News Karnataka Kannada
Wednesday, May 08 2024
ಮಡಿಕೇರಿ

ಕೋವಿಡ್ ಲಸಿಕೆ ನೀಡಿಕೆಯಲ್ಲಿ ಕೊಡಗು ಜಿಲ್ಲೆ ರಾಜ್ಯದಲ್ಲೇ ಪ್ರಥಮ‌ ಸ್ಥಾನ

Vaccine 17072021
Photo Credit :

ಮಡಿಕೇರಿ: ಕೋವಿಡ್ ವಿರುದ್ಧದ ಲಸಿಕೆ ನೀಡಿಕೆಯಲ್ಲಿ ಕೊಡಗು ಜಿಲ್ಲೆ ರಾಜ್ಯದಲ್ಲೇ ಪ್ರಥಮ‌ ಸ್ಥಾನದಲ್ಲಿದ್ದು, ಶೀಘ್ರದಲ್ಲೇ‌ ಶೇ.100ರಷ್ಟು ಸಾಧನೆ ಮಾಡಲಾಗುವುದು ಎಂದು ಶಾಸಕತ್ರಯರಾದ ಎಂ.ಪಿ.ಅಪ್ಪಚ್ಚುರಂಜನ್, ಕೆ.ಜಿ.ಬೋಪಯ್ಯ ಹಾಗೂ ಎಂ.ಪಿ.ಸುನಿಲ್ ಸುಬ್ರಮಣಿ ತಿಳಿಸಿದರು.

ನಗರದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರುಗಳು, ವಿಪಕ್ಷಗಳ ಅಪಪ್ರಚಾರದ ನಡುವೆಯೂ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ದಿಟ್ಟ ನಿಲುವು, ಬದ್ಧತೆಯ ಕಾರಣದಿಂದ ದೇಶದಲ್ಲಿ 100ಕೋಟಿ ಕೋವಿಡ್ ಲಸಿಕೆ ನೀಡಲು ಸಾಧ್ಯವಾಗಿದ್ದು, ಲಸಿಕೆ ಸಂಶೋಧನೆಗೆ ಶ್ರಮಿಸಿದ ವಿಜ್ಞಾನಿಗಳು,ಲಸಿಕೆ ನೀಡಲು ಅವಿರತವಾಗಿ ಶ್ರಮಿಸಿದ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು, ಆಶಾ, ಅಂಗನವಾಡಿ ಕಾರ್ಯಕರ್ತರು ಮತ್ತು ಲಸಿಕೆ ಪಡೆದು ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಹೇಳಿದರು.

ಕೊಡಗು ಜಿಲ್ಲೆಯಲ್ಲೂ ಕೆಲವು ವರ್ಗದ ಜನರಿಗೆ ಲಸಿಕೆ‌ ನೀಡುವುದು ಸವಾಲಿನ ಕೆಲಸವಾಗಿತ್ತು. ಆದರೆ ಆರೋಗ್ಯ, ಆಶಾ, ಅಂಗನವಾಡಿ ಕಾರ್ಯಕರ್ತರು, ಪಂಚಾಯತ್ ಮಟ್ಟದ ಟಾಸ್ಕ್ ಫೋರ್ಸ್ ಸಹಕಾರದಿಂದ ಆ ವರ್ಗದವರ ಮನವೊಲಿಸಿ ಲಸಿಕೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದು, ಇನ್ನು ಕೇವಲ 30ಸಾವಿರದಷ್ಟು ಮಂದಿಗೆ ಲಸಿಕೆ ನೀಡಲು ಬಾಕಿ ಇದೆ. ಇದನ್ನು ಆದಷ್ಟು ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದಲ್ಲದೆ, ಜಿಲ್ಲೆಯಲ್ಲಿ ಸಣ್ಣ ಮಕ್ಕಳಿಗೂ ಲಸಿಕೆ ಕೊಡಿಸಲು ತಯಾರಿ ನಡೆಸಲಾಗುತ್ತಿದೆ ಎಂದರು.

ಕೋವಿಡ್ ಸಾಂಕ್ರಮಿಕದ ಸಂದರ್ಭದಲ್ಲಿ ಬಿಜೆಪಿ, ಸಂಘಪರಿವಾರದ ಕಾರ್ಯಕರ್ತರು ಕೂಡಾ ಮುಂಚೂಣಿ ಕಾರ್ಯಕರ್ತರಾಗಿ ಕಾರ್ಯ ನಿರ್ವಹಿಸಿದ್ದು, ವಿಶೇಷವಾಗಿ ಕಿಟ್ ವಿತರಣೆ, ಕೋವಿಡ್ ನಿಂದ ಮೃತಪಟ್ಟವರ ಶವಸಂಸ್ಕಾರ ಮುಂತಾದ ಕೆಲಸಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ಹಾಜರಿದ್ದ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿ, ಅ.21ಬೆಳಗ್ಗೆ 10 ರ ವೇಳೆಗೆ ದೇಶದಲ್ಲಿ 100 ಕೋಟಿ 15,714 ಜನರಿಗೆ ಲಸಿಕೆ ನೀಡಲಾಗಿದ್ದು, ಈ ಪೈಕಿ 70.83 ಕೋಟಿ ಜನರಿಗೆ ಮೊದಲನೇ ಡೋಸ್ ಲಸಿಕೆ ನೀಡಿದ್ದರೆ, 29.17 ಕೋಟಿ ಜನರಿಗೆ ಎರಡೂ ಡೋಸ್ ಲಸಿಕೆ ಕೊಡಲಾಗಿದೆ ಎಂದು ಹೇಳಿದರು.

ಕೋವಿಡ್ ಲಸಿಕೆ ಸಂಶೋಧನೆಗೆ 2020ರ ಏಪ್ರಿಲ್ ನಲ್ಲೇ ಪ್ರಯತ್ನ ನಡೆಯಿತು. ಕೇಂದ್ರದ ನಿರಂತರ ಪ್ರೋತ್ಸಾಹ ಮತ್ತು ವಿಜ್ಞಾನಿಗಳ ಪರಿಶ್ರಮದ ಫಲವಾಗಿ ಲಸಿಕೆ ಸಂಶೋಧನೆ ಸಾಧ್ಯವಾಗಿ 2021ರ ಜನವರಿ 16 ರಂದು ಪ್ರಧಾನಿಯವರು ಲಸಿಕೆ ಬಿಡುಗಡೆ ಮಾಡಿದರು. ಹಿಂದೆ ವಿವಿಧ ಮಹಾ ಮಾರಿಗಳು ಬಂದಾಗ ಭಾರತ ವಿದೇಶದ ಲಸಿಕೆಗಳನ್ನು ಕಾಯುವಂತಾಗಿದ್ದರೆ, ಈ ಬಾರಿ ಭಾರತವೇ ಇತರ ದೇಶಗಳಿಗೆ ಲಸಿಕೆ ಒದಗಿಸುವಷ್ಟು ಶಕ್ತವಾಗಿದೆ ಎಂದು ಅವರು ಹೆಮ್ಮೆ ವ್ಯಕ್ತಪಡಿಸಿದರು.

ದೇಶದಲ್ಲಿ ವಿರೋಧ ಪಕ್ಷವಾದ ಕಾಂಗ್ರೆಸ್‌ನ ನಿರಂತರ ಅಪಪ್ರಚಾರ ಮತ್ತು ಅಸಹಕಾರದ ನಡುವೆಯೂ ಈ ಸಾಧನೆ ಮಾಡಲಾಗಿದ್ದು, ಈ ಪೈಕಿ ಶೇ.94 ಲಸಿಕೆ ನೀಡಿಕೆಯು ಕೇವಲ ಸರಕಾರಿ ಸ್ವಾಮ್ಯದ ಸಂಸ್ಥೆಗಳಿಂದ ನಡೆದಿದ್ದು, ಶೇ 6ರಷ್ಟು ಮಾತ್ರ ಖಾಸಗಿಯವರಿಂದ ನೀಡಲಾಗಿದೆ. ಜಗತ್ತಿನ 95ಕ್ಕೂ ಹೆಚ್ಚು ದೇಶಗಳು ಭಾರತದಿಂದ ಕೋವಿಡ್ ಲಸಿಕೆಗಳನ್ನು ಪಡೆಯುತ್ತಿವೆ. ಅದಲ್ಲದೆ ಶ್ರೀಮಂತ ರಾಷ್ಟ್ರಗಳನ್ನೂ ಹಿಂದಿಕ್ಕಿ ಭಾರತ ಪ್ರತಿಯೊಬ್ಬರಿಗೂ ಉಚಿತವಾಗಿ ಲಸಿಕೆ ಒದಗಿಸಿದೆ ಎಂದು ವಿವರಿಸಿದರು.

ಮನೆಮನೆ ಭೇಟಿ: ರಾಷ್ಟ್ರದ ಮುಂದುವರಿದ ರಾಷ್ಟ್ರಗಳಿಗೆ ಹೋಲಿಸಿದರೆ, ಭಾರತದಲ್ಲಿ ಕೋವಿಡ್ ಹೆ ಬಲಿಯಾದವರ ಸಂಖ್ಯೆಯೂ ಕಡಿಮೆಯಿದೆ ಎಂದು ಹೇಳಿದ ಅವರು,ಕೇಂದ್ರ ಸರಕಾರವು ರಾಜ್ಯಗಳ ಜೊತೆ ನಿರಂತರ ಪತ್ರ ವ್ಯವಹಾರ ನಡೆಸುತ್ತಿದ್ದು, ಮನೆ ಮನೆ ಭೇಟಿ ಮೂಲಕ ಮೊದಲನೇ ಲಸಿಕೆ ಪಡೆಯದವರನ್ನು ಹಾಗೂ ಎರಡನೇ ಲಸಿಕೆ ಪಡೆಯಯುವವರನ್ನು ಗುರುತಿಸಲು ತಿಳಿಸಿದೆ ಎಂದರು.

ಅಕ್ಟೋಬರ್ 14ರ ವೇಳೆಗೆ ಒಟ್ಟು 98.68 ಕೋಟಿ ಡೋಸ್ ಲಸಿಕೆ ಪೂರೈಸಿದ್ದು, 8.34 ಕೋಟಿ ರಾಜ್ಯಗಳಲ್ಲಿ ದಾಸ್ತಾನಿದೆ. ಕೋವಿಶೀಲ್ಡ್, ಕೋವ್ಯಾಕ್ಸಿನ್ ಮತ್ತು ಇತರ ಲಸಿಕೆಗಳಿಗಾಗಿ ಕೇಂದ್ರ ಸರಕಾರ 34,515 ಕೋಟಿ ವೆಚ್ಚ ಮಾಡಿದ್ದು, ಈ ಪೈಕಿ 1392 ಕೋಟಿಯನ್ನು ಪ್ರಧಾನ ಮಂತ್ರಿ ಫಂಡ್‌ನಿಂದ ಭರಿಸಲಾಗಿದೆ ಎಂದು ನುಡಿದರು. ಗೋಷ್ಠಿಯಲ್ಲಿ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಬಿ.ಬಿ.ಭಾರತೀಶ್, ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು