ಮೈಸೂರು: ಬಾಕಿ ಇರುವ ಬಾಡಿಗೆ ಕಟ್ಟುವಂತೆ ಒತ್ತಾಯಿಸಿದ ಮಾಲೀಕನ ಮನೆ ಬಾಗಿಲಿಗೆ ಬಾಡಿಗೆದಾರ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಜನತಾ ಬಡಾವಣೆಯಲ್ಲಿ ನಡೆದಿದೆ.

ದರ್ಶನ್ ಎಂಬಾತನೇ ಬೆಂಕಿ ಹಚ್ಚಿದ ಆರೋಪಿ. ಕುಮಾರ್ ಎಂಬುವರ ಮನೆಗೆ ಬೆಂಕಿ ಹಚ್ಚಿದ್ದಾನೆ. ದರ್ಶನ್ ತಮ್ಮ ಸುಮಿತ್ ಎಂಬಾತ ಕುಮಾರ್ ರವರ ಮನೆಯಲ್ಲಿ ಕೊಠಡಿ ಬಾಡಿಗೆ ಪಡೆದಿದ್ದ. ಎರಡು ತಿಂಗಳ ಬಾಕಿ ಉಳಿಸಿಕೊಂಡು ಕೊಠಡಿ ಖಾಲಿ ಮಾಡಿದ್ದ. ಬಾಕಿ ಇರುವ ಬಾಡಿಗೆ ಹಣ ನೀಡುವಂತೆ ಕುಮಾರ್ ಒತ್ತಾಯಿಸುತ್ತಿದ್ದರು.

ಸುಮಿತ್ ಬಾಡಿಗೆಗೆ ಸತಾಯಿಸಿದಾಗ ಅಣ್ಣ ದರ್ಶನ್ ಗೆ ಕುಮಾರ್ ಮಾಹಿತಿ ನೀಡಿದ್ದಾರೆ. ಈ ವಿಚಾರದಲ್ಲಿ ದರ್ಶನ್ ಹಾಗೂ ಕುಮಾರ್ ನಡುವೆ ಜಗಳ ಆಗಿದೆ.

ಅದೇ ರಾತ್ರಿ ದರ್ಶನ್ ಪೆಟ್ರೋಲ್ ತಂದು ಕುಮಾರ್ ಮನೆಯ ಬಾಗಿಲಿಗೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಘಟನೆಯಿಂದ ಕುಮಾರ್ ಮನೆಯವರು ಭಯಭೀತರಾಗಿದ್ದಾರೆ. ದರ್ಶನ್ ವಿರುದ್ದ ಕುಮಾರ್ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.