News Karnataka Kannada
Thursday, May 16 2024
ಮೈಸೂರು

ಈ ಬಾರಿಯ ಮೈಸೂರು ದಸರಾ ಹೇಗಿರಲಿದೆ?

Photo Credit :

ಮೈಸೂರು: ವಿಶ್ವವಿಖ್ಯಾತಿಯ ಮೈಸೂರು ದಸರಾ ಸಡಗರವನ್ನು ಕೊರೊನಾ ನುಂಗಿ ಹಾಕಿದೆ. ಹೀಗಾಗಿ ಈ ಬಾರಿ ಸರಳ ಮತ್ತು ಸಾಂಪ್ರದಾಯಿಕ ದಸರಾ ಆಚರಣೆಗೆ ಸರ್ಕಾರ ಒತ್ತು ನೀಡುತ್ತಿದೆ. ಹೀಗಾಗಿ ಹಿಂದಿನ ದಸರಾದಲ್ಲಿ ಇರುತ್ತಿದ್ದ ಯಾವ ಸಂಭ್ರಮವೂ ಕಾಣಿಸಲಾರದು.

ಮೈಸೂರು ದಸರಾಕ್ಕೆ ಮೆರಗು ತರುವುದು ವಿದ್ಯುದ್ದೀಪ ಅಲಂಕಾರ. ಇದು ಈ ಬಾರಿಯೂ ಇರಲಿದೆ. ಉಳಿದಂತೆ ಯುವ ದಸರಾ, ಆಹಾರಮೇಳ, ವಸ್ತುಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುದಿಲ್ಲ. ಆದರೆ ಸಂಪ್ರದಾಯಬದ್ಧವಾಗಿ ನಡೆದುಕೊಂಡು ಬಂದಂತಹ ಕಾರ್ಯಕ್ರಮಗಳೆಲ್ಲವೂ ಈ ಬಾರಿಯೂ ನಡೆಯಲಿದೆ. ಆದರೆ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ.

ಈ ಬಾರಿಯ ದಸರಾ ಸೆಪ್ಟೆಂಬರ್ 13 ರಂದು ಬೆಳಿಗ್ಗೆ 9.30ಕ್ಕೆ ಗಜಪಡೆ ಪೂಜೆ ಮಾಡಿ, ವೀರನಹೊಸಹಳ್ಳಿಯಿಂದ ಎಂಟು ಆನೆಗಳ ಗಜಪಯಣದೊಂದಿಗೆ ಆರಂಭವಾಗಲಿದೆ. ಗಜಪಯಣ ನಡೆಯಿತೆಂದರೆ ದಸರಾಕ್ಕೆ ಆರಂಭದ ಕಳೆ ಬಂದಂತೆಯೇ.. ವೀರನ ಹೊಸಹಳ್ಳಿಯಿಂದ ಬಂದ ಆನೆಗಳು ಅಶೋಕಪುರಂನಲ್ಲಿರುವ ಅರಣ್ಯಭವದಲ್ಲಿ ವಾಸ್ತವ್ಯ ಹೂಡಲಿದ್ದು, ಬಳಿಕ ಸೆಪ್ಟೆಂಬರ್ 16 ರಂದು ಮೈಸೂರು ಅರಮನೆ ಬಳಿ ಅವುಗಳನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಲಾಗುತ್ತದೆ. ಆ ನಂತರ ಅರಮನೆ ಆವರಣದಲ್ಲಿಯೇ ಬೀಡು ಬಿಡುವ ಅವು ಪ್ರತಿದಿನ ತಾಲೀಮು ನಡೆಸಲಿವೆ.

ಈ ನಡುವೆ ಅಕ್ಟೋಬರ್ 7ರಂದು ಮೈಸೂರು ದಸಾರಕ್ಕೆ ಚಾಮುಂಡಿಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವುದರೊಂದಿಗೆ ವಿಧ್ಯುಕ್ತ ಚಾಲನೆ ದೊರೆಯಲಿದೆ. ಅಂದೇ ಅರಮನೆಯಲ್ಲಿ ಖಾಸಗಿ ದರ್ಭಾರ್ ಆರಂಭವಾಗಲಿದೆ. ಬಳಿಕ ಅ. 15 ರವರೆಗೆ ದಸರಾ ಮಹೋತ್ಸವ ಸಂಬಂಧ ವಿವಿಧ ಸಾಂಕ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಪ್ರತಿದಿನ ರಾತ್ರಿ ಇಡೀ ಮೈಸೂರು ವಿದ್ಯುದ್ದೀಪದ ಬೆಳಕಿನಲ್ಲಿ ಮಿಂದೇಳಲಿದೆ.

ಅಕ್ಟೋಬರ್ 7ರಿಂದ 9 ದಿನಗಳ ಕಾಲ ಅರಮನೆ ಆವರಣದಲ್ಲಿ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಅಕ್ಟೋಬರ್ 15ರ ಸಂಜೆ 4.36ಕ್ಕೆ ಮೈಸೂರು ಅರಮನೆ ಆವರಣದಲ್ಲಿ ನಂದಿ ಪೂಜೆ ನೆರವೇರಲಿದ್ದು ಬಳಿಕ ಸಂಜೆ 5ಕ್ಕೆ ಅರಮನೆ ಆವರಣದಲ್ಲಿ ಸರಳ ಹಾಗೂ ಸಾಂಪ್ರದಾಯಿಕವಾಗಿ ಜಂಬೂಸವಾರಿ ನಡೆಯುವುದರೊಂದಿಗೆ 2021ರ ಮೈಸೂರು ದಸರಾಕ್ಕೆ ತೆರೆ ಬೀಳಲಿದೆ.

ಇದಾದ ಬಳಿಕ ಅಕ್ಟೋಬರ್ 16ರಂದು ಜಂಬೂಸವಾರಿಯಲ್ಲಿ ಪಾಲ್ಗೊಂಡಿದ್ದ ಗಜಪಡೆಯನ್ನು ಅವುಗಳ ಸ್ವಸ್ಥಾನ ಆನೆಶಿಬಿರಗಳಿಗೆ ಬೀಳ್ಕೊಡಲಾಗುತ್ತದೆ. ಅಲ್ಲಿಗೆ ಈ ಬಾರಿಯ ದಸರಾ ಮುಗಿದಂತೆಯೇ…

ಮೊದಲೆಲ್ಲ ಹಾಗಿರಲಿಲ್ಲ. ದಸರಾ ಮುಗಿದರೂ ಅದರ ಸಂಭ್ರಮ ಬಹುದಿನಗಳ ಕಾಲ ಹಾಗೆಯೇ ಉಳಿದಿರುತ್ತಿತ್ತು. ದಸರಾಕ್ಕೆ ಬಂದ ದೂರದ ಅತಿಥಿಗಳು ಒಂದಷ್ಟು ದಿನ ನಗರದಲ್ಲಿಯೇ ವಾಸ್ತವ್ಯ ಹೂಡುತ್ತಿದ್ದರು. ಹೀಗಾಗಿ ನಗರದ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ದಂಡು ಕಾಣಿಸುತ್ತಿತ್ತು. ಜತೆಗೆ ಡಿಸೆಂಬರ್ ತನಕವೂ ದಸರಾ ವಸ್ತುಪ್ರದರ್ಶನ ಇರುತಿದ್ದರಿಂದ ಜನ ಅಲ್ಲಿಗೆ ತೆರಳಿ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿ, ಇಷ್ಟವಾದ ತಿಂಡಿ ತಿನಿಸುಗಳನ್ನು ಸೇವಿಸಿ, ವಿವಿಧ ಆಟಗಳನ್ನು ಆಡಿ ಬರುತ್ತಿದ್ದರು. ಕಳೆದ ವರ್ಷದಿಂದ ದಸರಾ ಕಳೆಯುತ್ತಿದ್ದಂತೆಯೇ ಇಡೀ ಮೈಸೂರು ಮೌನಕ್ಕೆ ಜಾರಿ ಬಿಡುತ್ತದೆ. ಬಿಕೋ ಎನ್ನುತ್ತದೆ…

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು