News Karnataka Kannada
Thursday, May 09 2024
ಹಾಸನ

ಅಂತರ್ರಾಜ್ಯ ವಾಹನ ಕಳ್ಳರ ಬಂಧನ ; ಒಂದುವರೆ ಕೋಟಿ ರೂ ಮೌಲ್ಯದ 15 ವಾಹನ ವಶ

Theft Hassan
Photo Credit :

ಹಾಸನ: ಜಿಲ್ಲಾ ಪೋಲೀಸರು ಕಾರ್ಯಾಚರಣೆ ನಡೆಸಿ ಆರು ಮಂದಿ ಅಂತರ್ ಜಿಲ್ಲಾ ವಾಹನ ಕಳ್ಳರನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 1.50 ಕೋಟಿ ರೂ. ಮೌಲ್ಯದ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ ಗೌಡ ತಿಳಿಸಿದರು.
ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ ಎಸ್‌ಪಿ ಅವರು ಬಂಧಿತರೆಲ್ಲ 20-25ರ ವಯಸ್ಸಿನ ನಡುವಿನ ಯುವಕರಾಗಿದ್ದು, ಬಂಧಿತರನ್ನು ಶಾಹಿದ್, ಹಿದಾಯತ್, ಬಾಸ್ಕರ್ ಪೂಜಾರಿ, ಅಬ್ದುಲ್ ಕಲಾಂ, ಅಬ್ದುಲ್ ರಹೀಂ, ಖಾಜಾ ಮಹಮದ್ಎಂದು ಗುರುತಿಸಲಾಗಿದೆ ಎಂದರು. ಈ ಎಲ್ಲರೂ ಶಿವಮೊಗ್ಗ ಜಿಲ್ಲೆಯ ಸೊರಬ, ಮಂಗಳೂರು, ಗುಲ್ಬರ್ಗ ಜಿಲ್ಲೆಯರಾಗಿದ್ದಾರೆ. ಈ ಹಿಂದೆ ಎಲ್ಲರೂ ಸಣ್ಣಪುಟ್ಟ ಕಳ್ಳತನ ನಡೆಸಿದ್ದರು.
ಬಂಧಿತರಿಂದ 10 ಅಶೋಕ್ ಲೈಲ್ಯಾಂಡ್‍ನ ದೋಸ್ತ್, ಎರಡು ಲಾರಿ ವಶಪಡಿಸಿಕೊಳ್ಳಲಾಗಿದೆ. ಕೃತ್ಯಕ್ಕೆ ಬಳಸಿದ್ದ ಮಹೀಂದ್ರಾ ಪಿಕ್ ಅಪ್, ಆರ್‍ಎಕ್ಸ್-100 ಬೈಕ್, ಒಂದು ಹೋಂಡಾ ಡಿಯೋ ಬೈಕ್‍ನ್ನು ವಶಕ್ಕೆ ಪಡೆಯಲಾಗಿದೆ.ಶಿವಮೊಗ್ಗ ಜಿಲ್ಲೆಯಲ್ಲಿ ಮೂರು, ಹಾಸನ ಜಿಲ್ಲೆಯಲ್ಲಿ ಎರಡು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ತುಮಕೂರು, ರಾಮನಗರ, ಬೆಂಗಳೂರು ಜಿಲ್ಲೆಗಳಲ್ಲಿ ತಲಾ ಒಂದು ವಾಹನ ಕಳವು ಮಾಡಿದ್ದರು ಎಂದು ಆರ್.ಶ್ರೀನಿವಾಸ್ ಗೌಡ ಮಾಹಿತಿ ನೀಡಿದರು. ಜಿಲ್ಲೆಯ ಹಳೇಬೀಡು ವ್ಯಾಪ್ತಿಯಲ್ಲಿ ವಾಹನ ಕಳ್ಳತನದ ಮೂರು ದೂರುಗಳು ದಾಖಲಾದ ನಂತರ ಪೋಲೀಸರು ತನಿಖೆಯನ್ನು ಚುರುಕುಗೊಳಿಸಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.
ಕೊರೊನಾ ಹಿನ್ನೆಲೆ ಫೈನಾನ್ಸ್ ಪೂರ್ಣ ಪಾವತಿಯಾಗಿಲ್ಲ ಎಂದು ಕಾರಣ ನೀಡಿ ಕದ್ದ ವಾಹನವನ್ನು ಮಾರಾಟ ಮಾಡುತ್ತಿದ್ದ ಖದೀಮರು, ಸುಮಾರು 15ಕ್ಕೂ ಹೆಚ್ಚು ವಾಹನವನ್ನು ಮಾರಾಟಮಾಡಿದ್ದಾರೆ. ಇವರ ಹಿಂದೆ ವಾಹನ ಕದಿಯುವ ಹಾಗೂ ಮಾರಾಟಮಾಡುವ ದೊಡ್ಡ ಜಾಲವೇ ಸಕ್ರೀಯವಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಖದೀಮರು ಗ್ರಾಹಕರನ್ನು ಪುಸಲಾಯಿಸಿ 10 ಲಕ್ಷದ ವಾಹನವನ್ನು ಕೇವಲ 2-3 ಲಕ್ಷಕ್ಕೆ ನೀಡುತ್ತಿದ್ದರು. ಇಷ್ಟು ಕಡಿಮೆ ಮೊತ್ತಕ್ಕೆ ವಾಹನ ಸಿಗಲಿದೆ ಹಾಗೂ ವಾಹನದ ಮೂಲ ದಾಖಲಾತಿಗಳನ್ನು ಕೊರೊನಾ ಹಾವಳಿ ಮುಗಿದ ಬಳಿಕ ಹಾಗೂ ಫೈನಾನ್ಸ್ ಪೂರ್ಣ ಪಾವತಿ ಬಳಿಕ ಸಿಗಲಿದೆ ಎಂದು ನಂಬಿಸಿ ಎಷ್ಟೋ ಮಂದಿಗೆ ಉಂಡೇನಾಮ ಹಾಕಿದ್ದಾರೆ. ಇದೀಗ ವಾಹನಗಳನ್ನು ಖರೀದಿಸಿದ ಗ್ರಾಹಕರಿಂದ ವಶಕ್ಕೆ ಪಡೆದಿದ್ದು, ಕದ್ದ ಮಾಲು ಖರೀದಿಸಿದವರಿಗೆ ಕೈಸುಟ್ಟಿಕೊಂಡಂತಾಗಿದೆ. ಪೊಲೀಸರು ಇದೀಗ ವಶಕ್ಕೆ ಪಡೆದ ಬಹುತೇಕ ವಾಹನಗಳು ಅಶೋಕ್ ಲೇಲ್ಯಾಂಡ್ ಕಂಪನಿಗೆ ಸೇರಿದ್ದಾಗಿದೆ. ಇವುಗಳ ಲಾಕ್ ಮುರಿದು ಕದಿಯುತಿದ್ದ ಖದೀಮರು, ಸೆಕೆಂಡ್‌ ಹ್ಯಾಂಡ್‌ ಮಾರುಕಟ್ಟೆಯಲ್ಲಿ ಈ ಕಂಪನಿ ವಾಹನಕ್ಕೆ ಬೇಡಿಕೆ ಇರುವುದರಿಂದ ಇದನ್ನೇ ಗುರುತಿಸಿ ಕೃತ್ಯ ನಡೆಸುತ್ತಿದ್ದರು ಎಂದು ತನಿಖೆ ವೇಳೆ ಬಹಿರಂಗಗೊಂಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು