ಮೈಸೂರು: ಮೊಬೈಲ್ ನಂಬರ್ ಕೊಡು ಇಲ್ಲಾಂದ್ರೆ ನಿನ್ನ ಗಂಡನ್ನ ಕೊಲೆ ಮಾಡ್ತೀನಿ ಎಂದು ಬೆದರಿಕೆ ಒಡ್ಡಿದ ರೋಮಿಯೋ ವಿರುದ್ದ ವಿಜಯನಗರ ಠಾಣೆ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ. ಹಿನಕಲ್ ನ ದೇವರಾಜು ಎಂಬಾತನ ವಿರುದ್ದ ನೊಂದ ಗೃಹಿಣಿ ಪ್ರಕರಣ ದಾಖಲಿಸಿದ್ದಾರೆ.

ಗೃಹಿಣಿಯ ಮನೆಯ ಪಕ್ಕದ ಮನೆಯಲ್ಲೇ ವಾಸವಿರುವ ದೇವರಾಜು ಆಗಾಗ ಹಿಂಬಾಲಿಸು ಮೊಬೈಲ್ ನಂಬರ್ ಕೊಡು ನನ್ನನ್ನು ಮಾತನಾಡಿಸು ಎಂದು ದುಂಬಾಲು ಬಿದ್ದಿದ್ದಾನೆ. ಮೊಬೈಲ್ ನಂಬರ್ ಕೊಡಲು ನಿರಾಕರಿಸಿದಾಗ ನಿನ್ನ ಗಂಡನನ್ನ ಕೊಲೆ ಮಾಡುವುದಾಗಿ ಬೆದರಿಸಿದ್ದಾನೆ. ಕೆಲವು ದಿನಗಳ ಹಿಂದೆ ಹಿಂಬಾಲಿಸಿಕೊಂಡು ಬಂದ ದೇವರಾಜ್ ವಿಜಯನಗರದ ಯೋಗಾನರಸಿಂಹ ದೇವಸ್ಥಾನ ಬಳಿ ಅಡ್ಡಗಟ್ಟಿ ಮತ್ತೆ ಮೊಬೈಲ್ ನಂಬರ್ ಗಾಗಿ ಪೀಡಿಸಿದ್ದಾನೆ.

ಈ ಭೂಮಿ ಮೇಲೆ ನಾನಿರಬೇಕು ಇಲ್ಲ ನಿನ್ನ ಗಂಡ ಇರಬೇಕು ಎಂದು ಬೆದರಿಸಿದ್ದಾನೆ. ಆತನಿಂದ ತಪ್ಪಿಸಿಕೊಂಡು ಬಂದರೂ ಮತ್ತೆ ಬೆನ್ನಟ್ಟಿಕೊಂಡು ಬಂದು ಕೆ.ಡಿ ರಸ್ತೆಯ ಬಳಿ ಸ್ಕೂಟರ್ ಅಡ್ಡ ನಿಲ್ಲಿಸಿ ಮುಂದಕ್ಕೆ ಹೋಗಲು ಬಿಡದೆ ಮೊಬೈಲ್ ನಂಬರ್ ಗಾಗಿ ಕಿರುಕುಳ ಕೊಟ್ಟಿದ್ದಾನೆ. ದೇವರಾಜು ಕಿರುಕುಳದಿಂದ ಬೇಸತ್ತ ಗೃಹಿಣಿ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ರಕ್ಷಣೆ ಕೋರಿದ್ದಾರೆ.