ಮಡಿಕೇರಿ: ಮಡಿಕೇರಿ ನಗರದ ನಾಲ್ಕು ಶಕ್ತಿದೇವತೆಗಳಲ್ಲಿ ಒಂದಾಗಿರುವ ಇಂದಿರಾನಗರದ ಕುಂದುರುಮೊಟ್ಟೆ ಶ್ರೀ ಮಾರಿಯಮ್ಮ ದೇವಾಲಯದ 132ನೇ ವಾರ್ಷಿಕೋತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು.
ವಾರ್ಷಿಕೋತ್ಸವದ ಪ್ರಯುಕ್ತ ದೇವಾಲಯದಲ್ಲಿ ಮೂರು ದಿನಗಳಕಾಲ ವಿವಿಧ ಪೂಜಾಕೈಂಕರ್ಯಗಳು ನೆರವೇರಿದವು. ನಗರದ ಮುಖ್ಯ ಬೀದಿಗಳಲ್ಲಿ ದೇವಿಯ ಮೆರವಣಿಗೆ ನಡೆಯಿತು.
ಮನೆ ಮನೆಯಿಂದ ದೇವಾಲಯಕ್ಕೆ ಪೂಜೆಯನ್ನು ತಂದೊಪ್ಪಿಸಲಾಯಿತು. ಅಲ್ಲದೆ ಮನೆ – ಮನೆಯಿಂದ ದೇವಾಲಯಕ್ಕೆ ಆರತಿ ತಂದು ದೇವಿಗೆ ಮಹಾ ಮಂಗಳಾರತಿ ನೆರವೇರಿತು.
ನಂತರ ಹೂವಿನ ವರ ಬೇಡುವುದು ಮತ್ತು ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಿತು. ಶ್ರೀ ದೇವಿಗೆ ಭಕ್ತಾಧಿಗಳು ಹರಕೆ ಮತ್ತು ಕಾಣಿಕೆ ಒಪ್ಪಿಸಿಸಿದರು. ನಂತರ ನೆರೆದಿದ್ದ ಭಕ್ತಾಧಿಗಳಿಗೆ ಅನ್ನದಾನ ನಡೆಯಿತು.
ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣದಿಂದ ದೇವಿಗೆ ಹರಕೆ ಒಪ್ಪಿಸಲು, ಪೂಜೆ ಸಲ್ಲಿಸಲು ಸಾಧ್ಯವಾಗಿರಲಿಲ್ಲ. ಈ ಬಾರಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು.