ಮೈಸೂರು: ದಸರಾ ಗಜಪಡೆಯ ತಾಲೀಮು ವೇಳೆ ಭಾರ ಹೊತ್ತು ಸಾಗಲು ಹಿಂದೇಟು ಹಾಕಿದ ಮಹೇಂದ್ರ ಆನೆ ನಿಂತಲ್ಲೇ ನಿಂತ ಘಟನೆ ಮೈಸೂರಿನ ಸಯ್ಯಾಜಿರಾವ್ ರಸ್ತೆಯ ಆಯುರ್ವೇದ ಆಸ್ಪತ್ರೆ ವೃತ್ತದ ಬಳಿ ನಡೆದಿದೆ.
ಭಾರ ಹೊತ್ತು ಸಾಗಲಾಗದೆ ಮಹೇಂದ್ರ ಸುಸ್ತಾಗಿ ನಿಂತಿದ್ದರಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೂಡಲೇ ಎಚ್ಚೆತ್ತ ಅರಣ್ಯ ಇಲಾಖೆ ಸಿಬ್ಬಂದಿ, ಮಹೇಂದ್ರನಿಗೆ ಹೊರಿಸಿದ್ದ ಮರಳು ಮೂಟೆ ಹಾಗೂ ಕಟ್ಟಿದ್ದ ಮರದ ಅಂಬಾರಿಯನ್ನು ತೆರವುಗೊಳಿಸಿದರು. ಮರದ ಅಂಬಾರಿಯನ್ನು ಲಗೇಜ್ ಆಟೋ ಮೂಲಕ ಅರಮನೆಗೆ ರವಾನಿಸಲಾಯಿತು.
ಮಹೇಂದ್ರನ ಸ್ಥಿತಿ ಗಮನಿಸಿ ದಸರಾ ಗಜಪಡೆಯ ಭಾರ ಹೊರುವ ತಾಲೀಮನ್ನು ದಿಢೀರ್ ಸ್ಥಗಿತಗೊಳಿಸಲಾಯಿತು. ಬಳಿಕ ಆಯುರ್ವೇದ ಆಸ್ಪತ್ರೆ ವೃತ್ತದಿಂದ ಗಜಪಡೆ ಅರಮನೆ ಕಡೆಗೆ ವಾಪಸ್ಸಾಯಿತು. ಭಾರ ಹೊರುವ ಮೊದಲ ದಿನದ ತಾಲೀಮು ಸಂದರ್ಭದಲ್ಲಿಯೂ ಭಾರೀ ಮಳೆ ಸುರಿದ ಪರಿಣಾಮ ಮಹೇಂದ್ರ ಮುಂದೆ ಸಾಗಲಾಗದೆ ಸುಸ್ತಾಗಿದ್ದ ಎನ್ನಲಾಗಿದೆ. ಇದೀಗ ಮತ್ತೊಮ್ಮೆ ಭಾರ ಹೊರುವ ವೇಳೆ ಹಿಂದೇಟು ಹಾಕಿರುವುದು ಗಮನ ಸೆಳೆದಿದೆ.

