News Karnataka Kannada
Sunday, May 05 2024
ಚಾಮರಾಜನಗರ

ಶಾಲೆಬಿಟ್ಟು ಪೋಷಕರೊಂದಿಗೆ ಕೇರಳದತ್ತ ಹೊರಟ ಮಕ್ಕಳು

Children leave school for Kerala with their parents
Photo Credit : Pixabay

ಚಾಮರಾಜನಗರ: ಈಗ ಕೇರಳದಲ್ಲಿ ಕಾಫಿ ಕೊಯ್ಲು ಆರಂಭವಾಗಿರುವ ಕಾರಣ ಅಲ್ಲಿ ಕಾರ್ಮಿಕರ ಅಗತ್ಯವಿದ್ದು, ಕಾಫಿ ಕೊಯ್ಲು ಮಾಡುವವರಿಗೆ ಹೆಚ್ಚಿನ ಕೂಲಿ ಸಿಗುವ ಕಾರಣ ಪ್ರತಿವರ್ಷದಂತೆ ಈ  ಬಾರಿಯೂ  ಗುಂಡ್ಲುಪೇಟೆ ತಾಲೂಕಿನ ಕೆಲ ಗ್ರಾಮದಿಂದ ಕಾರ್ಮಿಕರು ಕೇರಳದತ್ತ ಮುಖ ಮಾಡಿದ್ದು, ಮಕ್ಕಳನ್ನು ಕೂಡ  ತಮ್ಮೊಂದಿಗೆ ಕರೆದೊಯ್ದಿರುವುದು ಈಗ ಕಂಡು ಬಂದಿದೆ.

ಈ ಸಮಯದಲ್ಲಿ ಕೇರಳದತ್ತ ಜಿಲ್ಲೆಯ ಕೂಲಿ ಕಾರ್ಮಿಕರು ತೆರಳುವುದು ಇವತ್ತು ನಿನ್ನೆಯದಲ್ಲ. ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಬಹಳಷ್ಟು ಕಾರ್ಮಿಕರು ಕುಟುಂಬ ಸಹಿತ ಕೇರಳಕ್ಕೆ ಗುಳೆ ಹೋಗಿ ತಿಂಗಳ ಕಾಲ ಅಲ್ಲಿದ್ದು ಕಾಫಿ ಕೊಯ್ಲು ಮುಗಿಸಿ ಒಂದಷ್ಟು ಹಣದೊಂದಿಗೆ ಹಿಂತಿರುಗುತ್ತಾರೆ. ಅಲ್ಲಿಂದ ತರುವ ಹಣದಿಂದ ತಾವು ಮಾಡಿಕೊಂಡ ಸಾಲವನ್ನು ತೀರಿಸುತ್ತಾರೆ. ಜತೆಗೆ ಇತರೆ ಕಾರ್ಯಗಳಿಗೂ ಇದರಿಂದ ಅನುಕೂಲವಾಗುತ್ತಿದೆ.

ಹಾಗೆನೋಡಿದರೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕು  ಕೇರಳ ರಾಜ್ಯದ ಗಡಿಯನ್ನು ಹಂಚಿಕೊಂಡಿದ್ದು, ಕರ್ನಾಟಕಕ್ಕಿಂತ ಅಲ್ಲಿ ದುಪ್ಪಟ್ಟು ಕೂಲಿ ಹಣ ಸಿಗುವ ಹಿನ್ನೆಲೆಯಲ್ಲಿ ಮತ್ತು ಕಾಫಿಕೊಯ್ಲ ಕೆಲಸವನ್ನು ಎಲ್ಲರೂ ಮಾಡಬಹುದಾಗಿರುವುದರಿಂದ ಜತೆಗೆ ಕೊಯ್ಲು ಮಾಡಿದ ಹಣ್ಣಿಗೆ ಕೆಜಿಗೆ ಇಂತಿಷ್ಟು ಎಂಬಂತೆ ಹಣ ನೀಡುವುದರಿಂದ ಅಥವಾ ಕೂಲಿಯನ್ನೇ ಹೆಚ್ಚು ನೀಡುವುದರಿಂದ ಗುಂಡ್ಲುಪೇಟೆ ತಾಲೂಕಿನ ಅಣ್ಣೂರು, ಭೀಮನಬೀಡು, ಕೂತನೂರು, ಬೇರಂಬಾಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ಕೇರಳದತ್ತ ಮುಖ ಮಾಡಿದ್ದಾರೆ. ಈಗಾಗಲೇ ಕಳೆದೊಂದು ವಾರದಿಂದ ಇಲ್ಲಿನ ಕಾರ್ಮಿಕರೆಲ್ಲರೂ ಕೇರಳದತ್ತ ವಲಸೆ ಹೋಗುತ್ತಿರುವುದು ಕಂಡು ಬರುತ್ತಿದೆ.

ತಾಲೂಕಿಗೊಂದು  ಸುತ್ತುಹೊಡೆದರೆ  ಗುಂಡ್ಲುಪೇಟೆ ತಾಲೂಕಿನ ವಿವಿಧ ಗ್ರಾಮದ ಶಾಲೆಗಳಲ್ಲಿ 24 ಮಂದಿ ವಿದ್ಯಾರ್ಥಿಗಳು ಶಾಲೆ ತೊರೆದು ಪಾಲಕರ ಜೊತೆ ಹೊರಟ್ಟಿದ್ದು, ಕಡ್ಡಾಯ ಶಿಕ್ಷಣದಿಂದ ದೂರವಾಗಿದ್ದಾರೆ. 12 ಮಂದಿ ಬಾಲಕಿಯರು, 12 ಮಂದಿ ಬಾಲಕರು ಗುಳೆ ಹೊರಟ ಪಾಲಕರ ಜೊತೆ ತೆರಳಿದ್ದಾರೆಂದು ಶಿಕ್ಷಣ ಇಲಾಖೆ ಪಟ್ಟಿ ಮಾಡಿದೆ. ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯೂ ಇದೆ.

ಇನ್ನೊಂದೆಡೆ  ಗುಳೆ ಹೊರಟ ಪಾಲಕರ ಜೊತೆ ಮಕ್ಕಳು ತೆರಳಿರುವ ಹಾಗೂ ತೆರಳುವ ವಿದ್ಯಾರ್ಥಿಗಳ ಪಟ್ಟಿ ತಯಾರಿಸಲಾಗಿದೆ. ಅವರನ್ನು ಮತ್ತೆ ಶಾಲೆಗೆ ಕರೆತರಲಾಗುವುದು. ಅಲ್ಲಿನ ಜಿಲ್ಲಾಧಿಕಾರಿ ಮತ್ತು ಕಾರ್ಮಿಕ ಅಧಿಕಾರಿಗಳಿಗೆ ಪತ್ರ ಕೂಡ ಬರೆಯಲಾಗುವುದು ಎಂದು ಗುಂಡ್ಲುಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ರಾಜಶೇಖರ್ ತಿಳಿಸಿದ್ದಾರೆ.

ಸರ್ಕಾರದ ಗ್ಯಾರಂಟಿ ಯೋಜನೆಗಳು, ಉದ್ಯೋಗ ಖಾತ್ರಿ ಯೋಜನೆ ಇದ್ದರೂ ಹಲವು ಗ್ರಾಮಗಳ ಜನರು ಕೇರಳ ರಾಜ್ಯಕ್ಕೆ ಕೂಲಿಗಾಗಿ ಗುಳೆ ಹೊರಡುತ್ತಿದ್ದಾರೆ. ಗುಂಡ್ಲುಪೇಟೆ ಪಟ್ಟಣದ ಸಾರಿಗೆ ಬಸ್‌ ನಿಲ್ದಾಣದಲ್ಲಿ ನಿತ್ಯ ಕೇರಳ ಬಸ್ಗಾಗಿ ವೃದ್ಧರು, ಮಹಿಳೆಯರು ಪುರುಷರು ಕಾದು ಕುಳಿತುಕೊಳ್ಳುವುದು ಸಾಮಾನ್ಯವಾಗಿದೆ. ರೈತರು, ಬಡವರು ಕೂಲಿ ಕಾರ್ಮಿಕರು ಹಾಗೂ ಮಹಿಳೆಯರಿಗೆ ಸಣ್ಣ ಪ್ರಮಾಣದಲ್ಲಿ ನೆರವು ನೀಡುವಲ್ಲಿ ಗ್ಯಾರಂಟಿ ಯೋಜನೆಗಳು ಸ್ವಲ್ಪ ಪ್ರಮಾಣದಲ್ಲಿ ಆಸರೆಯಾದಂತೆ ಕಂಡು ಬಂದರೂ ಜನರು ಗುಳೆ ಹೋಗುವುದನ್ನು ತಪ್ಪಿಸಲು ಸಾಧ್ಯವಾಗದಿರುವುದು ವಿಪರ್ಯಾಸವಾಗಿದೆ.

ಕೇರಳಕ್ಕೆ ತೆರಳುವ ಕಾರ್ಮಿಕರು ಬಡತನದಲ್ಲಿಯೇ ಜೀವನ ಸಾಗಿಸುವ ಕುಟುಂಬಗಳಾಗಿದ್ದು, ಕೂಲಿ ಮಾಡಿಯೇ ಜೀವನ ಸಾಗಿಸಿಕೊಂಡು ಬಂದವರಾಗಿದ್ದಾರೆ. ಹೀಗಾಗಿ ಹೆಚ್ಚಿನ ಕೂಲಿ ಸಿಗುವ ಕಡೆಗೆ ತೆರಳುವುದು ಮಾಮೂಲಿಯಾಗಿದೆ. ಕೆಲವು ಪಾಲಕರು ತಮ್ಮ ಮಕ್ಕಳನ್ನು ಅಜ್ಜ ಅಜ್ಜಿ ಮನೆಯಲ್ಲಿ ಬಿಟ್ಟು ಕೇರಳಕ್ಕೆ ತೆರಳಿ ತಿಂಗಳುಗಟ್ಟಲೆ ಅಲ್ಲಿ ಕೆಲಸ ಮಾಡಿ ಹಿಂತಿರುಗುತ್ತಾರೆ. ಇನ್ನು ಕೆಲವು ಕುಟುಂಬಗಳು ಅಂತಹ ಪರಿಸ್ಥಿತಿಯಲ್ಲಿ ಇಲ್ಲದ ಕಾರಣದಿಂದ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದಾರೆ ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ.

ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಪರ್ಯಾಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಅಲ್ಲದೆ ಕೇರಳದ ಕಾಫಿತೋಟಗಳಲ್ಲಿ ಬಾಲಕಾರ್ಮಿಕರಿಗೆ ಕೆಲಸ ನೀಡದಂತೆ ನೋಡಿಕೊಳ್ಳಬೇಕಾಗಿದೆ. ಇದು ಸಾಧ್ಯವಾಗುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು