ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಕ್ಯಾಪ್ಟನ್ ಅಭಿಮನ್ಯು ಅರಮನೆ ಆವರಣಕ್ಕೆ ಆಗಮಿಸಿದ್ದು, ದಸರಾ ಸಂಭ್ರಮ ಮತ್ತಷ್ಟು ಕಳೆಗಟ್ಟಿದೆ.
ಲಾರಿಯಲ್ಲಿ ಅರಮನೆಗೆ ಆಗಮಿಸಿದ ಅಭಿಮನ್ಯುವನ್ನು ಅರಮನೆ ಮಂಡಳಿ ವತಿಯಿಂದ ಜಯಮಾರ್ತಾಂಡ ದ್ವಾರದ ಬಳಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ, ಫಲತಾಂಬೂಲ ನೀಡಿ ಬರಮಾಡಿಕೊಳ್ಳಲಾಯಿತು. ಇದೇ ವೇಳೆ ಅಭಿಮನ್ಯು ಅಭಿಮಾನಿಗಳ ಬಳಗದಿಂದ ಅದ್ದೂರಿ ಸ್ವಾಗತ ನೀಡಲಾಯಿತು.
ಅಭಿಮನ್ಯುವಿನ ಆಗಮನದ ಹಿನ್ನೆಲೆಯಲ್ಲಿ ಅಭಿಮಾನಿಗಳು ಬೃಹತ್ ಗಾತ್ರದ ಮೋಸಂಬಿ ಹಾರವನ್ನು ಸಿದ್ಧಪಡಿಸಿದ್ದು, ಗಂಧದಗುಡಿ ಫೌಂಡೇಶನ್ ಹಾಗೂ ಅಭಿಮನ್ಯು ಅಭಿಮಾನಿಗಳ ವತಿಯಿಂದ ಸುಮಾರು 160 ಇಂಚು ಉದ್ದದ, 10 ಕೆ.ಜಿ. ತೂಕದ ಬೃಹತ್ ಪೇಟವನ್ನು ತಯಾರಿಸಲಾಗಿದೆ.
ಈ ಬಾರಿ ದಸರಾ ಜಂಬೂಸವಾರಿಯಲ್ಲಿ ಅಭಿಮನ್ಯು ಅಂಬಾರಿ ಆನೆ ಆಗಿ ಕಾರ್ಯನಿರ್ವಹಿಸುವ ಬದಲಾಗಿ ನಿಶಾನೆಯಾಗಿ ಕಾರ್ಯನಿರ್ವಹಿಸಲಿದ್ದಾನೆ. ಸುಮಾರು 60 ವರ್ಷಗಳ ಬಳಿಕ ಅಂಬಾರಿ ಹೊರುವ ಜವಾಬ್ದಾರಿಯಿಂದ ಅಭಿಮನ್ಯುವನ್ನು ನಿಶಾನೆಯಾಗಿ ಬಳಸಲಾಗುತ್ತಿದೆ.
ಇದೇ ವೇಳೆ, ಈ ಬಾರಿಯ ದಸರಾ ಅಭಿಮನ್ಯುವಿನ ಕೊನೆಯ ದಸರಾ ಎಂಬ ಕಾರಣಕ್ಕೆ ಅಭಿಮಾನಿಗಳಲ್ಲಿ ವಿಶೇಷ ಭಾವನಾತ್ಮಕತೆ ಮೂಡಿದೆ. ಅಭಿಮನ್ಯುವಿನ ಆಗಮನದ ಸಂದರ್ಭದಲ್ಲಿ ಅರಮನೆ ಆವರಣದಲ್ಲಿ ಅಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.

