News Karnataka Kannada
Thursday, May 02 2024
ಮೈಸೂರು

ಕುಂತಿಬೆಟ್ಟದಲ್ಲಿ ರೈತರ ತರಬೇತಿ ಕಾರ್ಯಾಗಾರ

New Project 2021 09 24t201902.865
Photo Credit :

ಪಾಂಡವಪುರ : ಕುಂತಿಬೆಟ್ಟದಲ್ಲಿ ವಿಜ್ಞಾನದ ಕಡೆಗೆ ಅನ್ನದಾತನ ನಡಿಗೆ ಘೋಷವಾಕ್ಯದಡಿ ಮಂಡ್ಯ ಜಿಲ್ಲೆಯ ಪ್ರಗತಿಪರ ರೈತರು ಆಯೋಜಿಸಿದ್ದ ರೈತರ ತರಬೇತಿ ಕಾರ್ಯಾಗಾರ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿದ ಅವರು, ರೈತನ ಬದುಕು ಸಂಪೂರ್ಣ ನಷ್ಟದಲ್ಲಿದೆ. ಕಬ್ಬು, ಭತ್ತವನ್ನು ಮಾತ್ರ ಈ ಭಾಗದಲ್ಲಿ ಹೆಚ್ಚಾಗಿ ಬೆಳೆಯುತ್ತಿದ್ದು ರೈತ ಬೆಳೆದ ಬೆಲೆಗೆ ಸೂಕ್ತ ಬೆಲೆ ಸಿಗದ ಕಾರಣ ಕೃಷಿ ಉದ್ಯಮ ನಷ್ಟದಲ್ಲಿದೆ. ಯಾವುದೇ ಒಬ್ಬ ವ್ಯಕ್ತಿ ಕೃಷಿಯನ್ನು ಬಿಟ್ಟು ಬೇರೆ ಬೇರೆ ಉದ್ಯಮ ನಡೆಸಿದರೆ ಅದರಲ್ಲಿ ನಷ್ಟವಾದರೆ ಅದನ್ನು ಬಿಟ್ಟು ಬೇರೆ ಉದ್ಯಮ ಹಿಡಿಯುತ್ತಾನೆ. ಆದರೆ, ರೈತ ಮಾತ್ರ ನಷ್ಟವಾದರೂ ಕೃಷಿಯನ್ನು ಬಿಟ್ಟಿಲ್ಲ. ತನ್ನ ಉದ್ಯೋಗವನ್ನು ಒಂದು ಧರ್ಮವೆಂದು ತಿಳಿದು ಬೇಸಾಯ ಮಾಡುತ್ತಿದ್ದಾನೆ ಎಂದರು.

ಪ್ರಗತಿಪರ ರೈತ ಹಾಡ್ಯ ರಮೇಶ್‌ರಾಜು ಮಾತನಾಡಿ, ಕೃಷಿ ಇಂದಿಗೂ ಲಾಭದಾಯಕ ಉದ್ಯಮ. ಆದರೆ ಅಜ್ಞಾನದಿಂದ ರೈತ ನಷ್ಟದಲ್ಲಿದ್ದಾನೆ. ನಷ್ಟದ ಕಾರಣದಿಂದ ಬಹುತೇಕ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಒಂದು ಎಕರೆ ಭತ್ತ ಬೆಳೆಯಲು ಭೂಮಿ ಬೆಲೆಗೆ ಬಡ್ಡಿ, ರೈತನ ದುಡಿಮೆ ಸೇರಿ ಒಟ್ಟಾರೆ ಒಂದು ಲಕ್ಷ ಹಣ ಖರ್ಚಾಗುತ್ತದೆ. ಸರಾಸರಿ 25 ಕ್ವಿಂಟಾಲ್ ಭತ್ತ ಬೆಳೆದರೆ ಗರಿಷ್ಠ 40 ಸಾವಿರ ರೂ. ಮಾತ್ರ ಸಿಗುತ್ತದೆ. ಇದರಿಂದ 60 ಸಾವಿರ ರೂ. ಹಣ ರೈತನಿಗೆ ನಷ್ಟವಾಗುತ್ತದೆ. ಇದೇ ರೀತಿ ಒಂದು ಎಕರೆ ಕಬ್ಬು ಬೆಳೆಯಲು 2 ಲಕ್ಷ ರೂ. ಖರ್ಚಾದರೆ 1 ಲಕ್ಷ ರೂ. ಮಾತ್ರ ನಮಗೆ ಸಿಗುತ್ತದೆ. ಇದಕ್ಕೆ ಕಾರಣ ರೈತ ಇಂದು ಪರಾವಲಂಬಿಯಾಗಿದ್ದಾನೆ ಎಂದರು.

ರೈತರ ಮನೆಯ ಮುಂದಿದ್ದ ಹಸು, ಎಮ್ಮೆ, ಕೊಟ್ಟಿಗೆ ಗೊಬ್ಬರ ಮಾಯವಾಗಿದೆ. ರಾಸಾಯನಿಕ ಗೊಬ್ಬರ, ಕೀಟನಾಶಕಕ್ಕೆ ಮರುಳಾದ ರೈತ ತನ್ನ ಕೃಷಿ ಚಟುವಟಿಕೆಯ ಪ್ರತಿಯೊಂದು ಕೆಲಸಕ್ಕೂ ಬೇರೆಯವರನ್ನು ಅವಲಂಬಿಸುವುದು ಹೆಚ್ಚಾಗಿ ಕೃಷಿ ವೆಚ್ಚವೂ ಜಾಸ್ತಿಯಾಗಿದೆ. ಇದರಿಂದ ನಮ್ಮ ರೈತ ಇಂದು ನಷ್ಟದ ಹಾದಿ ಹಿಡಿದಿದ್ದಾನೆ. ಸ್ವಾತಂತ್ರ್ಯ ನಂತರ ರೈತರ ಮನೆಗಳಲ್ಲಿ ಭಾರಿ ಬದಲಾವಣೆಗಳಾಗಿವೆ. ಬುದ್ಧಿವಂತ ಮಗನನ್ನು ಉದ್ಯೋಗಕ್ಕೆ ಕಳಿಸಿ ದಡ್ಡ ಮಗನನ್ನು ಬೇಸಾಯಕ್ಕೆ ತೊಡಗಿಸಿಕೊಂಡಿರುವುದು ಕೃಷಿ ನಷ್ಟಕ್ಕೆ ಕಾರಣ. ನೈಸರ್ಗಿಕ ಮತ್ತು ಸಮಗ್ರ ಕೃಷಿಯಿಂದ ಅನೇಕ ರೈತರು ಲಾಭಗಳಿಸುತ್ತಿದ್ದಾರೆ. ಒಂದು ಕಾಳು ಭತ್ತದಿಂದ 10 ಸಾವಿರ ಕಾಳು, ಒಂದು ಕಾಳು ರಾಗಿಯಿಂದ ಒಂದು ಲಕ್ಷ ಕಾಳು ರಾಗಿ ಪಡೆಯುವ ಕೃಷಿ ಉದ್ಯಮ ಎಂದಿಗೂ ಸೋತಿಲ್ಲ. ರೈತ ತನ್ನ ಅಜ್ಞಾನದಿಂದ ಸೋತಿದ್ದಾನೆ ಎಂದರು.

ಇಂದಿಗೂ ನಮ್ಮ ಎಲ್ಲ ಉತ್ಪನ್ನಗಳು ನಮ್ಮ ಸ್ಥಳದಲ್ಲಿಯೇ ನಾವು ನಿಗದಿಪಡಿಸಿದ ಬೆಲೆಗೆ ಮಾರಾಟ ಮಾಡುತ್ತಿದ್ದೇವೆ. ಇದಕ್ಕೆ ವಿಷರಹಿತ ನಮ್ಮ ಉತ್ಪನ್ನಗಳ ಗುಣಮಟ್ಟ ಕಾರಣವಾಗಿದೆ. ತಮ್ಮ ಮಾರುಕಟ್ಟೆಯನ್ನು ತಾವೇ ಕಂಡುಕೊಳ್ಳುವವರೆಗೆ ರೈತನಿಗೆ ನಷ್ಟ ಕಟ್ಟಿಟ್ಟಬುತ್ತಿ. 1937ರಲ್ಲಿ ಪ್ರಾರಂಭವಾದ ಸರ್ಕಾರಿ ಸ್ವಾಮ್ಯದ ಮೈಷುಗರ್ ಸಕ್ಕರೆ ಕಾರ್ಖಾನೆ ಇಂದಿಗೂ ನಷ್ಟದಲ್ಲಿದೆ. ಇದಕ್ಕೆ ಇಲ್ಲಿನ ರಾಜಕಾರಣಿಗಳ ಭ್ರಷ್ಟಾಚಾರವೇ ಕಾರಣ. ಸರ್ಕಾರ ಇದನ್ನು ಖಾಸಗೀಕರಣಕ್ಕೆ ಪ್ರಯತ್ನಿಸಿದರೆ ಭ್ರಷ್ಟಾಚಾರಕ್ಕೆ ಅವಕಾಶ ಸಿಗಲಾರದು ಎಂದು ಸರ್ಕಾರದ ಯೋಜನೆಗೆ ರಾಜಕಾರಣಿಗಳು ಅಡ್ಡಿ ಪಡಿಸುತ್ತಿದ್ದಾರೆ. ಖಾಸಗಿಯವರಿಗೆ ಗುತ್ತಿಗೆಗೆ ನೀಡಿದರೆ ರೈತರ ಕಬ್ಬಿಗೆ ಸೂಕ್ತ ಬೆಲೆ ಸಿಗುತ್ತದೆ. ಕಾಲಕಾಲಕ್ಕೆ ಕಾರ್ಖಾನೆ ನಡೆದು ರೈತರ ಆರ್ಥಿಕ ಬದುಕು ಉತ್ತಮವಾಗುತ್ತದೆ ಎಂದರು.

ಕಾರ್ಯಕ್ರಮವನ್ನು ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಆರ್.ಧನ್ಯಕುಮಾರ್ ಉದ್ಘಾಟಿಸಿದರು. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರಿಗೆ ಸಿಗುವ ಸೌಲಭ್ಯಗಳ ಬಗ್ಗೆ ರೈತ ಜಯರಾಮು ಮಾರ್ಗದರ್ಶನ ನೀಡಿದರು.

ಚಿಕ್ಕಾಡೆ ಗ್ರಾ.ಪಂ ಉಪಾಧ್ಯಕ್ಷೆ ಅಕ್ಷತಾ ಅರವಿಂದ್, ಯುವ ಕಾಂಗ್ರೆಸ್ ಅಧ್ಯಕ್ಷ ರಮೇಶ್, ಪ್ರಗತಿಪರ ರೈತರಾದ ಮಲ್ಲೇಶ್, ಬಸವರಾಜು, ಜಯರಾಮು, ಆನಂದ್, ಸೂಗೇಗೌಡ, ವಿಜಯಕುಮಾರ್, ದೇವರಾಜು, ಸ್ವಾಮಿ, ಚನ್ನರಾಜೇಗೌಡ, ಅಭಿಲಾಷ್, ಜಗದೀಶ್, ಶಿವಪ್ರಕಾಶ್ ಇತರರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು