News Karnataka Kannada
Friday, May 10 2024
ಮಡಿಕೇರಿ

ಹೆಚ್ಚಿನ ಮಳೆ ಸಾಧ್ಯತೆ: ಅಗತ್ಯ ಮುನ್ನೆಚ್ಚರಕ್ಕೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚನೆ

Heavy rain likely: Deputy Commissioner Venkat Raja instructs to take necessary precautions
Photo Credit : News Kannada

ಮಡಿಕೇರಿ, ಜೂ.22: ಕೊಡಗು ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದ್ದು, ಆ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರ ವಹಿಸುವಂತೆ ನೋಡಲ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸೂಚಿಸಿದ್ದಾರೆ.

ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾದಲ್ಲಿ ಸಂಭವಿಸಬಹುದಾದ ಅನಾಹುತ ತಡೆಯುವ ಸಂಬಂಧ ಅಗತ್ಯ ಮುನ್ನೆಚ್ಚರ ವಹಿಸುವ ಬಗ್ಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ 300 ಮಿ.ಮೀ. ಮಳೆ ಕಡಿಮೆ ಇದೆ. ಆದರೂ ಮುಂದಿನ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ವ್ಯಾಪಕ ಮಳೆಯಾದಲ್ಲಿ, ಮಳೆಯಿಂದ ಉಂಟಾಗಬಹುದಾದ ಅವಘಡವನ್ನು ತಪ್ಪಿಸಲು ಅಗತ್ಯ ಕಟ್ಟೆಚ್ಚರ ವಹಿಸಬೇಕಿದೆ ಎಂದು ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.’

ಹೆಚ್ಚಿನ ಮಳೆಯಿಂದ ಉಂಟಾಗಬಹುದಾದ ಪ್ರಾಣ ಹಾನಿ, ಜಾನುವಾರು ಹಾನಿ, ಆಸ್ತಿ-ಪಾಸ್ತಿ ಹಾನಿ ಹೀಗೆ ಪ್ರತಿಯೊಂದರ ಬಗ್ಗೆ ಎಚ್ಚರ ವಹಿಸಬೇಕಿದೆ. ಆ ನಿಟ್ಟಿನಲ್ಲಿ ತಮ್ಮ ಹಂತದಲ್ಲಿ ತಂಡೋಪಾದಿಯಾಗಿ ಕಾರ್ಯನಿರ್ವಹಿಸಬೇಕು. ಜೊತೆಗೆ ಸ್ಥಳೀಯರಿಗೆ ಮಾಹಿತಿ ನೀಡುವಂತಾಗಬೇಕು ಎಂದು ವೆಂಕಟ್ ರಾಜಾ ಅವರು ಸೂಚಿಸಿದರು.

ನೋಡಲ್ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಸ್ಥಳ ಪರಿಶೀಲಿಸಿ ಹೆಚ್ಚಿನ ಮಳೆಯಿಂದ ಪ್ರವಾಹ, ಬರೆ ಕುಸಿತ ಮತ್ತಿತರ ಬಗ್ಗೆ ಮಾಹಿತಿ ನೀಡುವಂತಾಗಬೇಕು. ಅಧಿಕಾರಿಗಳು ರಜೆ ಹೋದಲ್ಲಿ ಮುಂಚಿತವಾಗಿ ಮಾಹಿತಿ ನೀಡಿ ಕೇಂದ್ರ ಸ್ಥಾನದಿಂದ ತೆರಳಬೇಕು ಎಂದು ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.

ಲೋಕೋಪಯೋಗಿ, ಪಂಚಾಯತ್ ರಾಜ್, ನಗರ/ಪಟ್ಟಣ ಸ್ಥಳೀಯ ಸಂಸ್ಥೆಗಳು, ಸೆಸ್ಕ್, ನೀರಾವರಿ, ಅರಣ್ಯ, ಕಂದಾಯ, ಹೀಗೆ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಸಂಬಂಧಿಸಿದಂತೆ ಅಗತ್ಯ ಮುನ್ನೆಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಸೂಚಿಸಿದರು.

ಚರಂಡಿ ಹಾಗೂ ಸೇತುವೆಯಲ್ಲಿ ನೀರು ಸರಾಗವಾಗಿ ಹೋಗುವಂತೆ ಸರಿಪಡಿಸುವುದು. ಸೆಸ್ಕ್ ವಿಭಾಗದ ಅಧಿಕಾರಿಗಳು ಹಳೇ ವಿದ್ಯುತ್ ಕಂಬಗಳ ಬದಲಾವಣೆ, ಕೆಟ್ಟಿರುವ ವಿದ್ಯುತ್ ಪರಿವರ್ತಕಗಳನ್ನು ಬದಲಿಸುವುದು ಹೀಗೆ ಹಲವು ಕಾರ್ಯಗಳ ಬಗ್ಗೆ ಜಿಲ್ಲಾಧಿಕಾರಿ ಅವರು ಮಾಹಿತಿ ಪಡೆದರು.

ಇದೇ ಜೂನ್ 27 ರಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ನಡೆಯಲಿದೆ. ತಮ್ಮ ತಮ್ಮ ಇಲಾಖೆ ವ್ಯಾಪ್ತಿಯಲ್ಲಿನ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ನಿಖರ ಮಾಹಿತಿ ಒದಗಿಸುವಂತೆ ಜಿಲ್ಲಾಧಿಕಾರಿ ಅವರು ಸ್ಪಷ್ಟ ನಿರ್ದೇಶನ ನೀಡಿದರು.

ಜಿ.ಪಂ.ಸಿಇಒ ಡಾ.ಎಸ್.ಆಕಾಶ್ ಅವರು ತಾ.ಪಂ.ಇಒಗಳು ಸೇರಿದಂತೆ ಎಂಜಿನಿಯರ್‍ಗಳು ಚರಂಡಿ, ಸೇತುವೆ ಬಗ್ಗೆ ಕೂಡಲೇ ವರದಿ ನೀಡಬೇಕು. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಶುದ್ಧ ಕುಡಿಯುವ ನೀರು ಪೂರೈಸಬೇಕು ಎಂದು ಸೂಚಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಡೆಂಗ್ಯೂ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಅಗತ್ಯ ಮುನ್ನೆಚ್ಚರ ವಹಿಸಬೇಕು. ಗ್ರಾ.ಪಂ.ಅಧಿಕಾರಿಗಳು ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸೂಚಿಸಿದರು. ಅಂಗನವಾಡಿಗಳು, ಶಾಲೆಗಳ ಸುಸ್ಥಿತಿ ಬಗ್ಗೆ ಗಮನಹರಿಸಬೇಕು. ಜಾನುವಾರುಗಳಿಗೆ ಔಷಧಿ ಮತ್ತಿತರವನ್ನು ಕಲ್ಪಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಜಿ.ಪಂ.ಸಿಇಒ ಅವರು ಸೂಚಿಸಿದರು.

ಈ ಬಾರಿ ಜೂನ್ ತಿಂಗಳಲ್ಲಿ ಕಡಿಮೆ ಮಳೆಯಾಗಿದೆ. ಆದ್ದರಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಭಣವಾಗದಂತೆ ಎಚ್ಚರವಹಿಸಬೇಕು. ಜೊತೆಗೆ ನೀರಿನ ಟ್ಯಾಂಕ್ ಶುಚಿಗೊಳಿಸಿ ಸ್ವಚ್ಛತೆಯತ್ತ ಗಮನಹರಿಸಬೇಕು ಎಂದು ಡಾ.ಎಸ್.ಆಕಾಶ್ ಅವರು ನಿರ್ದೇಶನ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಅವರು ಮಾತನಾಡಿ ಮಳೆ ಹಾನಿ ಹಾಗೂ ಮುನ್ನೆಚ್ಚರ ಬಗ್ಗೆ ವಿವಿಧ ಇಲಾಖೆ ಹಂತದಲ್ಲಿನ ಕ್ರಮಗಳ ಬಗ್ಗೆ ಮಾಹಿತಿ ಪಡೆದು ಮಾತನಾಡಿ ಎಲ್ಲಾ ಹಂತದ ಅಧಿಕಾರಿಗಳು ಸಂಘಟಿತರಾಗಿ ಕಾರ್ಯನಿರ್ವಹಿಸಬೇಕು ಎಂದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಶಬಾನಾ ಎಂ.ಶೇಖ್ ಅವರು ಜಿಲ್ಲೆಯಲ್ಲಿ ಇದುವರೆಗೆ 600 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬಿತ್ತನೆಯಾಗಿದೆ ಎಂದು ಮಾಹಿತಿ ನೀಡಿದರು.

ಸೆಸ್ಕ್ ಇಇ ಅನಿತಾ ಬಾಯಿ ಅವರು ಜಿಲ್ಲೆಯಲ್ಲಿ ಹಳೇ ವಿದ್ಯುತ್ ಕಂಬಗಳು ಹಾಗೂ ಕೆಟ್ಟು ಹೋಗಿರುವ ವಿದ್ಯುತ್ ಪರಿವರ್ತಕಗಳನ್ನು ಬದಲಿಸಲಾಗಿದೆ. ಮುಂಗಾರು ಸಂಬಂಧ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಸುಂಟಿಕೊಪ್ಪ ಸೇರಿದಂತೆ ಹಲವು ಕಡೆಗಳಲ್ಲಿ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮವಹಿಸಲಾಗಿದೆ ಎಂದರು.

ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ಕುಮಾರಸ್ವಾಮಿ ಅವರು ಕೊಯನಾಡು ಸಮೀಪದ ಕಿಂಡಿ ಅಣೆಕಟ್ಟು ಬಳಿ ಹೂಳು ತೆಗೆಯಲಾಗಿದೆ ಎಂದರು.

ಜಿಲ್ಲಾ ಅಗ್ನಿ ಶಾಮಕ ಇಲಾಖೆಯ ಅಧಿಕಾರಿಯವರು ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಿಂದ ಪ್ರವಾಹ ಉಂಟಾದಲ್ಲಿ ಭಾಗಮಂಡಲ ಸೇರಿದಂತೆ ಅಗತ್ಯ ಇರುವ ಕಡೆ ಬೋಟ್‍ಗಳ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ಉಪ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರರಾಜ್, ಎನ್‍ಡಿಆರ್ ಎಫ್ ತಂಡದ ಮುಖ್ಯಸ್ಥರಾದ ಶಾಂತಿಲಾಲ್ ಜಾಟಿಯಾ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ.ಕಳ್ಳಿಚಂಡ ಕಾರ್ಯಪ್ಪ, ಲೋಕೋಪಯೋಗಿ ಇಇ ಸಿದ್ದೇಗೌಡ, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಸುರೇಶ್ ಕುಮಾರ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಮಧುರ, ಎಸಿಎಫ್ ಪಾಷಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಎನ್.ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಶೇಖರ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಎಚ್.ಆರ್. ನಾಯಕ್, ಕಾಫಿ ಮಂಡಳಿ ಉಪ ನಿರ್ದೇಶಕರಾದ ಚಂದ್ರಶೇಖರ್, ಡಿಯುಡಿಸಿ ಯೋಜನಾ ನಿರ್ದೇಶಕರಾದ ಬಸಪ್ಪ, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಾದ ಲಿಂಗರಾಜ ದೊಡ್ಡಮನಿ, ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರಾದ ಅನನ್ಯ ವಾಸುದೇವ್ ಇತರರು ಮುಂಗಾರು ಸಂಬಂಧ ಕೈಗೊಳ್ಳಲಾಗಿರುವ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.

ಭೂ ದಾಖಲೆಗಳ ಉಪನಿರ್ದೇಶಕರಾದ ಪಿ.ಶ್ರೀನಿವಾಸ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಪುಟ್ಟರಾಜು, ಜಿಲ್ಲಾ ಸರ್ಜನ್ ಡಾ.ನಂಜುಂಡಯ್ಯ, ಡಾ.ರೂಪೇಶ್ ಗೋಪಾಲ್, ಡಾ.ಸತೀಶ್, ಕಾರ್ಮಿಕ ಇಲಾಖೆ ಅಧಿಕಾರಿ ಎಂ.ಎಂ.ಯತ್ನಟ್ಟಿ, ಪೌರಾಯುಕ್ತರಾದ ವಿಜಯ್, ಪಿಎಂಜಿಎಸ್‍ವೈ ಎಂಜಿನಿಯರ್ ಪ್ರಭು, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾದ ಸಚಿನ್, ತಹಶೀಲ್ದಾರರಾದ ಎಸ್.ಎನ್.ನರಗುಂದ, ಕಿರಣ್ ಗೌರಯ್ಯ, ಪ್ರಶಾಂತ್, ಪ್ರಕಾಶ್, ತಾ.ಪಂ.ಇಒಗಳಾದ ಅಪ್ಪಣ್ಣ, ಜಯಣ್ಣ ಇತರರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು