ನಂಜನಗೂಡು: ತಾಲ್ಲೂಕಿನ ದೇಬೂರು ಆದರ್ಶ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮೂಲಸೌಕರ್ಯ ಕೊರತೆ ಸೇರಿದಂತೆ ವಿವಿಧ ಅವ್ಯವಸ್ಥೆಗಳ ಕುರಿತು ಮಾಧ್ಯಮಗಳಲ್ಲಿ ವರದಿಗಳು ಪ್ರಸಾರವಾದ ಹಿನ್ನೆಲೆಯಲ್ಲಿ ಮಾಜಿ ಶಾಸಕ ಬಿ. ಹರ್ಷವರ್ಧನ್ ಅವರು ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಾಲೇಜಿನಲ್ಲಿನ ಅವ್ಯವಸ್ಥೆ ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳ ಕುರಿತು ಪ್ರಾಂಶುಪಾಲರನ್ನು ತರಾಟೆಗೆ ತೆಗೆದುಕೊಂಡ ಅವರು, ವಿದ್ಯಾರ್ಥಿಗಳೊಂದಿಗೆ ಮಾತನಾಡಿ ಶೌಚಾಲಯ, ಕುಡಿಯುವ ನೀರು ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಕಾಲೇಜು ಅಭಿವೃದ್ಧಿ ಸಮಿತಿ ಹೆಸರಿನಲ್ಲಿ ಹಣ ವಸೂಲಿ ಮಾಡಿರುವುದು ಹಾಗೂ ಅಭಿವೃದ್ಧಿ ಕಾಮಗಾರಿಗಳ ಕುರಿತು ಪ್ರಾಂಶುಪಾಲರಿಂದ ಮಾಹಿತಿ ಪಡೆದರು.
ನಂತರ ಮಾಜಿ ಶಾಸಕ ಬಿ. ಹರ್ಷವರ್ಧನ್ ಮಾತನಾಡಿ, ಕೆಲವು ದಿನಗಳ ಹಿಂದಷ್ಟೇ ಮಾಧ್ಯಮಗಳಲ್ಲಿ ದೇಬೂರು ಸರ್ಕಾರಿ ಪಿಯು ಕಾಲೇಜಿನ ಬಗ್ಗೆ ಸುದ್ದಿ ಪ್ರಸಾರವಾಗಿತ್ತು. ಶೌಚಾಲಯದ ವ್ಯವಸ್ಥೆ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದೆ. ಕ್ಷೇತ್ರದ ಶಾಸಕರು ಭೇಟಿ ನೀಡಿ ತನಿಖೆ ಮಾಡಿ ಕ್ರಮ ಕೈಗೊಳ್ಳುತ್ತೇವೆಂದು ಹೇಳಿದ್ದಾರೆ.
ಈಗಾಗಲೇ ವಿದ್ಯಾರ್ಥಿಗಳಿಗೆ ಕುಡಿಯಲು ತಾತ್ಕಾಲಿಕವಾಗಿ ನೀರು ಇಟ್ಟಿದ್ದಾರೆ. ಸರ್ಕಾರದಲ್ಲಿ ಅನುದಾನ ಇದೆಯೋ ಇಲ್ಲವೋ ಎಂಬುದನ್ನು ಶಾಸಕರು ಸ್ಪಷ್ಟಪಡಿಸಬೇಕು. ಸಾವಿರಾರು ಕೋಟಿ ರೂ. ಅನುದಾನ ತಂದು ಅಭಿವೃದ್ಧಿಪಡಿಸುತ್ತಿದ್ದೇವೆ ಎಂದು ಶಾಸಕರು ಹೇಳುತ್ತಿದ್ದಾರೆ. ನಿಮ್ಮ ಕಣ್ಮುಂದೆ ಇರುವ ಸಮಸ್ಯೆಯನ್ನು ನೀವು ಬಗೆಹರಿಸಿಲ್ಲ.
ಕಾಲೇಜಿನಲ್ಲಿ ಹೆಣ್ಣು ಮಕ್ಕಳಿದ್ದಾರೆ ಅವರಿಗೆ ಸುಸಜ್ಜಿತವಾದ ಶೌಚಾಲಯ ವ್ಯವಸ್ಥೆ ಇಲ್ಲ. ಯಾವ ರೀತಿ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಾರೆ. ತನಿಖೆ ಮಾಡ್ತೀವಿ ತನಿಖೆ ಮಾಡ್ತೀವಿ ಅಂತ ಮೂರು ವರ್ಷದಿಂದ ಹೇಳಿಕೊಂಡು ಬರುತ್ತಿದ್ದಾರೆ ಇಲ್ಲಿ ತನಕ ಯಾರಿಗೂ ತನಿಖೆ ಮಾಡಿ ಕ್ರಮ ಕೈಗೊಂಡಿಲ್ಲ. ದೇವಸ್ಥಾನ ವಿಚಾರದಲ್ಲಿ ಎರಡು ತಿಂಗಳು ಆಗ್ತಾ ಬಂತು ಅದರ ಮೇಲೆ ತನಿಖೆ ಮಾಡಿದ್ದೀರಾ ಇದು ಮೇಲ್ನೋಟಕ್ಕೆ ತಾಲ್ಲೂಕು ಆಡಳಿತದ ವೈಫಲ್ಯ ಎದ್ದು ಕಾಣುತ್ತಿದೆ. ದಸರಾ ರಜೆ ಮುಗಿಯುವ ಅಷ್ಟರಲ್ಲಿ ಸರಿಪಡಿಸಬೇಕು.
ಕಾಲೇಜು ಅಭಿವೃದ್ಧಿ ಸಮಿತಿ ಹೆಸರಿನಲ್ಲಿ 800 ರೂಪಾಯಿಗಳನ್ನು ವಸೂಲಿ ಮಾಡಿದ್ದಾರೆ. ಸಿಡಿಸಿ ಕಮಿಟಿ ರಚನೆ ಮಾಡದೆ ಇದನ್ನು ತೆಗೆದುಕೊಳ್ಳುವ ಆಗಿಲ್ಲ. ಇದು ಶಾಸಕರಿಗೆ ತಿಳಿದಿಲ್ಲವೇ. ಯಾರ ಮೇಲೆ ತನಿಖೆ ಮಾಡ್ತೀರಿ ಎಂಬುದು ನನಗೆ ಗೊತ್ತಿಲ್ಲ ಕೂಡಲೇ ಪ್ರಾಂಶುಪಾಲರ ವಿರುದ್ಧ ಕ್ರಮ ಕೈಗೊಂಡು ಅಮಾನತು ಮಾಡಬೇಕು.
ಎರಡು ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ ಪ್ರಾಂಶುಪಾಲರು ಏನು ಅಭಿವೃದ್ಧಿ ಮಾಡಿದ್ದಾರೆ. ಪ್ರತಿವರ್ಷ ವಿದ್ಯಾರ್ಥಿಗಳಿಗೆ ಸಿಡಿಸಿ ಕಮಿಟಿ ಹೆಸರಿನಲ್ಲಿ ವಸೂಲಿ ಮಾಡಿಕೊಂಡು ಕುಳಿತಿದ್ದಾರೆ. ಯಾವುದೇ ಅಭಿವೃದ್ಧಿ ಆಗಿಲ್ಲ. 3 ಲಕ್ಷ ರೂ. ರಿಪೇರಿ ಮಾಡಿದ್ದೇವೆ ಎಂದು ಪ್ರಾಂಶುಪಾಲರು ಹೇಳುತ್ತಿದ್ದಾರೆ. ಯಾವುದೇ ರಿಪೇರಿ ಮಾಡಿಲ್ಲ ಎಂಬುದು ನೋಡಿದರೆ ಗೊತ್ತಾಗುತ್ತದೆ. ಸರ್ಕಾರಿ ಶಾಲೆಗಳು ಮುಚ್ಚುತ್ತಿರುವುದನ್ನು ನೋಡಿದರೆ ಸರ್ಕಾರದಲ್ಲಿ ಹಣ ಇಲ್ಲ ಎಂಬುದು ಗೊತ್ತಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ಚಿಕ್ಕರಂಗನಾಯಕ ಹಾಜರಿದ್ದರು.

