ಉಡುಪಿ: ಉಡುಪಿ ಪೊಲೀಸರ ಭದ್ರ ಸರ್ಪಗಾವಲಿನಲ್ಲಿ ಕಳೆದ 15 ದಿನಗಳಿಂದ ಬಾರಕೂರು ಸಮೀಪದ ಹೊಸಾಳ ಗ್ರಾಮದ ನಾಗರಮಠದಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಹಾಗೂ ಅಕ್ರಮ ಮರಳುಗಾರಿಕೆಯಿಂದ ತಮ್ಮ ಬದುಕು ಸಂಕಷ್ಟಕ್ಕೆ ಸಿಲುಕಿದ್ದು, ಕೂಡಲೇ ಮರಳುಗಾರಿಕೆಯನ್ನು ನಿಲ್ಲಿಸಿ ಸಂತ್ರಸ್ಥರಾಗಿರುವ ಗ್ರಾಮದ 150ಕ್ಕೂ ಅಧಿಕ ಮಂದಿಯನ್ನು ರಕ್ಷಿಸುವಂತೆ ಆಗ್ರಹಿಸಿ ನಾಗರಮಠದ ಕೃಷಿಕರು ಹಾಗೂ ಸಂತ್ರಸ್ಥರು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ಧಿಷ್ಟಾವಧಿಯ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದಾರೆ.
ತಮ್ಮ ಬೇಡಿಕೆಯನ್ನು ಈಡೇರಿಸಿ ಅವೈಜ್ಞಾನಿಕವಾಗಿ ಹಾಗೂ ಅಕ್ರಮವಾಗಿ ನಡೆಯುತ್ತಿರುವ ಮರಳುಗಾರಿಕೆಯನ್ನು ನಿಲ್ಲಿಸುವಂತೆ ಕಳೆದ ಮೂರು ದಿನಗಳಿಂದ ನಾಗರಮಠದ ಮರಳುಗಾರಿಕಾ ಪ್ರದೇಶದಲ್ಲಿ ಧರಣಿ ಪ್ರತಿಭಟನೆ ನಡೆಸಿದ್ದ ಗ್ರಾಮಸ್ಥರು ಇದೀಗ ಮಣಿಪಾಲದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಬೇಡಿಕೆ ಈಡೇರುವವರೆಗೂ ತಮ್ಮ ಪ್ರತಿಭಟನೆಯನ್ನು ಮುಂದುವರಿಸುವ ದೃಢ ಸಂಕಲ್ಪದಿಂದ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದಾರೆ.
ಬೇಡಿಕೆ ಈಡೇರುವವರೆಗೂ ಪ್ರತಿದಿನ ಕಚೇರಿ ಅವಧಿಯಲ್ಲಿ ಅಂದರೆ ಬೆಳಗ್ಗೆ 10ರಿಂದ ಸಂಜೆ 5ಗಂಟೆಯವರೆಗೆ ಗ್ರಾಮದ ಕೃಷಿಕರು, ಹೆಂಗಸರು, ಮಕ್ಕಳು ಸೇರಿದಂತೆ ಎಲ್ಲರೂ ಧರಣಿಯಲ್ಲಿ ಕೂರಲಿದ್ದೇವೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿರುವ ಹೋರಾಟಗಾರ ಚಂದ್ರ ಕಾಂಚನ್ ತಿಳಿಸಿದರು.
ಗ್ರಾಮದ ಮಹಿಳೆಯರು ಸೇರಿದಂತೆ ಪ್ರತಿಭಟನಕಾರರು ಜಿಲ್ಲಾಡಳಿತ ಹಾಗೂ ಜಿಲ್ಲಾಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮರಳುಗಾರಿಕೆಯಿಂದ ತೊಂದರೆಗೊಳಗಾದ ಗ್ರಾಮಸ್ಥರಿಗೆ ರಕ್ಷಣೆ ನೀಡಬೇಕಿದ್ದ ಜಿಲ್ಲಾಡಳಿತ, ಮರಳುಗಾರಿಕೆಯ ಗುತ್ತಿಗೆದಾರರ ಹಿತಾಸಕ್ತಿ ಕಾಪಾಡಲು ಕಟಿಬದ್ಧವಾಗಿರುವಂತೆ ವರ್ತಿಸುತಿದ್ದು, ನಾಗರಮಠವೆಂಬ ಪುಟ್ಟ ಗ್ರಾಮದಲ್ಲಿ 100ರಿಂದ 150 ಮಂದಿ ಪೊಲೀಸರ ಭದ್ರಕೋಟೆಯ ನಡುವೆ ಮರಳುಗಾರಿಕೆ ನಡೆಸಲು ಅವಕಾಶ ಮಾಡಿಕೊಟ್ಟಿದೆ ಎಂದು ಧರಣಿ ಕುಳಿತ ಮಹಿಳೆಯರು ಒಕ್ಕೊರಲಿನಿಂದ ದೂರಿದರು.
“ಅವೈಜ್ಞಾನಿಕ ಹಾಗೂ ಅಕ್ರಮ ಮರಳುಗಾರಿಕೆಯಿಂದ ನಾವು ನಮ್ಮ ಹಿರಿಯರಿಂದ ಬಂದ ಬದುಕಿನ ಆಧಾರವಾದ ಕೃಷಿಭೂಮಿ ಕಳೆದುಕೊಳ್ಳುವ ಭೀತಿ ಎದುರಿಸುತಿದ್ದು, ಇದನ್ನು ವಿರೋಧಿಸಿದ ತಮ್ಮ ವಿರುದ್ಧ ದಬ್ಬಾಳಿಕೆ ನಡೆಯು ತ್ತಿದೆ. ಹೆಂಗಸರು ಮಕ್ಕಳು ಸೇರಿದಂತೆ ಈಗಾಗಲೇ 25 ಮಂದಿ ಕೃಷಿಕರು, ಗ್ರಾಮಸ್ಥರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಇನ್ನೂ 20-22 ಮಂದಿಯ ವಿರುದ್ಧ ಪ್ರಕರಣ ದಾಖಲಿಸುವ ಬೆದರಿಕೆಯನ್ನು ಗುತ್ತಿಗೆದಾರರ ಬೆಂಬಲಿಗರು ಹಾಕುತಿದ್ದಾರೆ ಎಂದು ಗಿರಿಜಾ ಮರಕಾಲ ಆರೋಪಿಸಿದರು.
ಕಳೆದ ಡಿಸೆಂಬರ್ ತಿಂಗಳಿನಿಂದಲೇ ಮರಳುಗಾರಿಕೆ ನಡೆಸಲು ಸಿದ್ಧತೆ ನಡೆದರೂ, ಗ್ರಾಮಸ್ಥರ ಉಗ್ರ ಪ್ರತಿಭಟನೆ ಯಿಂದ ಅದನ್ನು ನಿಲ್ಲಿಸಲಾಗಿತ್ತು. ಆದರೆ 15 ದಿನಗಳಿಂದ 100-150ಕ್ಕೂ ಅಧಿಕ ಮಂದಿ ಪೊಲೀಸರ ಬೆಂಗಾವಲಿನೊಂದಿಗೆ ಮರಳುಗಾರಿಕೆ ನಡೆಯುತ್ತಿದೆ. ರಾತ್ರಿಯೂ ಗ್ರಾಮದಲ್ಲೇ ಇರುವ ಪೊಲೀಸರು ಮರಳು ಕಾರ್ಮಿಕರಿಗೆ ರಕ್ಷಣೆ ನೀಡುತಿದ್ದಾರೆ. ಸಂತ್ರಸ್ಥರಿಗೆ, ಮಹಿಳೆಯರಿಗೆ, ಬಡವರ ರಕ್ಷಣೆಗಿರುವ ಪೊಲೀಸರು, ಜಿಲ್ಲಾಡಳಿತದ ಆದೇಶದಂತೆ ನಾಗರಮಠದಲ್ಲಿ ದುಡ್ಡಿದ್ದವರ ರಕ್ಷಣೆಗೆ ನಿಂತಿರುವ ವಿಪರ್ಯಾಸವನ್ನು ನೀವು ಇಲ್ಲಿ ಕಾಣಬಹುದು ಎಂದು ಚಂದ್ರ ಕಾಂಚನ್ ಹಾಗೂ ಕೃಷ್ಣ ಬಂಗೇರ ಆಕ್ರೋಶ ಹೊರಹಾಕಿದರು.
ನಮ್ಮ ಬೇಡಿಕೆಯನ್ನು ಜಿಲ್ಲಾಡಳಿತ ಒಪ್ಪಿ ಮರಳುಗಾರಿಕೆಯನ್ನು ನಿಲ್ಲಿಸುವ ಖಚಿತ ಆಶ್ವಾಸನೆ ನೀಡುವವರೆಗೆ ನಮ್ಮ ಅನಿರ್ಧಿಷ್ಟಾವಧಿ ಹೋರಾಟ ಮುಂದುವರಿಯಲಿದೆ ಎಂದು ಪ್ರತಿಭಟನಕಾರರು ಎಚ್ಚರಿಕೆ ನೀಡಿದರು.

