ಮೈಸೂರು: ಮೈಸೂರು ದಸರಾ ವೇಳೆ ಪ್ರಸ್ತಾವಿತ ಕಂಬಳ ಆಯೋಜನೆಗೆ ವಿರೋಧ ವ್ಯಕ್ತಪಡಿಸಿರುವ ಹಲವು ಸಂಘಟನೆಗಳ ಸದಸ್ಯರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಧ್ಯಪ್ರವೇಶಿಸಿ ಈ ಪ್ರಸ್ತಾವನೆಯನ್ನು ವಿರೋಧಿಸಬೇಕು ಎಂದು ಆಗ್ರಹಿಸಿದ್ದಾರೆ. ನೀರಿನ ಕೊರತೆ, ಬರ ಪರಿಸ್ಥಿತಿ ಮತ್ತು ಪರಿಸರ ಹಾನಿಯ ಆತಂಕಗಳನ್ನು ಅವರು ಕಾರಣವಾಗಿ ನೀಡಿದ್ದಾರೆ.
ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದ ನಿಯೋಗವು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಮೈಸೂರಿನಲ್ಲಿ ಸಾಂಪ್ರದಾಯಿಕ ಕೋಣಗಳ ಓಟ ನಡೆಸುವ ಪ್ರಸ್ತಾವನೆಯನ್ನು ಹಿಂಪಡೆಯುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸಲಹೆ ನೀಡಬೇಕೆಂದು ಮನವಿ ಮಾಡಿದ ಕೆಲವೇ ದಿನಗಳಲ್ಲಿ ಈ ಮನವಿ ಬಂದಿದೆ.
ಸೆಪ್ಟೆಂಬರ್ 7, 2026 ರಂದು ಬರೆದ ಪತ್ರದಲ್ಲಿ ಜಂಟಿ ಕ್ರಿಯಾ ಸಮಿತಿಯ ಸದಸ್ಯರು ರಾಹುಲ್ ಗಾಂಧಿ ಅವರ ಮಧ್ಯಪ್ರವೇಶವನ್ನು ಕೋರಿದ್ದು, ಪ್ರಸ್ತಾವನೆಯನ್ನು ಕೈಬಿಡುವಂತೆ ಮುಖ್ಯಮಂತ್ರಿಗಳಿಗೆ ಸಲಹೆ ನೀಡಬೇಕೆಂದು ವಿನಂತಿಸಿದ್ದಾರೆ.
ಸಂಸ್ಕೃತಿ ಪ್ರದರ್ಶನಕ್ಕೆ ನಮ್ಮ ವಿರೋಧ ಇಲ್ಲ: ಜಂಟಿ ಕ್ರಿಯಾ ಸಮಿತಿಯು ಕರ್ನಾಟಕ ರಾಜ್ಯ ರೈತ ಸಂಘ, ದಲಿತ ಸಂಘರ್ಷ ಸಮಿತಿ, ಪರಿಸರಕ್ಕಾಗಿ ನಾವು ಮತ್ತು ಭೂಮಿತಾಯಿ ಹೋರಾಟ ಸಮಿತಿಯ ಸದಸ್ಯರನ್ನು ಒಳಗೊಂಡಿದ್ದು, ತಮ್ಮ ವಿರೋಧವು ಸಾಂಸ್ಕೃತಿಕ ವಿನಿಮಯ ಅಥವಾ ಕರ್ನಾಟಕದ ವಿವಿಧ ಭಾಗಗಳ ಕಲೆ ಮತ್ತು ಸಂಪ್ರದಾಯಗಳನ್ನು ಪ್ರದರ್ಶಿಸುವ ಕಾರ್ಯಕ್ರಮಗಳ ವಿರುದ್ಧ ಇಲ್ಲ ಎಂದು ಸಂಘಟನೆಗಳು ಸ್ಪಷ್ಟಪಡಿಸಿವೆ.
ಪರಿಸರಕ್ಕೆ ಹಾನಿ ಮಾಡದೆ ಅಥವಾ ಮೈಸೂರು ಹಬ್ಬದ ಸಾಂಪ್ರದಾಯಿಕ ಗುರುತನ್ನು ಬಾಧಿಸದೆ ದಸರಾ ಸಮಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬಹುದು ಎಂದು ಅವರು ಹೇಳಿದ್ದಾರೆ. ಆದರೆ, ರಾಜ್ಯ ಎದುರಿಸುತ್ತಿರುವ ನೀರಿನ ಕೊರತೆ, ಬರ, ಪರಿಸರ ವಿಕೋಪ ಮತ್ತು ಕೃಷಿ ಪರಿಸ್ಥಿತಿಗಳಲ್ಲಿ ನಗರದಲ್ಲಿ ದೊಡ್ಡ ಪ್ರಮಾಣದ ಕಂಬಳ ಕಾರ್ಯಕ್ರಮ ನಡೆಸುವುದನ್ನು ನಾವು ಬಲವಾಗಿ ವಿರೋಧಿಸುವುದಾಗಿ ತಿಳಿಸಿದ್ದಾರೆ.
ಈಗಾಗಲೇ ರಾಜ್ಯದಲ್ಲಿ 101 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಸುಮಾರು 60 ತಾಲ್ಲೂಕುಗಳು ಈ ಪಟ್ಟಿಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ. ರಾಜ್ಯದ ಹಲವೆಡೆ ರೈತರು ತೀವ್ರ ತೊಂದರೆ ಎದುರಿಸುತ್ತಿದ್ದು, ಕೃಷಿ ಚಟುವಟಿಕೆಗಳು ನಿಂತು ಹೋಗಿ ಬೆಳೆಗಳು ಒಣಗುತ್ತಿವೆ. ಅಲ್ಲದೆ ಮೈಸೂರಿನಲ್ಲಿ ಕುಡಿಯುವ ನೀರಿಗೂ ಜನ ಸಂಕಷ್ಟ ಎದುರಿಸುತ್ತಿದ್ದಾರೆ. ನಗರದ ಒಳಗೆ ಮತ್ತು ಸುತ್ತಮುತ್ತ ಹಲವಾರು ಕೊಳವೆಬಾವಿಗಳು ಬತ್ತಿ ಹೋಗಿವೆ ಎಂದು ವರದಿಯಾಗಿದ್ದು, ಕುಡಿಯುವ ನೀರಿನ ಲಭ್ಯತೆಯ ಬಗ್ಗೆ ಕಳವಳ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ತಾತ್ಕಾಲಿಕ ಕ್ರೀಡಾಕೂಟಕ್ಕಾಗಿ ದೊಡ್ಡ ಪ್ರಮಾಣದ ನೀರನ್ನು ಹಂಚಿಕೆ ಮಾಡುವ ಬದಲು ಸರ್ಕಾರವು ನೀರಿನ ಸಂರಕ್ಷಣೆ ಮತ್ತು ರೈತರು ಹಾಗೂ ಜನಸಾಮಾನ್ಯರ ಅಗತ್ಯತೆಗಳಿಗೆ ಆದ್ಯತೆ ನೀಡಬೇಕು ಎಂದು ಸಂಘಟನೆಗಳು ಒತ್ತಾಯಿಸಿವೆ.
ಪ್ರಸ್ತಾವಿತ ಕಂಬಳ ಆಚರಣೆಗೆ ಕೆಸರು ಗದ್ದೆಯ ಟ್ರ್ಯಾಕ್ ರಚಿಸಲು ಅಗತ್ಯವಿರುವ ನೀರು ಮತ್ತು ಭೂಮಿಯ ಪ್ರಮಾಣದ ಬಗ್ಗೆಯೂ ಕಳವಳ ವ್ಯಕ್ತವಾಗಿದೆ. ಟ್ರ್ಯಾಕ್‌ಗಳನ್ನು ನಿರ್ಮಿಸಲು ಸುಮಾರು 25 ಎಕರೆ ಭೂಮಿಯಲ್ಲಿನ ಗಿಡಮರಗಳನ್ನು ತೆರವುಗೊಳಿಸಬೇಕಾಗುತ್ತದೆ ಎಂದು ಸಂಘಟನೆಗಳು ಹೇಳಿಕೊಂಡಿವೆ. ಕೆಸರು ಟ್ರ್ಯಾಕ್ ತಯಾರಿಸಲು ಲಕ್ಷಾಂತರ ಲೀಟರ್ ನೀರು ಬೇಕಾಗಬಹುದು ಎಂದೂ ಅವರು ಆರೋಪಿಸಿದ್ದಾರೆ.
ಹಲವು ಪ್ರದೇಶಗಳು ನೀರಿನ ಕೊರತೆಯನ್ನು ಎದುರಿಸುತ್ತಿರುವ ಸಮಯದಲ್ಲಿ ಎರಡು ದಿನಗಳ ಕಾರ್ಯಕ್ರಮಕ್ಕಾಗಿ ಇಷ್ಟು ದೊಡ್ಡ ಪ್ರಮಾಣದ ನೀರನ್ನು ಬಳಸುವ ನಿರ್ಧಾರವನ್ನು ಸಂಘಟನೆಗಳು ಪ್ರಶ್ನಿಸಿವೆ. ಈ ಕಾರ್ಯಕ್ರಮಕ್ಕಾಗಿ ಸುಮಾರು 400 ಕೋಣಗಳು ಮತ್ತು ಸಾವಿರಾರು ಜನರನ್ನು ಮೈಸೂರಿಗೆ ಕರೆತರಲಾಗುವುದು ಎಂದು ಅವರು ಹೇಳಿಕೊಂಡಿದ್ದು, ಇದು ಪ್ರಸ್ತಾವಿತ ವ್ಯವಸ್ಥೆಯ ವ್ಯಾಪ್ತಿಯನ್ನು ಹೆಚ್ಚಿಸುತ್ತದೆ ಎಂದಿದ್ದಾರೆ.
ಕಾವೇರಿ ನದಿ ನೀರಿನ ವಿವಾದವನ್ನು ಉಲ್ಲೇಖಿಸಿರುವ ಸಂಘಟನೆಗಳು, ಕರ್ನಾಟಕದಲ್ಲಿ ನೀರಿನ ಲಭ್ಯತೆ ಸೂಕ್ಷ್ಮ ವಿಷಯವಾಗಿರುವುದರಿಂದ ಹಾಗೂ ಈಗಾಗಲೇ ಅಧಿಕಾರಿಗಳು ಕುಡಿಯುವ ನೀರು ಮತ್ತು ಕೃಷಿ ಅಗತ್ಯತೆಗಳ ಬಗ್ಗೆ ಕಾಳಜಿ ವಹಿಸುತ್ತಿರುವ ಸಮಯದಲ್ಲಿ ಈ ರೀತಿ ಅತೀ ಹೆಚ್ಚು ನೀರನ್ನು ಬಳಸಿ ಕಾರ್ಯಕ್ರಮವನ್ನು ಆಯೋಜಿಸುವುದು, ತಪ್ಪು ಸಂದೇಶವನ್ನು ರವಾನಿಸಬಹುದು ಎಂದು ಅಭಿಪ್ರಾಯಪಟ್ಟಿವೆ.
ಲಭ್ಯವಿರುವ ಜಲಸಂಪನ್ಮೂಲಗಳ ಮೇಲೆ ಹೆಚ್ಚುವರಿ ಒತ್ತಡ ಹೇರುವ ಚಟುವಟಿಕೆಗಳನ್ನು ಕೈಗೊಳ್ಳುವ ಬದಲು ನೀರಿನ ಕೊರತೆಯನ್ನು ನಿವಾರಿಸುವುದು ಮತ್ತು ರೈತರನ್ನು ಬೆಂಬಲಿಸುವುದರ ಮೇಲೆ ಸರ್ಕಾರದ ಗಮನ ಇರಬೇಕು ಎಂದು ಸಂಘಟನೆಗಳು ಪ್ರತಿಪಾದಿಸಿವೆ.
ತಮ್ಮ ನಿಲುವನ್ನು ಕರಾವಳಿ ಕರ್ನಾಟಕದ ಸಾಂಸ್ಕೃತಿಕ ಸಂಪ್ರದಾಯಗಳ ವಿರೋಧವೆಂದು ಅರ್ಥೈಸಬಾರದು ಎಂದು ಸಂಘಟನೆಗಳು ಒತ್ತಿ ಹೇಳಿವೆ. ರಾಜ್ಯದ ವಿವಿಧ ಪ್ರದೇಶಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮೈಸೂರು ದಸರಾದಲ್ಲಿ ಮುಂದುವರಿಸಬಹುದು, ಇದರಿಂದ ಜನರು ಕರ್ನಾಟಕದ ವೈವಿಧ್ಯಮಯ ಸಂಪ್ರದಾಯಗಳನ್ನು ಅನುಭವಿಸಬಹುದು. ಆದ್ದರಿಂದ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಹೆಚ್ಚುವರಿ ಒತ್ತಡ ಹೇರದೆ ಕರಾವಳಿ ಕರ್ನಾಟಕದ ಪರಂಪರೆಯನ್ನು ಪ್ರದರ್ಶಿಸುವ ಪರ್ಯಾಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪರಿಗಣಿಸುವಂತೆ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿವೆ.
ಕರ್ನಾಟಕ ಸರ್ಕಾರವು ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಮತ್ತು ಕರಾವಳಿ ಕರ್ನಾಟಕದ ಸಾಂಪ್ರದಾಯಿಕ ಕ್ರೀಡಾ ಸಂಸ್ಕೃತಿಯನ್ನು ವೀಕ್ಷಕರಿಗೆ ಪರಿಚಯಿಸಲು ಮೈಸೂರು ದಸರಾ ಸಮಯದಲ್ಲಿ ಕಂಬಳ ನಡೆಸಲು ಪ್ರಸ್ತಾಪಿಸಿತ್ತು. ಕಂಬಳವು ಕರ್ನಾಟಕದ ಕರಾವಳಿ ಪ್ರದೇಶಕ್ಕೆ ಸಂಬಂಧಿಸಿದ ಸಾಂಪ್ರದಾಯಿಕ ಕೋಣಗಳ ಓಟವಾಗಿರುವುದರಿಂದ, ಜನಪ್ರೀಯ ಈ ಕಾರ್ಯಕ್ರಮವನ್ನು ಮೈಸೂರಿನಲ್ಲಿ ನಡೆಸುವುದು ದಸರಾದ ಸಾಂಸ್ಕೃತಿಕ ಹಬ್ಬದ ಮೆರುಗನ್ನು ಹೆಚ್ಚೆಚ್ಚು ಪ್ರವಾಸಿಗರನ್ನು ಆಕರ್ಷಿಸಬಹುದು. ಅಲ್ಲದೆ, ಹೆಚ್ಚುವರಿ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಕೀಡಾ ಆಧಾರಿತ ಸಾಂಸ್ಕೃತಿಕ ಕಲೆಯನ್ನು ಪ್ರೋತ್ಸಾಹಿಸುವ ಪ್ರಯತ್ನದ ಭಾಗವಾಗಿ ಸರ್ಕಾರ ಈ ನಿರ್ಧಾರಕ್ಕೆ ಬಂದಿತ್ತು.
ದಸರಾ ಸಮಯದಲ್ಲಿ ಕಂಬಳ ನಡೆಸುವ ಪ್ರಸ್ತಾವನೆಯು ಈಗ ಸರ್ಕಾರದ ಪ್ರವಾಸೋದ್ಯಮ ಉದ್ದೇಶಗಳು ಮತ್ತು ಪರಿಸರ ಹಾಗೂ ರೈತ ಸಂಘಟನೆಗಳು ಎತ್ತಿರುವ ಕಳವಳಗಳ ನಡುವಿನ ಚರ್ಚೆಯ ಕೇಂದ್ರಬಿಂದುವಾಗಿದೆ.

