ನಂಜನಗೂಡು: ಪ್ರಸ್ತುತ ದಿನಗಳಲ್ಲಿ ಬಸವಣ್ಣರವರ ವಿಚಾರಧಾರೆಗಳು ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅವಶ್ಯಕವಾಗಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ತಿಳಿಸಿದರು.

ನಂಜನಗೂಡು ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಏರ್ಪಡಿಸಿದ್ದ ಬಸವಣ್ಣನವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವು ಮಾಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು. ಯಾರು ನಮ್ಮ ಸಮಾಜದಲ್ಲಿ ಆರ್ಥಿಕವಾಗಿ ಬಡವರಿದ್ದಾರೆ ಅವರಿಗೆ ಸಹಾಯ ಮಾಡಬೇಕು. ಸಮಾಜದಲ್ಲಿ ಯಾವುದೇ ಅಪೇಕ್ಷೆ ಇಲ್ಲದೆ ತಮ್ಮ ಕೆಲಸ ಕಾರ್ಯಗಳನ್ನು ಕರ್ತವ್ಯಗಳನ್ನು ಮಾಡಬೇಕು.

ಬಸವಣ್ಣನವರ ತತ್ವಗಳಾದ ಕಾಯಕವೇ ಕೈಲಾಸ ಮತ್ತು ದಾಸೋಹಕ್ಕೆ ಮಹತ್ವ ನೀಡಿ ಅವರ ತತ್ವ ಸಿದ್ಧಾಂತವನ್ನು ಮೈಗೂಡಿಸಿಕೊಂಡು ನಮ್ಮ ಸಮಾಜದಲ್ಲಿ ಸಾಕಷ್ಟು ಸವಾಲುಗಳಿವೆ ಒಗ್ಗಟ್ಟಿನಿಂದ ಎಲ್ಲರಿಗೂ ಒಂದಾದರೆ ಜಾತಿ ವ್ಯವಸ್ಥೆಯನ್ನು ತೊಡೆದುಹಾಕಬಹುದು ಬಸವಣ್ಣನವರು ತಮ್ಮ ವಚನದ ಮೂಲಕ ಸಮಾಜವನ್ನು ತಿದ್ದುವ ಕಾರ್ಯವನ್ನು ಮಾಡಿದರು ಎಂದು ತಿಳಿಸಿದರು.

ನಂತರ ತಾಲ್ಲೂಕು ದಂಡಾಧಿಕಾರಿ ಡಾ. ಸ್ಮಿತಾ ರಾಮು ಮಾತನಾಡಿ, ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಚನವನ್ನು ರಚಿಸುವ ಮೂಲಕ ಸಾಮಾಜಿಕ ಸುಧಾರಣ ಕ್ರಮಗಳನ್ನು ಕೈಗೊಂಡಿದ್ದರು. ಅನುಭವ ಮಂಟಪದ ಸ್ಥಾಪಿಸುವುದರ ಮೂಲಕ ಎಲ್ಲರನ್ನೂ ಒಗ್ಗೂಡಿಸಿದರಯರು. ಇತ್ತೀಚಿನ ದಿನಗಳಲ್ಲಿ ಬಸವಣ್ಣನವರ ವಚನಗಳನ್ನು ಮಕ್ಕಳಿಗೆ ಕಲಿಸುವ ಮುಖಾಂತರ ಜೀವನ ಮೌಲ್ಯಗಳು ತಿಳಿಸಬಹುದೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೇಶವಮೂರ್ತಿ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಹಾಡ್ಯ ರಂಗಸ್ವಾಮಿ, ವೀರಶೈವ ಸಮಾಜದ ತಾಲ್ಲೂಕು ಅಧ್ಯಕ್ಷ ಸಿಂಧುವಳ್ಳಿ ಕೆಂಪಣ್ಣ, ಬಸವಣ್ಣ, ಅಬ್ದುಲ್ ಖಾದರ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಜರಿದ್ದರು.