News Karnataka Kannada
Monday, April 29 2024
ಹಾಸನ

ಹಾಸನ: ಮುನಿಸು ಮರೆತ ವಾಲೆ ಮಂಜಣ್ಣ, ತೆನೆ ಹೊತ್ತರೆ ಯಾರಿಗೆ ಲಾಭ ಯಾರಿಗೆ ನಷ್ಟ 

Vale Manjanna, who has forgotten to be angry, who will gain and who will lose if he carries the coconut 
Photo Credit : News Kannada

ಹಾಸನ: ಜಿಲ್ಲಾ ರಾಜಕಾರಣದಲ್ಲಿ ಅದೇನೋ ಒಂದು ರೀತಿ ಭಾವನಾತೀತ ನಿರೀಕ್ಷೆಯ ಕರಿನೆರಳು ಕವಿದುಕೊಂಡಿರೋ ತರ ಕಾಣುತ್ತಾ ಇದೆ. ಸಧ್ಯದದ ಮಟ್ಟಿಗೆ ಯಾವುದು ಸರಿ, ಯಾವುದು ತಪ್ಪು ಎಂಬ ನಿರ್ಧಾರಕ್ಕೆ ಬರಲಾರದ ಮತದಾರ ಇನ್ನಿಲ್ಲದಂತೆ ಹೊಯ್ದಾಡ್ತಾ ಇದ್ದಾನೆ.

ಹಾಸನದಲ್ಲಿ ಭವಾನಕ್ಕನಿಗೆ ಟಿಕೆಟ್ ಅನ್ನೋ ಚರ್ಚೆ ಮುನ್ನಲೆಯಲ್ಲಿರೋ ಬೆನ್ನಲ್ಲೇ ಅರಕಲಗೂಡಿನಲ್ಲಿ ನಮ್ಮ ವಾಲೇ ಮಂಜಣ್ಣ ಜೆಡಿಎಸ್ ಸೇರ್ತಾ ಇದಾರೆ ಅನ್ನೋ ಬಹು ದೊಡ್ಡ ಸುದ್ದಿ. ಸಧ್ಯಕ್ಕೆ ವಿಶ್ಲೇಷಕರ ಚಾವಡಿಯಲ್ಲಿ ಈ ವಿಷಯದ ಬಗ್ಗೆ ಚರ್ಚೆಯೋ ಚರ್ಚೆ. ಆದರೆ ಯಾವ ಚರ್ಚೆ ಕೂಡ ಸ್ಪಷ್ಟವಾದ ರೂಪ ಪಡೆದುಕೊಳ್ಳುತ್ತಿಲ್ಲ. ಜಿಲ್ಲಾ ರಾಜಕಾರಣದಲ್ಲಿ ರಣಪಟ್ಟುಗಳಿಗೆ ಹೆಸರುವಾಸಿಯಾಗಿರೋ ಮಾಜಿ ಸಚಿವ, ಹಾಲಿ ಶಾಸಕ ಯಾವಾಗ ಯಾವ ರೀತಿಯ ಪಟ್ಟು ಹಾಕ್ತಾರೋ.?, ಜೆಡಿಎಸ್ ವರಿಷ್ಟ ಹೆಚ್.ಡಿ ದೇವೇಗೌಡರ ದಾಳಗಳು ಎಲ್ಲೆಲ್ಲಿ ಹೇಗೇಗೆ ಉರುಳುತ್ತವೆಯೋ ಅವರಿಬ್ಬರನ್ನು ಬಿಟ್ಟರೆ ಬೇರೆ ಯಾರಿಂದಲೂ ಊಹೆ ಕೂಡ ಮಾಡೋಕೆ ಅಸಾಧ್ಯ. ಹೀಗಾಗಿ ಇಲ್ಲಿ ಸಧ್ಯದ ಮಟ್ಟಿಗೆ ಕುತೂಹಲವೊಂದನ್ನು ಬಿಟ್ಟರೆ ಬೇರೆ ಯಾವುದಕ್ಕೂ ಅವಕಾಶ ಇಲ್ಲ.

ವಾಲೆ ಮಂಜಣ್ಣ ಅನ್ನೋದು ಬರೀ ಜಿಲ್ಲಾ ರಾಜಕಾರಣ ಮಾತ್ರ ಅಲ್ಲಾ, ವಿವಿದ ಕಾರಣಗಳಿಂದ ರಾಜ್ಯವ್ಯಾಪಿ ಪ್ರತಿಧ್ವನಿಸಿರೋ ಹೆಸರು. ರಾಜಧಾನಿ ಬೆಂಗಳೂರಿನಲ್ಲಿ ತನ್ನದೇ ಪ್ರಭಾವಿ ವಲಯ ಹೊಂದಿದ್ದ ಅವರು ಆ ಮೂಲಕವೇ ಮನೆ ಮಾತಾಗಿದ್ದು ಅನ್ನೋದು ಇಲ್ಲಿ ಗಮನಾರ್ಹ. ನೀರಾವರಿ ತಜ್ಞ ಎಂದೇ ಖ್ಯಾತರಾಗಿದ್ದ ಹೆಚ್.ಎನ್ ನಂಜೇಗೌಡರ ಸಮೀಪದ ಸಂಬಂದಿಯಾಗಿದ್ದರೂ ಕೂಡ ರಾಜಕೀಯ ಪ್ರವೇಶಕ್ಕೆ ಎಂದೂ ಕೂಡ ಅವರ ಹೆಸರನ್ನು ಬಳಸಿಕೊಳ್ಳದ ಸ್ವಾಭಿಮಾನಿ. ತನ್ನ ರಾಜಕೀಯ ಜೀವನದ ಮೊದಲ ದಿನದಿಂದಲೂ ಹೆಚ್.ಡಿ ದೇವೇಗೌಡರ ಕುಟುಂಬವನ್ನ ವಿರೋಧಿಸುತ್ತಾ ಬಂದಿದ್ದ ಎ. ಮಂಜು ಇದೇ ಕಾರಣಕ್ಕೆ ಜೆಡಿಎಸ್ ವಿರೋಧಿಗಳಿಗೆ ಆಪ್ತರಾಗಿದ್ದರು. ಆದರೂ ಕೂಡ ಅದೊಮ್ಮೆ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರಿಗೆ ರಾಜಕೀಯ ಪುನರ್ಜನ್ಮ ನೀಡೋಕೆ ಮಾಜಿ ಸಚಿವ ದಿವಂಗತ ಕೆ.ಹೆಚ್. ಹನುಮೇಗೌಡರ ಜೊತೆ ಶ್ರಮಿಸಿದ್ದನ್ನ ಹಾಸನ ಜಿಲ್ಲೆಯ ಜನತೆ ಎಂದೂ ಮರೆಯುವಂತಿಲ್ಲ. ರಾಜಕೀಯದಲ್ಲಿ ಯಾರೂ ಮಿತ್ರರಲ್ಲಾ.., ಯಾರೂ ಶತ್ರುಗಳೂ ಅಲ್ಲಾ ಅನ್ನೋ ಮಾತಿಗೆ ತಕ್ಕಂತೆ ಆನಂತರದ ದಿನಗಳಲ್ಲಿ ಪುನಃ ಎ.ಮಂಜು ಮಾಜಿ ಪ್ರಧಾನಿಗಳ ಕುಟುಂಬ ವಿರೋಧಿಯಾಗಿಯೇ ಮುಂದುವರೆದರು. ಅವರ ಪಕ್ಷಾಂತರ ಪರ್ವವದಲ್ಲೂ ಕೂಡ ಬಿ.ಜೆ.ಪಿ ಹಾಗೂ ಕಾಂಗ್ರೆಸ್ ನಿಂದ ಕಣಕ್ಕಿಳಿದು ದೇವೇಗೌಡರ ಕುಟುಂಬ ವಿರುದ್ದ ಸಮರ ಸಾರುತ್ತಲೇ ಬಂದಿದ್ದು ಅವರ ವಿಶೇಷ.

ಗರ್ವದ ನಡೆ, ಗತ್ತು-ಗಾಂಭೀರ್ಯ, ಯಾವುದಕ್ಕೂ ಜಗ್ಗದ ವಾಲೇ ಮಂಜಣ್ಣನ ವ್ಯಕ್ತಿತ್ವವೇ ಅವರನ್ನ ರಾಜಕೀಯವಾಗಿ ಇಲ್ಲಿಯವರೆಗೆ ಕರೆದುಕೊಂಡು ಬಂದಿದೆ. ಗಡುಸು ಧ್ವನಿ, ಒರಟು ಮಾತಿನ ಮಂಜಣ್ಣ ಸಿಕ್ಕಾಪಟ್ಟೆ ಧೈರ್ಯವಂತ ಅಂತಾನೇ ಬಹಳಷ್ಟು ಮಂದಿ ಅವರನ್ನ ಹಿಂಬಾಲಿಸುತ್ತಾ ಇದ್ದಾರೆ ಅನ್ನೋದಂತೂ ದಿಟ. ಕಾಂಗ್ರೆಸ್ ನಿಂದ ಪಶು ಸಂಗೋಪನಾ ಸಚಿವರಾದ ನಂತರ ಅವರು ಮತ್ತಷ್ಟು ಪ್ರಭಾವಿಯಾಗಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ವಿರುದ್ದ ಬಿಜೆಪಿ ಯಿಂದ ಸ್ಪರ್ಧೆ ಮಾಡಿ ಸೋಲನ್ನನುಭವಿಸಿದ ನಂತರ ಅವರ ರಾಜಕೀಯದ ಪತನ ಕೂಡ ಶುರುವಾಯಿತು.

ಅಧಿಕಾರಕ್ಕಾಗಿ ಇಷ್ಟ ಬಂದ ಪಕ್ಷಕ್ಕೆ ಬಾಗಿಲು ತಟ್ಟುವ ಅವರ ಖಯಾಲಿಯಿಂದ ಬೇಸತ್ತ ಕಾಂಗ್ರೆಸ್ ಹೈ ಕಮಾಂಡ್ ಶಾಶ್ವತವಾಗಿ ಅವರಿಗೆ ಬಾಗಿಲು ಮುಚ್ಚಿದೆ. ಇತ್ತ ಸ್ವ ಕ್ಷೇತ್ರ ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ಬೆಂಬಲವಿಲ್ಲದ ಎ.ಮಂಜು ಪಕ್ಷೇತರನೋ ಅಥವಾ ಪಕ್ಷದ ಅಭ್ಯಡರ್ಥಿಯೋ..? ಅನ್ನೋ ಜಿಜ್ಞಾಸೆಗೆ ಸಿಲುಕಿದ್ದಾರೆ.

ವಾಲೇ ಮಂಜಣ್ಣರಿಗೆ ವಯಸ್ಸಾಗಿದೆ. ಇನ್ನು ಮಗನನ್ನು ಚುನಾವಣಾ ಕಣಕ್ಕೆ ಇಳಿಸಿ, ಗೆಲ್ಲಿಸಿ ಜನಸೇವೆ ಮಾಡಿದ್ರೆ ಸಾಕು ಅನ್ನೋ ರೀತಿನೂ ಇಲ್ಲಾ. ಮರ ? ಮುಪ್ಪಾದರೇನು ಹುಳಿ ಮುಪ್ಪಲ್ಲಾ..? ಅನ್ನೋ ಗಾದೇ ಮಾತಿನ ಹಾಗೆ ಅವರಲ್ಲಿ ಇರೋ ರಾಜಕೀಯದ ತಾಕತ್ತು ದುಪ್ಪಟ್ಟಾಗಿದೆಯೇ ಹೊರತು ಮುಕ್ಕಾಗಿಲ್ಲ. ಹಾಗಾಗಿಯೇ ಅವರು ಮತ್ತೊಮ್ಮೆ ಅಖಾಡಕ್ಕೆ ಇಳಿಯೋ ಸಿದ್ದತೆಯಲ್ಲಿದ್ದರು. ಆದರೆ ಬೆಂಬಲದ ದಿಕ್ಕು ಕಾಣದಂತಿದ್ದ ಅವರಿಗೆ ಅವರ ರಾಜಕೀಯ ಜೀವನದ ಶತ್ರುಗಳೇ ಮಿತ್ರರಾಗೋ ಕಾಲ ಸನ್ನಿಹಿತ ಆಗ್ತಾ ಇದಾರೆ. ಹಳೆ ವೈಷಮ್ಯವನ್ನ ಮರೆತಿರೋ ಜೆಡಿಎಸ್ ಪಾಳಯ ಈಗ ವಾಲೇ ಮಂಜಣ್ಣರಿಗೆ ರೆಡ್ ಕಾರ್ಪೆಟ್ ಹಾಸಿರೋದು ಎಲ್ಲರ ಕಣ್ಣರಳಿಸೋ ಹಾಗೆ ಮಾಡ್ತಾ ಇದೆ. ಇದೇ ಕಾರಣಕ್ಕೆ ಗೊಂದಲಕ್ಕೆ ಸಿಲುಕಿರೋ ಹಾಸನ ಜಿಲ್ಲೆಯ ಮತದಾರರು ಮುಂದೇನಾಗಬಹುದು ಅಂತಾ ಕುತೂಹಲದಿಂದ ಕಾಯುತ್ತಾ ಇದ್ದಾರೆ.

ಚರ್ಚೆಯೋ ಚರ್ಚೆ

ಭವಾನಿ ಮೇಡಮ್ ನಿಂತ್ರೆ ಸ್ವರೂಪ್ ಗತಿ ಏನು..? ಸ್ವರೂಪ್ ಬೆಂಬಲಿಗರು ಮೇಡಮ್ ಗೆ ಸಫೋರ್ಟ್ ಮಾಡ್ತಾರಾ..?. ಭವಾನಿ ಮೇಡಮ್ ನಿಂತ್ರೆ ಪ್ರೀತಮ್ ಗೌಡ್ರಿಗೆ ಪ್ಲಸ್ಸೋ..ಮೈನಸ್ಸೋ..?. ದುಡ್ಡಿಲ್ಲಾ ಅಂದ್ರೂ ಬೆಂಬಲಿಗರ ಸಪೋರ್ಟ್‌ನಿಂದ ಸ್ವರೂಪ್ ಗೌಡ್ರು ಗೆದ್ದೇ ಗೆಲ್ತಾರಾ..? ಅಫೀಶಿಯಲ್ಸ್ ಗೆಲ್ಲಾ ಯಾರೋ ಆಗ್ಲೇ ಟಿಫನ್ ಬಾಕ್ಸ್ ಹಂಚಿದ್ದಾರಂತೇ..!!, ಮನೆ ಮನೆಗೆ ಯಾರೋ ಗಿಪ್ಟ್ ಪ್ಯಾಕ್ ಕಳಿಸ್ತಾ ಇದಾರಂತೇ..!!? ಹೀಗೆ ಹತ್ತು ಹಲವು ಸ್ಪಷ್ಟ ಉತ್ತರವಿಲ್ಲದ ಪ್ರಶ್ನೆಗಳ ಜೊತೆಗೆ ಗೊಂದಲಕ್ಕೆ ಸಿಲುಕಿರುವ ಮತದಾರರ ಎದುರು ದುತ್ತನೆ ನಿಂತಿದ್ದಾರೆ ವಾಲೆ ಮಂಜಣ್ಣ.

ಗೆಲುವಿನ ಲೆಕ್ಕಾಚಾರ

ಸಧ್ಯದ ಮಟ್ಟಿಗಂತೂ ವಾಲೇ ಮಂಜಣ್ಣ ಈ ಬಗ್ಗೆ ಸ್ಪಷ್ಟವಾದ ಪ್ರತಿಕ್ರಿಯೆ ಕೊಡುತ್ತಿಲ್ಲಾ. ಆದರೆ ಅವರ ನಿಲುವು ಮಾತ್ರ ಜೆಡಿಎಸ್ ಸೇರಲಿದ್ದಾರೆ ಎನ್ನುವುದನ್ನ ಸಾರಿ ಸಾರಿ ಹೇಳ್ತಾ ಇದೆ. ಇನ್ನು ಕ್ಷೇತ್ರದ ಮಟ್ಟಿಗೆ ಅತ್ಯಂತ ಪ್ರಭಾವಿಯಾಗಿರೋ ವಾಲೇ ಮಂಜಣ್ಣ ಜೆ.ಡಿಎಸ್ ವಿರುದ್ದ ಮುನಿಸಿಕೊಂಡಿರೋ ಎ.ಟಿ ರಾಮಸ್ವಾಮಿಯವರಿಗೆ ಎಲ್ಲಾ ರೀತಿಯಲ್ಲೂ ಸಮರ್ಥ ಎದುರಾಳಿ. ಜೆಡಿಎಸ್ ಪಕ್ಷ ಒಂದು ವೇಳೆ ಎ.ಟಿ ರಾಮಸ್ವಾಮಿ ಬದಲಿಗೆ ಎ.ಮಂಜುರನ್ನು ಕಣಕ್ಕಿಳಿಸಿದರೆ ಗೆಲುವು ಸುಲಭ ಸಾಧ್ಯ ಅನ್ನೋ ಮಾತಿದೆ. ಇದೇ ಲೆಕ್ಕಾಚಾರದ ಮೇರೆಗೆ ಎ.ಮಂಜುರಿಗೆ ಪಕ್ಷಕ್ಕೆ ಆಹ್ವಾನ ನೀಡಿದ್ದಾರೆ ಅನ್ನೋದು ಎಲ್ಲರ ಅಭಿಪ್ರಾಯ.

ಜೆಡಿಎಸ್ ಸೇರೋದ್ರಿಂದ ಎ. ಮಂಜುಗೆ ಲಾಭನೋ.. ನಷ್ಟನೋ

ರಾಜಕೀಯ ಜೀವನದ ಸಂಧ್ಯಾಕಾಲದಲ್ಲಿ ತಪ್ಪು ನಿರ್ಧಾರ ತೆಗೆದುಕೊಳ್ಳೋ ಮೂಲಕ ನೇಪಥ್ಯಕ್ಕೆ ಸರಿದ ಮುತ್ಸದ್ದಿ ನಾಯಕರಿಗೆ ಹಾಸನದಲ್ಲಿ ಕೊರತೆಯೇನಿಲ್ಲ. ಕಾಂಗ್ರೆಸ್ನ ಹಿರಿಯ ಮುಖಂಡರಾಗಿದ್ದು ಉನ್ನತ ಹುದ್ದೆಗಳನ್ನೆಲ್ಲಾ ಅಲಂಕರಿಸಿದ್ದ ಹೆಚ್.ಸಿ ಶ್ರೀಕಂಠಯ್ಯ ಕೊನೆಗಾಲದಲ್ಲಿ ಬಿಜೆಪಿ ಸೇರಿದರು. ಅವರ ಈ ತಪ್ಪಿನಿಂದಾಗಿ ಅವರ ಹಾಗೂ ಅವರ ಕುಟುಂಬದ ರಾಜಕೀಯ ಜೀವನವೇ ಅಂತ್ಯವಾಗಿದ್ದು ಗಮನಾರ್ಹ. ಅದೇ ರೀತಿ ಕಾಂಗ್ರೆಸ್ ನಲ್ಲಿದ್ದ ಕೆ.ಹೆಚ್ ಹನುಮೇಗೌಡರು ನಂತರ ಬಿಜೆಪಿ ಸೇರಿ ಅಲ್ಲಿಂದ ಅಂತಿಮವಾಗಿ ಬಿಎಸ್?ಪಿ ಯಿಂದ ಸ್ಪರ್ಧಿಸಿ ರಾಜಕೀಯ ಹಾಗೂ ವೈಯುಕ್ತಿಕ ಸೋಲು ಅನುಭವಿಸಿದ್ದರು. ಇದೀಗ ಮಾಜಿ ಸಚಿವ, ದಿಟ್ಟ ಹಾಗೂ ಸಮರ್ಥ ರಾಜಕಾರಣಿ, ಎ. ಮಂಜು ಕೂಡ ಇವರ ಸಾಲನ್ನೇ ಅನುಸರಿಸುತ್ತಾರಾ ಅನ್ನೋ ಪ್ರಶ್ನೆ ರಾಜಕೀಯ ವಲಯವನ್ನ ಕಾಡುತ್ತಿದೆ.

ಹೊಳೆನರಸೀಪುರ ವರ್ಸಸ್ ಅರಕಲಗೂಡು ಶಕ್ತಿ ಕೇಂದ್ರ?

ವಾಲೇ ಮಂಜಣ್ಣ ಎಲ್ಲಾ ವಿಷಯದಲ್ಲೂ ಅಷ್ಟು ಸುಲಭಕ್ಕೆ ಬಗ್ಗುವ ಘಟ ಅಲ್ಲಾ ಅನ್ನೋದು ಎಲ್ಲರಿಗೂ ತಿಳಿದ ವಿಚಾರ. ಇನ್ನು ಜಿಲ್ಲಾ ರಾಜಕಾರಣದಲ್ಲಿ ಜೆಡಿಎಸ್ ವರಿಷ್ಟ ಹೆಚ್.ಡಿ ರೇವಣ್ಣ ಕೂಡ ಅಣುಅಣುವನ್ನೂ ತಮ್ಮ ಮುಷ್ಟಿಯಲ್ಲಿ ಹಿಡಿದಿಡುತ್ತಾರೆ ಅನ್ನೋದು ಅಷ್ಟೇ ಸತ್ಯ. ಇವರಿಬ್ಬರ ಈ ಮನೋಧೋರಣೆಯ ನಡುವೆ ಮುಂದಿನ ದಿನಗಳಲ್ಲಿ ನಾಯಕತ್ವದ ವಿಚಾರಕ್ಕೆ ಅರಕಲಗೂಡು ಹಾಗೂ ಹೊಳೆನರಸೀಪುರ ಕೇಂದ್ರೀಕೃತವಾಗಲಿದೆಯೇ..? ಎ.ಮಂಜು ಅನ್ನೋ ಕಾರಣಕ್ಕೆ ಒಂದಷ್ಟು ಮಂದಿ ಅರಕಲಗೂಡಿಗೆ ಸೀಮಿತರಾದರೆ, ಹೆಚ್.ಡಿ ರೇವಣ್ಣ ಅನ್ನೋ ಕಾರಣಕ್ಕೆ ಮತ್ತೊಂದಷ್ಟು ಜನ ಹೊಳೆನರಸೀಪುರದತ್ತ ಅನ್ನೋ ಪರಿಸ್ಥಿತಿ ನಿರ್ಮಾಣ ಆಗಬಹುದೇ ಅನ್ನೋ ಅನುಮಾನ ಕೂಡ ಶುರುವಾಗಿದೆ. ಇವೆಲ್ಲದಕ್ಕೂ ನಾಯಕರ ಮುಂದಿನ ನಡೆಯಷ್ಟೇ ಉತ್ತರ ನೀಡಬೇಕು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು