ಮೈಸೂರು: ಡಾ. ಬಿ.ಆರ್ ಅಂಬೇಡ್ಕರ್ ರವರ ಕನಸುಗಳನ್ನು ನನಸು ಮಾಡಲು ಯುವ ಸಮೂಹ ಮುಂದಾಗಬೇಕು. ಅಂಬೇಡ್ಕರ್ ರವರ ಜಯಂತಿಗಳನ್ನು ಆಚರಣೆ ಮಾಡುವುದಲ್ಲ ಅವರನ್ನು ಅನುಸರಿಸುವುದು ಮುಖ್ಯ ಎಂದು ಪತ್ರಕರ್ತರಾದ ಸಿ.ಎಂ ಸುಗಂಧರಾಜು ಕರೆ ನೀಡಿದರು.

ಚಾಮರಾಜನಗರ ತಾಲ್ಲೂಕಿನ ಅರಳಿಕಟ್ಟೆ ಗ್ರಾಮದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಯುವಕರ ಸಂಘ ಮತ್ತು ಗ್ರಾಮಸ್ಥರಿಂದ ಆಯೋಜಿಸಲಾಗಿದ್ದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ರವರ 135 ನೇ ಜಯಂತೋತ್ಸವವನ್ನು ಬುದ್ಧ ಮತ್ತು ಡಾ.ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಡಾ. ಬಿ.ಆರ್ ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮಗಳು ಇತ್ತೀಚಿನ ದಿನಗಳಲ್ಲಿ ಡಿಜೆ ಸೌಂಡ್ಸ್ ಮತ್ತು ಕುಡಿದು ಕುಣಿದು ಕುಪ್ಪಳಿಸುವ ಮೆರವಣಿಗೆಗೆ ಸೀಮಿತವಾಗಿರುವುದು ಸರಿಯಲ್ಲ.

ಇಂತಹ ಬೆಳವಣಿಗೆಗೆ ನಾವು ಕಡಿವಾಣ ಹಾಕಬೇಕು. ಅಂಬೇಡ್ಕರ್ ರವರನ್ನು ಎಲ್ಲ ಗ್ರಾಮಗಳಲ್ಲಿಯೂ ನಾಮಫಲಕದಲ್ಲಿ ಕೂರಿಸಿ ಅವರನ್ನು ಇಂದಿಗೂ ಬೀದಿಯಲ್ಲಿ ನಿಲ್ಲಿಸಿದ್ದೇವೆ. ಬಾಬಾ ಸಾಹೇಬರನ್ನು ಮನೆಗೆ ಮತ್ತು ಮನಕ್ಕೆ ಕರೆದುಕೊಳ್ಳುವುದು ಯಾವಾಗ ಎಂದು ಪ್ರಶ್ನಿಸಿದರು. ಅಂಬೇಡ್ಕರ್ ರವರ ಆಶಯಂತೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ, ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸಬೇಕು. ಬುದ್ಧನ ಪ್ರೀತಿ, ಕರುಣೆ ಬಾಬಾ ಸಾಹೇಬರ ಶಿಕ್ಷಣ, ಸಂಘಟನೆ, ಹೋರಾಟವನ್ನು ಮೈಗೂಡಿಸಿಕೊಂಡು ಅವರ ತತ್ವ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.

ಅಂಬೇಡ್ಕರ್ ಜಯಂತೋತ್ಸವ ಅಂಗವಾಗಿ ಗ್ರಾಮದಲ್ಲಿ ಸಡಗರ ಸಂಭ್ರಮ ಮನೆ ಮಾಡಿತ್ತು. ಅಕ್ಕ ಪಕ್ಕದ ಗ್ರಾಮಸ್ಥರು ಮತ್ತು ನೆಂಟರಿಷ್ಟರನ್ನು ಕರೆದು ಭರ್ಜರಿ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಡಾ.ಬಿ ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಸಹಾಯಕ ಮಹದೇವಯ್ಯ, ರಂಗಯ್ಯ, ರಂಗಸ್ವಾಮಿ, ಡಾ.ಬಿ.ಆರ್ ಅಂಬೇಡ್ಕರ್ ಯುವಕರ ಸಂಘದ ಅಧ್ಯಕ್ಷ ಮಹದೇವಯ್ಯ, ಪಿ. ರಂಗಸ್ವಾಮಿ, ಮದನ್, ಪ್ರಜ್ವಲ್, ಪುಟ್ಟರಾಜು, ಮಿಲಾನ್, ಗೌತಮ್, ಮಹದೇವಸ್ವಾಮಿ, ಮಾದೇಶ್, ವಿಕಾಸ್, ಪ್ರೀತಮ್, ಆರತಿ, ಮಲ್ಲಿಗಮ್ಮ, ಭಾಗ್ಯ, ರತ್ನಮ್ಮ, ನಂದಿನಿ , ಗೌರಮ್ಮ ಸೇರಿದಂತೆ ಹಲವರು ಭಾಗವಹಿಸಿದ್ದರು.