News Karnataka Kannada
Monday, April 22 2024
Cricket
ಮೈಸೂರು

ಚಾಮುಂಡಿಬೆಟ್ಟ ಪ್ಲಾಸ್ಟಿಕ್ ಮುಕ್ತ ಪ್ರದೇಶವಾಗಲಿ: ನ್ಯಾಯಮೂರ್ತಿ ಸುಭಾಷ್

Let Chamundi Hill be a plastic-free area: Justice Subhash
Photo Credit : By Author

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲು ಎಲ್ಲಾ ಅಗತ್ಯವಾದ ಕ್ರಮಗಳನ್ನು ಕೈಗೊಂಡು, ದಸರಾ ಪ್ರಾರಂಭವಾಗುವ ಮುಂಚೆ ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ಪ್ರದೇಶವಾಗಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಮುಖ್ಯಸ್ಥ ಹಾಗೂ ನ್ಯಾಯಮೂರ್ತಿ ಸುಭಾಷ್ ತಿಳಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕಸ ವಿಲೇವಾರಿ ಕುರಿತು ಹಮ್ಮಿಕೊಂಡಿದ್ದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಂಧ್ರಕ್ಕೆ ತಿರುಪತಿ ಹೇಗೆ ಪ್ರಮುಖ, ಕರ್ನಾಟಕದಲ್ಲಿ ಅಷ್ಟೇ ಪ್ರಮುಖ ಚಾಮುಂಡಿ ಬೆಟ್ಟ. ಪರಿಸರ ಸಂರಕ್ಷಿಸುವಲ್ಲಿ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು. ಚಾಮುಂಡಿ ಬೆಟ್ಟಕ್ಕೆ ಪ್ರವೇಶಿಸುವ ಪ್ರದೇಶದಲ್ಲಿಯೇ ಪ್ಲಾಸ್ಟಿಕ್ ಕೊಂಡ್ಯೊಯ್ಯದಂತೆ ಪರಿಶೀಲಿಸಬೇಕು. ಪ್ರತಿ ಸರ್ಕಾರಿ ಕಚೇರಿಗಳಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲ್‌ಗಳ ಬಳಕೆ ನಿಷೇಧಿಸಿ 20 ಲೀಟರ್ ಕ್ಯಾನ್ ನೀರನ್ನು ಪೇಪರ್ ಕಪ್‌ನಲ್ಲಿ ಬಳಸಬೇಕು ಎಂದರು.

ಚಾಮುಂಡಿಬೆಟ್ಟ ಪ್ಲಾಸ್ಟಿಕ್ ಬೆಟ್ಟ ಮುಕ್ತ ಮಾಡಲು ಅಲ್ಲಿನ ಗ್ರಾಮ ಪಂಚಾಯಿತಿ ಹಾಗೂ ದೇವಸ್ಧಾನ ಮಂಡಳಿ ಸೇರಿ ಅಂಗಡಿ ಮಳಿಗೆಗಳಲ್ಲಿ ಪ್ಲಾಸ್ಟಿಕ್ ಬಳಸದಂತೆ ಕ್ರಮವಹಿಸಬೇಕು. ಬಳಸಿದರೆ ದಂಡ ವಿಧಿಸುವ ಕೆಲಸ ಆಗಬೇಕು. ಕಾನೂನು ಪಾಲನೆ ಮಾಡದ್ದರೆ ಲೈಸನ್ಸ್ ರದ್ದು ಪಡಿಸಿ, ದೇವಸ್ಧಾನದ ಪ್ರವೇಶದಲ್ಲಿ ಪ್ಲಾಸ್ಟಿಕ್ ತರದಂತೆ ಪರಿಶೀಲಿಸಬೇಕು ಎಂದರು.

ಎಲ್ಲಾ ಗ್ರಾಮ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಕಸ ವಿಲೇವಾರಿ ಸರಿಯಾಗಿ ನಿರ್ವಹಣೆ ಮಾಡಬೇಕು. ಹಸಿ ಕಸವನ್ನು ಘನ ತಾಜ್ಯ ವಿಲೇವಾರಿ ಘಟಕ ಗಳಲ್ಲಿ ಗೊಬ್ಬರವಾಗಿ ತಯಾರಿಸಿ ಮರು ಬಳಕೆ ಮಾಡಬೇಕು. ರಸ್ತೆಗಳನ್ನು ಯಾವುದಾದರೂ ಉದ್ದೇಶಕ್ಕೆ ಅನುಮತಿ ಪಡೆದು ಆಗೆದರೆ, ಅವರೇ ರಸ್ತೆಯನ್ನು ದುರಸ್ಥಿ ಮಾಡಬೇಕು. ಮದುವೆ ಹಾಗೂ ಇತರೆ ಮೆರವಣೆಗೆ ಅಥವಾ 100ಕ್ಕಿಂತ ಹೆಚ್ಚಿನ ಜನ ಸೇರುವ ಸಭೆ ಸಮಾರಂಭಗಳಲ್ಲಿ ಆಗುವ ಕಸ ನಿರ್ವಹಣೆಗೆ ಶುಲ್ಕ ವಿಧಿಸಬೇಕು. ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕಸವನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಕೆಮಿಕಲ್ ಹಾಗೂ ಬಯೋಮೆಡಿಕಲ್ ವೆಸ್ಟ್‌ನ್ನು ಸರಿಯಾಗಿ ಏಜೆನ್ಸಿಗಳು ಸಂಗ್ರಹಿಸಿ ನಿರ್ವಹಣೆ ಮಾಡಬೇಕು ಎಂದು ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾತನಾಡಿ, ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧಿಸಿದ್ದು, ಬಳಕೆದಾರರಿಗೆ ದಂಡ ವಿಧಿಸಲಾಗುತ್ತಿದೆ. ಆಷಾಢ ಮಾಸದಲ್ಲಿ ಚಾಮುಂಡಿ ಬೆಟ್ಟಕ್ಕೆ ಹೆಚ್ಚಿನ ಭಕ್ತಾದಿಗಳು ಭೇಟಿ ನೀಡುತ್ತಿದ್ದು, ಪ್ಲಾಸ್ಟಿಕ್ ಮುಕ್ತ ಪ್ರದೇಶ ಎಂದು ಘೋಷಿಸಲಾಗಿದೆ. ಚಾಮುಂಡಿ ಬೆಟ್ಟಕ್ಕೆ ಲಲಿತ ಮಹಲ್ ಪ್ಯಾಲೇಸ್ ಬಳಿಯಿಂದ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ವಿಶೇಷ ೫ ತಂಡಗಳನ್ನು ರಚಿಸಿ ಪ್ಲಾಸ್ಟಿಕ್‌ನ್ನು ಚಾಮುಂಡಿ ಬೆಟ್ಟಕ್ಕೆ ಏಕ ಬಳಕೆಯ ಪ್ಲಾಸ್ಟಿಕ್ ತೆಗೆದುಕೊಂಡು ಹೋಗದಂತೆ ತಡೆಯಲಾಗಿದೆ. ಸಭೆ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಬಾಟಲ್ ನೀರನ್ನು ಬಳಸದೆ ಪೇಪರ್ ಅಥವಾ ಗಾಜಿನ ಲೋಟದಲ್ಲಿ ನೀರನ್ನು ನೀಡಲಾಗುತ್ತಿದೆ ಎಂದರು.

ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಾಯತ್ರಿ, ನಗರ ಪೊಲೀಸ್ ಆಯುಕ್ತ ರಮೇಶ್.ಬಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿನೇಶ್.ಬಿ.ಜಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು