ಮೈಸೂರು: ವಾತ್ಸಲ್ಯ ಯೋಜನೆಯಡಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಲ್ಲಿ ನಿರ್ಗತಿಕ ಮಹಿಳೆಗೆ ಸೂರು ಕಲ್ಪಿಸಿ ಮಾನವೀಯತೆ ಮೆರೆದಿದ್ದಾರೆ .
ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲ್ಲೂಕಿನ ಬನ್ನೂರು ಯೋಜನಾ ವ್ಯಾಪ್ತಿಯ ಕುಪ್ಯಾ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ನಿರ್ಮಿಸಲಾದ ನೂತನ ಮನೆಯನ್ನು ನಿರ್ಗತಿಕ ಮಹಿಳೆ ಚಿಕ್ಕ ತಾಯಮ್ಮ ರವರಿಗೆ ಹಸ್ತಾಂತರಿಸಲಾಯಿತು.

ಮಹಿಳಾ ಜ್ಞಾನವಿಕಾಸ ಕೇಂದ್ರದ ಅಡಿಯಲ್ಲಿ ಬರುವ ‘ವಾತ್ಸಲ್ಯ’ ಕಾರ್ಯಕ್ರಮದ ಮೂಲಕ ಕುಪ್ಯಾ ಗ್ರಾಮದ ನಿವಾಸಿ ಚಿಕ್ಕ ತಾಯಮ್ಮ ಅವರಿಗೆ ಈ ಮನೆಯನ್ನು ನಿರ್ಮಿಸಿಕೊಡಲಾಗಿದೆ. ನೂತನವಾಗಿ ನಿರ್ಮಾಣಗೊಂಡ ಈ ಗೃಹವನ್ನು ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ಜಯಂತ್ ಪೂಜಾರಿ ಹಾಗೂ ಜಿಲ್ಲಾ ನಿರ್ದೇಶಕರಾದ ವಿಜಯಕುಮಾರ್ ನಾಗನಾಳ ಅವರು ಫಲಾನುಭವಿ ಚಿಕ್ಕ ತಾಯಮ್ಮ ರವರಿಗೆ ಅಧಿಕೃತವಾಗಿ ಹಸ್ತಾಂತರಿಸಿದರು.
ವಾತ್ಸಲ್ಯ ಯೋಜನೆ ಬಡವರ ಆಶಾಕಿರಣ: ಜಯಂತ್ ಪೂಜಾರಿ
ಮನೆಯನ್ನು ಹಸ್ತಾಂತರಿಸಿ ಮಾತನಾಡಿದ ಪ್ರಾದೇಶಿಕ ನಿರ್ದೇಶಕರಾದ ಜಯಂತ್ ಪೂಜಾರಿ ಅವರು, “ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮೀಣ ಭಾಗದ ಜನರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿದೆ. ವಸತಿಹೀನರಾಗಿರುವ ಮತ್ತು ಶಿಥಿಲಾವಸ್ಥೆಯಲ್ಲಿರುವ ಮನೆಗಳಲ್ಲಿ ವಾಸಿಸುತ್ತಿರುವ ನಿರ್ಗತಿಕರನ್ನು ಗುರುತಿಸಿ, ಅವರಿಗೆ ಆಶ್ರಯ ಒದಗಿಸುವ ಸದುದ್ದೇಶದಿಂದ ‘ವಾತ್ಸಲ್ಯ’ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯ ಮೂಲಕ ಅನೇಕ ಬಡ ಕುಟುಂಬಗಳಿಗೆ ಸುಸಜ್ಜಿತವಾದ ನೂತನ ಮನೆಗಳನ್ನು ನಿರ್ಮಿಸಿಕೊಡಲಾಗುತ್ತಿದ್ದು, ಇದು ಬಡವರ ಪಾಲಿನ ಆಶಾಕಿರಣವಾಗಿದೆ,” ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಕುಪ್ಯಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಂದಿನಿ ರಾಜೇಶ್, ಮಾಜಿ ಅಧ್ಯಕ್ಷರುಗಳಾದ ರಾಘವೇಂದ್ರ ಹಾಗೂ ಗವಿಸಿದ್ದಯ್ಯ, ಮಾಜಿ ಉಪಾಧ್ಯಕ್ಷರಾದ ಪುಷ್ಪ ಶಿವಪ್ಪ, ಕುಪ್ಯಾ ಒಕ್ಕೂಟದ ಅಧ್ಯಕ್ಷರಾದ ಶ್ರೀ ನಾಗೇಂದ್ರ ಪ್ರಸಾದ್, ಜಿಲ್ಲಾ ಜನಜಾಗೃತಿ ಕೋಶಾಧಿಕಾರಿ ಶ್ರೀ ನಾರಾಯಣ್ ,ಬನ್ನೂರು ಯೋಜನಾ ಕಚೇರಿಯ ಯೋಜನಾಧಿಕಾರಿ ಉಮಾವತಿ, ಜ್ಞಾನವಿಕಾಸ ಸಮನ್ವಯ ಅಧಿಕಾರಿ ಪ್ರಮೀಳಾ, ವಲಯದ ಮೇಲ್ವಿಚಾರಕ ನಾಗರಾಜ್, ಸೇವಾ ಪ್ರತಿನಿಧಿಗಳಾದ ಚೆನ್ನಾಜು ಮತ್ತು ಮಹದೇವಸ್ವಾಮಿ, ಹಾಗೂ ಊರಿನ ಪ್ರಮುಖ ಮುಖಂಡರಾದ ಶಿವಣ್ಣ, ಸಿದ್ದರಾಜು, ಗವಿಸಿದ್ದಯ್ಯ, ಭೈರಯ್ಯ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಯೋಜನೆಯಿಂದ ಸ್ವಂತ ಸೂರು ಪಡೆದ ಫಲಾನುಭವಿ ಚಿಕ್ಕ ತಾಯಮ್ಮ ಅವರು ಸಂಸ್ಥೆಗೆ ತುಂಬು ಹೃದಯದ ಕೃತಜ್ಞತೆ ಸಲ್ಲಿಸಿ ಸಂತಸ ವ್ಯಕ್ತಪಡಿಸಿದರು.

