ಮಳವಳ್ಳಿ: ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಮತ್ತೊಂದು ಬೈಕ್ ಡಿಕ್ಕಿ ಹೊಡೆದ ಪರಿಣಾಮ ಗ್ರಾ.ಪಂ. ಸದಸ್ಯ ಗಂಭೀರ ಗಾಯಗೊಂಡು ಸಾವನ್ನಪ್ಪಿದ ಘಟನೆ ಹಲಗೂರು ಪೊಲೀಸ್ ಠಾಣಾ ವ್ಯಾಪ್ತಿಯ ಕನಕಪುರ ಮುಖ್ಯ ರಸ್ತೆಯಲ್ಲಿ ನಡೆದಿದೆ.
ಬಸಾಪುರ ಗ್ರಾ.ಪಂ. ಸದಸ್ಯ ದೇವರಾಜು ಅವಘಡದಲ್ಲಿ ಸಾವನ್ನಪ್ಪಿದ ದುರ್ದೈವಿ. ಇವರು ತಾಲೂಕಿನ ಗೂಂಡಾಪುರದ ಗ್ರಾಮದ ನಿವಾಸಿಯಾಗಿದ್ದು, ಕೆಲಸ ನಿಮಿತ್ತ ಹಲಗೂರಿಗೆ ಹೋಗಿ ಸ್ವಗ್ರಾಮಕ್ಕೆ ಹಿಂತಿರುಗುತ್ತಿದ್ದಾಗ ಹೆದ್ದಾರಿಯ ಜೆ.ಪಿ.ಡಾಬಾದ ಬಳಿ ಹಿಂಬದಿಯಿಂದ ವೇಗವಾಗಿ ಬಂದ ಬೈಕೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ದೇವರಾಜು ನೆಲಕ್ಕೆ ಬಿದ್ದಿದ್ದು ಗಂಭೀರ ಗಾಯವಾಗಿದೆ. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹಲಗೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.