ಚಾಮರಾಜನಗರ: ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಚಿಕ್ಕಪ್ಪನನ್ನು ಕೊಂದು ಮರಕ್ಕೆ ನೇಣು ಹಾಕಿ ಪರಾರಿಯಾಗಿದ್ದ ಇಬ್ಬರು ಹಂತಕರನ್ನು ಬೇಗೂರು ಪೊಲೀಸರು ಬಂದಿಸಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಗರಗನಹಳ್ಳಿ ಗ್ರಾಮದ ಶ್ರೀನಿಧಿ ಹಾಗೂ ಶ್ರೀನಿವಾಸ್ ಬಂಧಿತರು. ಇವರು ಕಳೆದ ಹದಿನೈದು ದಿನಗಳ ಹಿಂದೆ ಗುಂಡ್ಲುಪೇಟೆ ತಾಲೂಕಿನ ಗರಗನಹಳ್ಳಿ ಗ್ರಾಮದ ಜಮೀನಿನಲ್ಲಿ ನಾಗೇಶ್ ಎಂಬಾತನನ್ನು ಕೊಲೆಗೈದು ಮರಕ್ಕೆ ನೇಣು ಹಾಕಿ ಪರಾರಿಯಾಗಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಸರ್ಕಲ್ ಇನ್ಸ್ ಪೆಕ್ಟರ್ ಲಕ್ಷ್ಮೀಕಾಂತ್ ನೇತೃತ್ವದ ಬೇಗೂರು ಪೊಲೀಸರು ತನಿಖೆ ನಡೆಸಿದ್ದರು. ಈ ವೇಳೆ ಆರೋಪಿಗಳು ನಾಗೇಶ್ ನನ್ನು ಕೊಲೆಗೈದು ಮರಕ್ಕೆ ನೇಣು ಹಾಕಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ತಲೆ ಮರೆಸಿಕೊಂಡಿದ್ದ ಆರೋಪಿಗಳಾದ ಶ್ರೀನಿಧಿ ಮತ್ತು ಶ್ರೀನಿವಾಸ್ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ.
ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.