News Karnataka Kannada
Saturday, May 11 2024
ಚಾಮರಾಜನಗರ

ಚಾಮರಾಜನಗರ: ವಿಶೇಷಚೇತನ ಫಲಾನುಭವಿಗಳಿಗೆ ಸಾಧನ, ಸಲಕರಣೆಗಳ ಸಮರ್ಪಣೆ

Chamarajanagar: Dedication of equipment, equipment to differently-abled beneficiaries
Photo Credit : By Author

ಚಾಮರಾಜನಗರ: ಕೇಂದ್ರಸರ್ಕಾರದ ವಿಶೇಷ ಆಡಿಪ್ ಯೋಜನೆಯಡಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿನ 1693 ವಿಶೇಷಚೇತನ ಫಲಾನುಭವಿಗಳಿಗೆ 1 ಕೋಟಿ 20 ಲಕ್ಷಕ್ಕೂ ಹೆಚ್ಚಿನ ಮೊತ್ತದ ಸಾಧನ, ಸಲಕರಣೆಗಳನ್ನು ನಗರದಲ್ಲಿ ಉಚಿತವಾಗಿ ಸಮರ್ಪಣೆ ಮಾಡಲಾಯಿತು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ವಿಶೇಷಚೇತನ ವ್ಯಕ್ತಿಗಳ ಸಬಲೀಕರಣ (ದಿವ್ಯಾಂಗಜನ್) ಇಲಾಖೆ, ಆರ್ಟಿಫಿಶಿಯಲ್ ಲಿಂಬ್ಸ್ ಮ್ಯಾನುಫ್ಯಾಕ್ಚರಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ (ಆಲಿಂಕೋ), ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಸಾಮಾಜಿಕ ಅಧಿಕಾರಿತಾ ಶಿಬಿರ’ದಲ್ಲಿ ವಿಶೇಷಚೇತನರಿಗೆ ಅಗತ್ಯವುಳ್ಳ ಸಾಧನ, ಸಲಕರಣೆಗಳನ್ನು ವಿತರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ರಾಜ್ಯ ಸಚಿವರಾದ ಎ. ನಾರಾಯಣಸ್ವಾಮಿ ಅವರು ಮಾತನಾಡಿ ದಿವ್ಯಾಂಗರಿಗೆ ಉಚಿತವಾಗಿ ಸಾಧನ, ಸಲಕರಣೆ ವಿತರಣೆ ಕಾರ್ಯಕ್ರಮ ಕೇಂದ್ರಸರ್ಕಾರದ ವಿಶಿಷ್ಟ ಕಾರ್ಯಕ್ರಮವಾಗಿದೆ. ಕೇಂದ್ರಸರ್ಕಾರವು ವಿಶೇಷಚೇತನರ ಬಗ್ಗೆ ವಿಶೇಷ ಕಾಳಜಿ ಹೊಂದಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಹತ್ವಾಕಾಂಕ್ಷಿ ಯೋಜನೆ, ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವುದು ಉತ್ತಮ ಸೇವಾಕಾರ್ಯವಾಗಿದೆ ಎಂದು ತಿಳಿಸಿದರು

ಲೋಕಸಭಾ ಸದಸ್ಯರಾದ ವಿ. ಶ್ರೀನಿವಾಸಪ್ರಸಾದ್ ಅವರು ಮಾತನಾಡಿ ವಿಶೇಷಚೇತನರಿಗೆ ಉಚಿತವಾಗಿ ಸಾಧನ, ಸಲಕರಣೆ ವಿತರಣೆ ಮಾದರಿ, ಮಾನವೀಯತೆಗೆ ಸ್ಪಂದಿಸುವ ಹಾಗೂ ಹೃದಯ ತಟ್ಟುವಂತಹ ಕಾರ್ಯಕ್ರಮವಾಗಿದೆ. ಸಾಧನ, ಸಲಕರಣೆ ವಿತರಿಸಲು ದೇಶದ ೩೬ ಲೋಕಸಭಾ ಕ್ಷೇತ್ರಗಳು ಆಯ್ಕೆಯಾಗಿವೆ. ಕರ್ನಾಟಕ ರಾಜ್ಯದಲ್ಲಿ ಚಾಮರಾಜನಗರ ಈ ಯೋಜನೆಗೆ ಆಯ್ಕೆಯಾಗಿರುವ ಏಕೈಕ ಲೋಕಸಭಾ ಕ್ಷೇತ್ರವಾಗಿದೆ ಎಂದರು.

ಜಿಲ್ಲೆಯ ಪ್ರತಿ ಹಳ್ಳಿ. ಗ್ರಾಮ ಪಂಚಾಯಿತಿ ಮಟ್ಟದಿಂದಲೂ ವಿಶೇಷಚೇತನರನ್ನು ಗುರುತಿಸಿ ಸಾಧನ, ಸಲಕರಣೆಗಳನ್ನು ವಿತರಿಸಲಾಗುತ್ತಿದ್ದು, ಇವುಗಳ ಸದ್ಭಳಕೆ ಗ್ರಾಮೀಣ ಜನತೆಗೆ ಪೂರ್ಣಪ್ರಮಾಣದಲ್ಲಿ ಆಗಬೇಕು. ದಕ್ಷಿಣ ಭಾರತದಲ್ಲಿಯೇ ಇದು ದೊಡ್ಡಮಟ್ಟದ ಕಾರ್ಯಕ್ರಮವಾಗಿದ್ದು, ಈ ಕಾರ್ಯಕ್ರಮದ ಯಶಸ್ವಿಗೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಶ್ರಮಿಸಿದ್ದಾರೆ. ಕಾರ್ಯಕ್ರಮ ಯಶಸ್ಸು ಆತ್ಮತೃಪ್ತಿ ತಂದಿದೆ ಎಂದು ತಿಳಿಸಿದರು.

ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಚಾಮರಾಜನಗರದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ದೊಡ್ಡಮಟ್ಟದ ವಿಶೇಷ ಕಾರ್ಯಕ್ರಮ ಇದಾಗಿದೆ. ಉಚಿತವಾಗಿ ಸಾಧನ, ಸಲಕರಣೆ ವಿತರಣೆಯಿಂದ ಜಿಲ್ಲೆಯ ವಿಶೇಷಚೇತನರಿಗೆ ಅನುಕೂಲವಾಗಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಶೇಷಚೇತನರಿಗೆ ನೀಡುತ್ತಿರುವ ಮಾಸಾಶನವನ್ನು ಹೆಚ್ಚಿಸಬೇಕು ಎಂದರು.

ಶಾಸಕರಾದ ಎನ್. ಮಹೇಶ್ ಹಾಗೂ ಸಿ.ಎಸ್. ನಿರಂಜನಕುಮಾರ್ ಅವರುಗಳು ಮಾತನಾಡಿ ವಿಶೇಷಚೇತನರಿಗೆ ಸಾಧನ, ಸಲಕರಣೆ ವಿತರಣೆಯು ಆಖಂಡ ಮಾನವೀಯತೆ ಕಾರ್ಯವಾಗಿದೆ. ವಿಶೇಷಚೇತನರನ್ನು ಅವರ ಮನೆಗಳಲ್ಲಿಯೇ ತಿರಸ್ಕಾರದಿಂದ ನೋಡುವುದು ಸಾಮಾನ್ಯ. ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಶೇಷಚೇತನರಲ್ಲಿ ಆತ್ಮವಿಶ್ವಾಸ ತುಂಬಿ ಸಮಾಜದಲ್ಲಿ ಇತರರಂತೆ ಸ್ವಾವಲಂಬಿಗಳಾಗಿ ಬದುಕಲು ಅವಕಾಶ ಮಾಡಿಕೊಟ್ಟಿವೆ ಎಂದರು.

ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶೇಷಚೇತನ ಮಕ್ಕಳಿಗೆ ಆಗತ್ಯ ಸಾಧನ ಸಲಕರಣೆಗಳನ್ನು ಗಣ್ಯರು ವಿತರಣೆ ಮಾಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು