ಉಡುಪಿ: ಪರ್ಕಳ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ಮಹಿಷಮರ್ದಿನಿ ಅಯ್ಯಪ್ಪ ದೇವಸ್ಥಾನದ ಬೆಳಿಗ್ಗೆಯ ವಾರ್ಷಿಕ ರಥೋತ್ಸವವು ಪಾಡಿಗಾರು ಶ್ರೀನಿವಾಸ ತಂತ್ರಿಯವರ ನೇತೃತ್ವದಲ್ಲಿ ಜರಗಿತು.
ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಪ್ರಧಾನ ಹೋಮ, ಕಲಶಾಭಿಷೇಕ, ರಥಹೋಮ, ರಥ ಸಂಪ್ರೋಕ್ಷಣೆ, ಕೊಡಿಪೂಜೆ, ಮಹಾಪೂಜೆ, ರಥಾರೋಹಣ ನಡೆಯಿತು.

ಬಳಿಕ ದೇವರ ಮೂರ್ತಿಯನ್ನು ರಥದಲ್ಲಿ ಇರಿಸಿ ಪೂಜೆ ನಡೆಸಲಾಯಿತು. ಬಳಿಕ ಭಕ್ತರು ರಥವನ್ನು ಎಳೆದು ಭಕ್ತಿಪರಾಕಾಷ್ಠೆ ಮೆರೆದರು. ಬಳಿಕ ನಡೆದ ಸಾರ್ವಜನಿಕ ಅನ್ನ ಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಭೋಜನ ಪ್ರಸಾದ ಸ್ವೀಕರಿಸಿದರು.
ಮನ್ಮಹಾರಥೋತ್ಸವ ಪ್ರಯುಕ್ತ ವಾಲಿಬಾಲ್ ಫ್ರೆಂಡ್ಸ್, ಪರ್ಕಳ ಇವರ ವತಿಯಿಂದ ಇಂದು ರಾತ್ರಿ 9.30ರಿಂದ ತುಳುನಾಡ ಗಾನ ಗಂಧರ್ವ ಬಿರುದಾಂಕಿತ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ ‘ಸಂಗೀತ ಗಾನ ಸಂಭ್ರಮ’ ನಡೆಯಲಿದೆ.
ಈ ಸಂದರ್ಭದಲ್ಲಿ ರಾಷ್ಟ್ರೀಯ ಮಟ್ಟದ ಕರಾಟೆ ಪಟು ಛಾಯಾ ಎಸ್ ಪೂಜಾರಿ ಹೆರ್ಗ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 12ನೇ ಸ್ಥಾನ ಪಡೆದ ನಿರಂಜನ್ ಚೆನ್ನದಾಸರ್ ಹಾಗೂ ಭಾರತೀಯ ಸೇನೆಗೆ ಆಯ್ಕೆಯಾದ ಅಮೋಘ್ ಭಂಡಾರಿ ಅವರನ್ನು ಸನ್ಮಾನಿಸಲಾಗುವುದು.

