ಮಂಡ್ಯ: ಮಂಡ್ಯದಲ್ಲಿ ನಡೆದ ಅರ್ಚಕನ ನಿಗೂಢ ಕೊಲೆ ಪ್ರಕರಣವನ್ನ ಶ್ರೀರಂಗಪಟ್ಟಣ ಠಾಣಾ ಪೊಲೀಸರು ಭೇದಿಸಿದ್ದಾರೆ. ಪತ್ನಿಯ ಅನೈತಿಕ ಸಂಬಂಧವೇ ಅರ್ಚಕನ ಕೊಲೆಗೆ ಕಾರಣವಾಗಿದೆ. ಪ್ರಿಯಕರನ ಮೂಲಕ ಪತಿ ಅರ್ಚಕನನ್ನು ಪತ್ನಿ ಹತ್ಯೆ ಮಾಡಿಸಿದ್ದಾರೆ.

ಪತ್ನಿ ಸೇರಿ ನಾಲ್ವರನ್ನ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಮಾ.6ರಂದು ಮರಳಗಾಲ ಗ್ರಾಮದ ಬಳಿ ಕೊಲೆ ನಡೆದಿತ್ತು. ಗ್ರಾಮದ ಸಿದ್ದಲಿಂಗಪ್ಪ ಕೊಲೆಯಾಗಿದ್ದ ಅರ್ಚಕ. ತನ್ನ ಅಕ್ಕನ ಮಗಳನ್ನೇ ಅರ್ಚಕ ಸಿದ್ದಲಿಂಗಪ್ಪ ಮದುವೆಯಾಗಿದ್ದರು. ಅದೇ ಗ್ರಾಮದ ಹರೀಶನ ಜೊತೆ ಸಿದ್ದಲಿಂಗಪ್ಪ ಪತ್ನಿ ಶಾಲಿನಿ ಅಕ್ರಮ ಸಂಬಂಧ ಹೊಂದಿದ್ದನು.
ಶಾಲಿನಿ-ಹರೀಶ ಇಬ್ಬರು ಜೊತೆಯಲ್ಲೇ ಮನೆಯಲ್ಲಿ ಸಿಕ್ಕಿಬಿದ್ದಿದ್ದರು. ಅಂದಿನಿಂದ ಆಗಾಗ ದಂಪತಿ ನಡುವೆ ಜಗಳ ಆಗುತ್ತಿತ್ತು. ಇದರಿಂದ ಬೇಸತ್ತು ಪ್ರಿಯಕರನ ಜೊತೆ ಸೇರಿ ಪತಿ ಹತ್ಯೆಗೆ ಸ್ಕೆಚ್ ಹಾಕಿದ್ದಳು. ಅದರಂತೆ ತನ್ನಿಬ್ಬರು ಸ್ನೇಹಿತರ ಜೊತೆ ಸೇರಿ ಹರೀಶ ಹತ್ಯೆ ಮಾಡಿದ್ದಾರೆ.

ಹತ್ಯೆ ಬಳಿಕ ಶವವನ್ನ ನಾಲೆಗೆ ಬಿಸಾಡಿ ಅಪಘಾತದ ನಾಟಕವಾಡಿದ್ದ. ಮೃತನ ಅಂತ್ಯಕ್ರಿಯೆಯಲ್ಲೂ ಆರೋಪಿ ಹರೀಶ ಸ್ವತಃ ಭಾಗವಹಿಸಿದ್ದರು. ಪೊಲೀಸರ ತನಿಖೆ ವೇಳೆ ಅಕ್ರಮ ಸಂಬಂಧದಿಂದಲೇ ಹತ್ಯೆ ಎಂಬುದು ಸಾಬೀತಾಗಿದೆ. ಅರ್ಚಕನ ಪತ್ನಿ ಶಾಲಿನಿ, ಆಕೆಯ ಪ್ರಿಯಕರ ಟಿಪ್ಪರ್ ಡ್ರೈವರ್ ಹರೀಶ, ಸ್ನೇಹಿತರರಾದ ಗಣೇಶ, ಸಂತೋಷ್ ಕುಮಾರ್ ಬಂಧಿತರು. ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

