News Karnataka Kannada
Friday, May 17 2024
ಚಾಮರಾಜನಗರ

ಚಾಮರಾಜನಗರ: ಹಿಮಸಿಂಚನದ ಹಿಮವದ್ ಗೋಪಾಲಸ್ವಾಮಿ ಬೆಟ್ಟ

Himavad Gopalaswamy Hill in Avalanche
Photo Credit : News Kannada

ಚಾಮರಾಜನಗರ: ಇದೀಗ ವೀಕೆಂಡ್ ಗಳಲ್ಲಿ ಪ್ರವಾಸಿ ತಾಣಗಳತ್ತ ಪ್ರವಾಸ ಹೋಗುವವರ ಸಂಖ್ಯೆ ಹೆಚ್ಚಾಗಿದ್ದು, ಸಾಮಾನ್ಯವಾಗಿ ಎಲ್ಲ ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ. ಅದರಲ್ಲೂ ನಿಸರ್ಗ ರಮಣೀಯ ತಾಣಗಳಲ್ಲಿ ಪ್ರವಾಸಿಗರ ದಂಡು ತುಸು ಜಾಸ್ತಿಯೇ…

ವಾರಪೂರ್ತಿ ಕೆಲಸದ ಒತ್ತಡದಲ್ಲಿ ಸಿಲುಕಿದವರು ಮಾನಸಿಕ ನೆಮ್ಮದಿಗಾಗಿ ನಿಸರ್ಗದ ನಡುವಿನ ತಾಣಗಳನ್ನು ಅರಸಿಕೊಂಡು ಬರುತ್ತಿರುವುದು ವಿಶೇಷವಾಗಿದೆ. ಹೀಗಾಗಿಯೇ ಪ್ರವಾಸಿತಾಣಗಳಲ್ಲಿ ಪ್ರವಾಸಿಗರ ಕಲರವ ಹೆಚ್ಚಾಗುತ್ತಿದೆ. ಇದೀಗ ಚಾಮರಾಜನಗರ ಜಿಲ್ಲೆಯ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಪ್ರವಾಸಿಗರ ಕಲರವ ಶುರುವಾಗಿದೆ.

ಹಿಮವದ್ ಗೋಪಾಲಸ್ವಾಮಿ ಬೆಟ್ಟವು ನಿಸರ್ಗ ಪ್ರಿಯರನ್ನು ಸದಾ ತನ್ನತ್ತ ಸೆಳೆಯುತ್ತದೆ. ಅದಕ್ಕೆ ಕಾರಣ ಹಿಮಸಿಂಚನ ಮತ್ತು ಸುಂದರ ನಿಸರ್ಗ ಅದರಾಚೆಗೆ ಇಷ್ಟಾರ್ಥ ನೆರವೇರಿಸುವ ಗೋಪಾಲ ಸ್ವಾಮಿ, ಚಾರಣ ಪ್ರಿಯರು, ಆಸ್ತಿಕರು, ನಾಸ್ತಿಕರು ಎಲ್ಲರಿಗೂ ಇದು ನೆಚ್ಚಿನ ತಾಣವಾಗಿದೆ. ಹೀಗಾಗಿಯೇ ಸದಾ ಒತ್ತಡಗಳಿಂದ, ಪೇಟೆ, ಪಟ್ಟಣಗಳ ಗೌಜುಗದ್ದಲಗಳಲ್ಲಿ ಬದುಕು ಕಟ್ಟಿಕೊಂಡವರು ತಮ್ಮ ವಾರದ ರಜಾ ದಿನಗಳಲ್ಲಿ ಇಲ್ಲಿಗೆ ಆಗಮಿಸಿ ಒಂದಷ್ಟು ಸಮಯವನ್ನು ಇಲ್ಲಿ ಕಳೆದು ತೆರಳುತ್ತಾರೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿಗೆ ಸಮೀಪವಿರುವ ಹಿಮವದ್ ಗೋಪಾಲಸ್ವಾಮಿಬೆಟ್ಟವು ಬೆಂಗಳೂರಿನಿಂದ 220ಕಿ.ಮೀ. ಹಾಗೂ ಮೈಸೂರಿನಿಂದ 74ಕಿ.ಮೀ. ದೂರದಲ್ಲಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಿಂದ 20 ಕಿ.ಮೀ. ಊಟಿ ರಸ್ತೆಯಲ್ಲಿ ಸಾಗಿದರೆ ಅಲ್ಲಿ ಹಂಗಳ ಎಂಬ ಗ್ರಾಮ ಸಿಗುತ್ತದೆ. ಅಲ್ಲಿಂದ ಬಲಗಡೆ ಸಾಗಿದರೆ ಶ್ರೀ ಗೋಪಾಲಸ್ವಾಮಿ ಬೆಟ್ಟವನ್ನು ತಲುಪಬಹುದಾಗಿದೆ. ಇನ್ನು ಈ ಬೆಟ್ಟಕ್ಕೆ ಕಡಿದಾದ ಅಂಕುಡೊಂಕು ರಸ್ತೆಯಲ್ಲಿ ತೆರಳವುದೇ ಒಂದು ಅಪರೂಪದ ಅನುಭವವಾಗಿದೆ. ದಾರಿಯುದ್ದಕ್ಕೂ ಕಾಣಸಿಗುವ ಸುಂದರ ರಮಣೀಯ ದೃಶ್ಯಗಳು ಹೊಸ ಅನುಭವವನ್ನು ನೀಡುತ್ತದೆ.

ಇನ್ನು ಗೋಪಾಲಸ್ವಾಮಿ ಬೆಟ್ಟವು ತ್ರಯಂಬಕಾದ್ರಿ, ನೀಲಾದ್ರಿ, ಮಂಗಳಾದ್ರಿ, ಶಂಖರಾದ್ರಿಗಿರಿ, ಹಂಸಾದ್ರಿ, ಗರುಡಾದ್ರಿ, ಪಲ್ಲವಾದ್ರಿ, ಮಲ್ಲಿಕಾರ್ಜುನಗಿರಿ ಮೊದಲಾದ ಬೆಟ್ಟಗಳಿಂದ ಸುತ್ತುವರೆದಿದ್ದು, ಹಂಸತೀರ್ಥ, ಪದ್ಮತೀರ್ಥ, ಶಂಖ ತೀರ್ಥ, ಚಕ್ರ ತೀರ್ಥ, ಗದಾ ತೀರ್ಥ, ಶಜ್ಞಾತೀರ್ಥ, ವನಮೂಲಿಕಾ ತೀರ್ಥ, ತೊಟ್ಲು ತೀರ್ಥ ಎಂಬ ಅಷ್ಟ ತೀರ್ಥಗಳಿವೆ. ಮಕ್ಕಳಿಲ್ಲದವರು ತೊಟ್ಲು ತೀರ್ಥದಲ್ಲಿ ಸ್ನಾನ ಮಾಡಿದರೆ ಮಕ್ಕಳಾಗುತ್ತವೆಂಬ ನಂಬಿಕೆಯೂ ಇಲ್ಲಿನವರಿಗಿದೆ.

ಬೆಟ್ಟದ ಮೇಲಿರುವ ಹಿಮವದ್ ಗೋಪಾಲಸ್ವಾಮಿ ದೇಗುಲಕ್ಕೆ ಸುಮಾರು ಏಳು ಶತಮಾನಕ್ಕೂ ಹೆಚ್ಚಿನ ಇತಿಹಾಸವಿದೆ. ಹೊಯ್ಸಳ ದೊರೆ ಚೋಳ ಬಲ್ಲಾಳ ಈ ದೇವಾಲಯವನ್ನು ನಿರ್ಮಿಸಿದನೆಂದೂ ಬಳಿಕ ಮೈಸೂರಿನ ಒಡೆಯರ ಕಾಲದಲ್ಲಿ ಇನ್ನಷ್ಟು ಅಭಿವೃದ್ಧಿಗೊಳಿಸಿದರು ಎಂಬುದು ತಿಳಿದು ಬರುತ್ತದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಪ್ರದೇಶವನ್ನು ವನ್ಯಜೀವಿ 1972ರ ಅನ್ವಯ ವನ್ಯಜೀವಿ ವಲಯ ಎಂದು ಘೋಷಣೆ ಮಾಡಿದ್ದು, ಭಾರತದಲ್ಲಿ ಅತೀ ಹೆಚ್ಚು ಹುಲಿ ಹೊಂದಿರುವ ಅರಣ್ಯಕ್ಕೆ ಈ ಬೆಟ್ಟ ಒಳಪಟ್ಟಿದೆ. ಹಾಗಾಗಿ ಬೆಳಿಗ್ಗೆ 8 ರಿಂದ ಸಂಜೆ 4,30 ಗಂಟೆಯವರಗೆ ಮಾತ್ರ ಇಲ್ಲಿಗೆ ಪ್ರವೇಶಾವಕಾಶ ನೀಡಲಾಗುತ್ತದೆ. ಜತೆಗೆ ಖಾಸಗಿ ವಾಹನಗಳ ಪ್ರವೇಶಕ್ಕೂ ನಿರ್ಬಂಧ ಹೇರಲಾಗಿದೆ.

ಪ್ರವಾಸಿಗರು ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಬೇಕಾದರೆ ಬಸ್ ವ್ಯವಸ್ಥೆ ಮಾಡಲಾಗಿದ್ದು, ಈ ಬಸ್ ಗಳಲ್ಲಿ ತೆರಳಬೇಕಾಗುತ್ತದೆ. ಇನ್ನು ಕಡಿದಾದ ರಸ್ತೆಯಲ್ಲಿ ತೆರಳುವುದು ರೋಮಾಂಚನಕಾರಿ ಅನುಭವ. ರಸ್ತೆಯುದ್ದಕ್ಕೂ ಸಿಗುವ ನಿಸರ್ಗದ ನೋಟ ಮನಮೋಹಕವಾಗಿದೆ. ಅಷ್ಟೇ ಅಲ್ಲದೆ ಅಲ್ಲೊಂದು ಇಲ್ಲೊಂದು ಎಂಬಂತೆ ಸಿಗುವ ವನ್ಯಪ್ರಾಣಿಗಳು ಖುಷಿ ಕೊಡುತ್ತವೆ. ಬೆಟ್ಟದ ಮೇಲೆ ಹೋದರೆ ಹಿಮಸಿಂಚನ ಪ್ರವಾಸಿಗರನ್ನು ಸ್ವಾಗತಿಸುತ್ತದೆ. ಇಲ್ಲಿಂದ ಕಣ್ಣು ಹಾಯಿಸಿದರೆ ಸ್ವರ್ಗವೇ ಧರೆಗಿಳಿದ ಅನುಭವವಾಗುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು