಗೆ ಟಿ.ಆರ್. ಪ್ರಭುದೇವ್, ಬಿ.ಎಸ್. ಲೋಕೇಶ್ ಸಾಗರ್, ಪರಮೇಶ್ ಸಾಗರ್, ಆನಂದ್ ಕುಮಾರ್ ಮತ್ತಿತರ ಉತ್ಸಾಹಿಗಳು ಕೈ ಜೋಡಿಸುತ್ತಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳ ಯಶಸ್ಸಿಗೆ ದುಡಿಯುತ್ತಿದ್ದಾರೆ.

ಮನೋರಂಜನಾ ಚಟುವಟಿಕೆಗಳೂ ಸಾರ್ವಜನಿಕರನ್ನು ಸೆಳೆಯುತ್ತಿದೆ. ಜನಸಾಮಾನ್ಯರಿಗೂ ಕೈಗೆಟಕುವ ದರದಲ್ಲಿ ವಿವಿಧ ಆಟಗಳು ಇಲ್ಲಿ ಲಭ್ಯವಿದೆ. ಬಟ್ಟೆಯಿಂದ ಪಾತ್ರೆ ತನಕ ವಸ್ತುಗಳ ಖರೀದಿಗೂ ಅವಕಾಶವಿದೆ. ಇಲ್ಲಿಗೆ ಬಂದರೆ ಊಟಿ ಸಿಹಿ ಜೋಳದಿಂದ ಬೆಂಗಳೂರು ಹಪ್ಪಳದ ವರೆಗೆ ಬಾಯಿಯಲ್ಲಿ ನೀರೂರಿಸುವ ತಿಂಡಿ, ತಿನಿಸುಗಳ ರುಚಿಯನ್ನೂ ಸವಿಯಬಹುದಾಗಿದೆ.

ಜಾತ್ರೆಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ ಸಿಗುತ್ತಿರುವುದರಿಂದ ಸಾಕಷ್ಟು ಸುಪ್ತ ಪ್ರತಿಭೆಗಳು ಹೊರಬರುತ್ತಿದೆ. ಶುಕ್ರವಾರ (ನ.18) ರಾತ್ರಿ ನಡೆದ ಚಿತ್ತಾರ ಮ್ಯಾಜಿಕ್ ವಿತ್ ಮ್ಯೂಸಿಕ್ ಕಾರ್ಯಕ್ರಮವೇ ಇದಕ್ಕೆ ಸಾಕ್ಷಿ. ಕಲಾವಿದ ಟಿ.ಆರ್. ಪ್ರಭುದೇವ್ ಕೈಚಳಕದಲ್ಲಿ ಅನಾವರಣಗೊಂಡ ಜಾದೂ ಜಗತ್ತು ಸೇರಿದ್ದ ಮೈ ಕೊರೆಯುವ ಚಳಿಯಲ್ಲೂ ಸೇರಿದ್ದ ದೊಡ್ಡ ಸಂಖ್ಯೆಯ ಕಲಾಭಿಮಾನಿಗಳನ್ನು ರೋಮಾಂಚನಗೊಳಿಸಿತು. ನಮ್ಮೂರಲ್ಲೂ ಇಂತಹ ಪ್ರತಿಭೆಗಳು ಇದ್ದಾರೆಯೇ ಎಂದು ಆಶ್ಚರ್ಯಚಕಿತರಾಗಿ ಕಾರ್ಯಕ್ರಮ ವೀಕ್ಷಿಸಿದರು. ಸುಮಾರು 1 ಗಂಟೆ ಕಾಲ ಒಂದಕ್ಕಿಂತ ಒಂದು ಚೆಂದದ ಪ್ರದರ್ಶನ ಗಮನ ಸೆಳೆಯಿತು.

ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯರಿಗೆ ಆದ್ಯತೆ ಕೊಡುವ ಮೂಲಕ ಸ್ಥಳೀಯ ಕಲಾವಿದರ ಪ್ರತಿಭೆ ಅನಾವರಣಕ್ಕೆ ವೇದಿಕೆ ನೀಡಲಾಗುತ್ತಿದೆ. ಇದು ಅವರ ಭವಿಷ್ಯಕ್ಕೆ ಪೂರಕವಾಗಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದಾರೆ.
– ವಿ.ಪಿ. ಶಶಿಧರ್, ಅಧ್ಯಕ್ಷ, ಸಾಂಸ್ಕೃತಿಕ ಸಮಿತಿ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು