ಗುಂಡ್ಲುಪೇಟೆ: ಗುಂಡ್ಲುಪೇಟೆ ಪಟ್ಟಣದ ಇಂದಿರಾ ಕ್ಯಾಂಟೀನ್ಗಳು ಕಳೆದ ಆರು ದಿನಗಳಿಂದ ಬಾಗಿಲು ಮುಚ್ಚಿದ್ದು ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ದುಬಾರಿ ಹಣ ಕೊಟ್ಟು ಹೋಟೆಲ್ ಗೆ ಮುಖ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಗುಂಡ್ಲುಪೇಟೆಯಲ್ಲಿ ನಿತ್ಯ 900 ಮಂದಿ ಇದರ ಪ್ರಯೋಜನ ಪಡೆಯುತ್ತಿದ್ದರು. ಆದರೆ, ಕಳೆದ ಆರು ದಿನಗಳಿಂದ ಬಾಗಿಲು ಮುಚ್ಚಿರುವುದರಿಂದ ಹಿಡಿಶಾಪ ಹಾಕಿಕೊಂಡು ವಾಪಸ್ ಆಗುತ್ತಿದ್ದಾರೆ. ಇಂದಿರಾ ಕ್ಯಾಂಟೀನ್ ಜವಾಬ್ದಾರಿ ವಹಿಸಿಕೊಂಡಿದ್ದ ಚೆಪ್ ಟಾಕ್ ಎಂಬ ಏಜೆನ್ಸಿಗೆ ಸರ್ಕಾರ ಹಣ ಬಿಡುಗಡೆ ಮಾಡದ ಕಾರಣ ಬಾಗಿಲು ಮುಚ್ಚಲಾಗಿದೆ ಎಂದು ತಿಳಿದು ಬಂದಿದೆ. 5 ರೂ.ಗೆ ತಿಂಡಿ, 10 ರೂ.ಗೆ ಊಟ ಕಡಿಮೆ ಬೆಲೆಯಲ್ಲಿ ಸಿಗುತ್ತಿದೆ ಎಂಬ ಕಾರಣದಿಂದ ವಿವಿಧ ಗ್ರಾಮದ ಕೂಲಿ ಕಾರ್ಮಿಕರು ನಿತ್ಯ ಬೆಳಗ್ಗೆ ಮತ್ತು ಮಧ್ಯಾಹ್ನದ ವೇಳೆ ಇಂದಿರಾ ಕ್ಯಾಂಟೀನ್ಗೆ ಆಹಾರ ಸೇವಿಸುತ್ತಿದ್ದರು. ಆದರೆ, ಕಳೆದ ಆರು ದಿನದಿಂದ ಬಾಗಿಲು ಮುಚ್ಚಿರುವ ಹಿನ್ನೆಲೆ ಜನರು ಕ್ಯಾಂಟೀನ್ ಬಳಿ ಬಂದು ಬಾಗಿಲು ಹಾಕಿರುವುದನ್ನು ಕಂಡು ವಾಪಸ್ ಆಗುತ್ತಿದ್ದಾರೆ.